– ಅಡ್ಡ ಮತದಾನಕ್ಕೆ ಬಿಜೆಪಿ ಆಂತರಿಕ ಕಲಹವೇ ಕಾರಣ
ಬೆಂಗಳೂರು: ರಾಜ್ಯಸಭೆ ಚುನಾವಣೆಯ ಅಡ್ಡ ಮತದಾನ(Cross Voting) ವಿಚಾರ ಬಿಜೆಪಿಯಲ್ಲಿ(BJP) ಹೊಸ ಚರ್ಚೆಗೆ ಕಾರಣವಾಗಿದೆ. ಈ ಮಧ್ಯೆ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್, (S T Somashekhar) ಆರ್. ಅಶೋಕ್ ಅವರು(R Ashok) ವಿಜಯೇಂದ್ರ ಬಣದ ಅಭ್ಯರ್ಥಿ ಸೋಲಿಸಬೇಕೆಂದು, ವಿಜಯೇಂದ್ರ (BY Vijayendra)ಅವರು ಅಶೋಕ್ ಬಣದ ಅಭ್ಯರ್ಥಿ ಸೋಲಿಸಬೇಕೆಂದು ಅಡ್ಡ ಮತದಾನ ಮಾಡಿಸಿರಬೇಕು ಎಂದು ಹೇಳಿಕೆ ನೀಡಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಎಸ್.ಟಿ. ಸೋಮಶೇಖರ್, ಅಡ್ಡ ಮತದಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ವಿಜಯೇಂದ್ರ ಮತ್ತು ಅಶೋಕ್ ಇಬ್ಬರೂ ಮೊದಲು ಧರ್ಮಸ್ಥಳಕ್ಕೆ ಹೋಗಿ ಪ್ರಮಾಣ ಮಾಡಲಿ. ಬೇರೆ ಯಾರೂ ಪ್ರಮಾಣ ಮಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ನಮ್ಮನ್ನು ಅಮಾನತು ಮಾಡಿ ಗೂಬೆ ಕೂರಿಸಲು ಹೊರಟಿದ್ದಾರೆ. ಅಪಪ್ರಚಾರದ ಮೂಲಕ ನಮ್ಮ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಚುನಾವಣೆಗೆ ಮುನ್ನ ಪಕ್ಷದ ನಾಯಕರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಹೇಳಿದ ಅವರು, “63 ಶಾಸಕರನ್ನು ಕರೆದು ಮಾತನಾಡಿ ಬಿಗಿ ಮಾಡಬೇಕಿತ್ತು. ಕಾಂಗ್ರೆಸ್‌ನಲ್ಲಿ ಶಾಸಕರಿಗೆ ತರಬೇತಿ ನೀಡಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿತ್ತು. ಆದರೆ ಬಿಜೆಪಿಯಲ್ಲಿ ಅಂತಹ ಪ್ರಯತ್ನವೇ ಆಗಿಲ್ಲ. ಬಿಜೆಪಿ ಶಾಸಕರಿಗೆ ಸರಿಯಾಗಿ ವಿಪ್ ಕೂಡ ಜಾರಿ ಮಾಡಲಿಲ್ಲ. ಬೆಳಗ್ಗೆ 9 ಗಂಟೆಗೆ ಚುನಾವಣೆ ಇದ್ದಾಗ 8 ಗಂಟೆಗೆ ಮಾಹಿತಿ ನೀಡಿದರು. ಪಕ್ಷದ ಆಂತರಿಕ ಕಲಹವೇ ಅಡ್ಡ ಮತದಾನಕ್ಕೆ ಕಾರಣ ಎಂದು ಸೋಮಶೇಖರ್ ಆರೋಪಿಸಿದ್ದಾರೆ.ಇದನ್ನೂ ಓದಿ: ವಾರ್ತಾ ಇಲಾಖೆ ಆಯುಕ್ತರಾಗಿ ಡಿಐಜಿ ಎಂ.ಎನ್.ಅನುಚೇತ್ ಅಧಿಕಾರ ಸ್ವೀಕಾರ
ಕಾಂಗ್ರೆಸ್ ಸೇರ್ಪಡೆ ಬಗ್ಗೆ ಏನಂದ್ರು?
ಕಾಂಗ್ರೆಸ್ ಸೇರ್ಪಡೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 2028ರಲ್ಲಿ ಚುನಾವಣೆ ಇದೆ. ಈಗ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಮುಂದೆ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಿ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಶೋಭಾ ಕರಂದ್ಲಾಜೆ, ಈಶ್ವರಪ್ಪ ವಿರುದ್ಧ ವಾಗ್ದಾಳಿ
ಅಡ್ಡ ಮತದಾನ ಮಾಡಿದವರು ರಾಜೀನಾಮೆ ನೀಡಿ ಪಕ್ಷ ತೊರೆಯಲಿ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದ ಎಸ್.ಟಿ. ಸೋಮಶೇಖರ್, “ಬಿಜೆಪಿಯಲ್ಲಿ ಇಷ್ಟೆಲ್ಲ ಅಲ್ಲೋಲಕಲ್ಲೋಲಕ್ಕೆ ಶೋಭಾ ಕರಂದ್ಲಾಜೆಯೇ ಕಾರಣ. ಮೊದಲು ಅವರನ್ನು ಧರ್ಮಸ್ಥಳದಲ್ಲಿ ನಿಲ್ಲಿಸಲಿ. ಅವರು ನಮಗೆ ಹೇಳುವ ಸ್ಥಿತಿಯಲ್ಲಿಲ್ಲ ಎಂದು ತಿರುಗೇಟು ನೀಡಿದರು.
ನಮಗೆ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಿದೆ. ಅದಕ್ಕಾಗಿ ನಾವು ಮತ ಹಾಕಿದ್ದೇವೆ ಎಂದು ಈಗಾಗಲೇ ಹೇಳಿದ್ದೇವೆ. ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂಬುದನ್ನು ಪಕ್ಷವೇ ಪತ್ತೆ ಹಚ್ಚಲಿ ಎಂದರು. ಇದನ್ನೂ ಓದಿ: Tungabhadra Dam | ಮೂರು ರಾಜ್ಯಗಳ ಸಿಎಂ ಸಮ್ಮುಖದಲ್ಲಿ 33 ಕ್ರೆಸ್ಟ್ ಗೇಟ್ ಲೋಕಾರ್ಪಣೆ
ಬಿಜೆಪಿ ಹಿಂದೆ ಶಾಸಕರನ್ನು ಖರೀದಿಸಿದೆ ಎಂಬ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಅವರಿಗೆ ನಾಲಿಗೆ ಸರಿಯಿಲ್ಲ. ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಅವರ ವಯಸ್ಸಿಗೆ ಗೌರವ ಕೊಡುತ್ತೇವೆ. ಅವರು ನಮ್ಮಿಂದ ಮತ್ರಿಯಾದವರು. ನಂತರ ಅವರ ತಪ್ಪಿನಿಂದ ಸ್ಥಾನ ತಪ್ಪಿತು ಎಂದು ಕಿಡಿಕಾರಿದರು.
