– ಉತ್ತರಾಖಂಡದಿಂದ ದಿನೇಶ್ ಆರ್ಯ ಅಭ್ಯರ್ಥಿ
ನವದೆಹಲಿ: ಕೆಲ ದಿನಗಳ ಹಿಂದೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದ ಹುದ್ದೆ ಹಾಗೂ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೋಯಲ್ ಮಲ್ಲಿಕ್ (Koel Mallick) ಅವರಿಗೆ ಬಿಜೆಪಿಯು ಪಶ್ಚಿಮ ಬಂಗಾಳದ ರಾಜ್ಯಸಭಾ ಉಪಚುನಾವಣೆ ಟಿಕೆಟ್ ಘೋಷಣೆ ಮಾಡಿದೆ. ಜೊತೆಗೆ ಉತ್ತರಾಖಂಡದಿಂದ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ದಿನೇಶ್ ಆರ್ಯ ಅವರ ಹೆಸರನ್ನ ಇಂದು ಘೋಷಣೆ ಮಾಡಿದೆ.
ಅಭ್ಯರ್ಥಿಗಳ ಹೆಸರುಗಳಿಗೆ ಬಿಜೆಪಿಯ (BJP) ಕೇಂದ್ರ ಚುನಾವಣಾ ಸಮಿತಿಯು ಅನುಮೋದನೆ ನೀಡಿದೆ. ಉತ್ತರ ಪ್ರದೇಶ ಹಾಗೂ ಉತ್ತರಾಖಂಡದ 11 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಹಾಗೂ ಪಶ್ಚಿಮ ಬಂಗಾಳದ (West Bengal) ಒಂದು ಸ್ಥಾನಕ್ಕೆ ಇದೇ ಅಕ್ಟೋಬರ್ 16 ರಂದು ಉಪಚುನಾವಣೆ ನಡೆಯಲಿದೆ. ಮತದಾನವು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದ್ದು, ಅದೇ ದಿನ ಅದೇ ದಿನ ಮತ ಎಣಿಕೆ ನಡೆಯಲಿದೆ.

ಉತ್ತರಾಖಂಡದ ಒಂದು ರಾಜ್ಯಸಭಾ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ, ಏಕೆಂದರೆ ಬಿಜೆಪಿಯ ನರೇಶ್ ಬನ್ಸಾಲ್ ಅವರು ಈ ವರ್ಷದ ನವೆಂಬರ್‌ನಲ್ಲಿ ಮೇಲ್ಮನೆಯಿಂದ ನಿವೃತ್ತರಾಗಲಿದ್ದಾರೆ.
ಬಂಗಾಳದಲ್ಲಿ ರಾಜ್ಯಸಭಾ ಉಪಚುನಾವಣೆ ಏಕೆ?
ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ದ್ವೈವಾರ್ಷಿಕ ಚುನಾವಣೆಗಳ ಜೊತೆಗೆ ಪಶ್ಚಿಮ ಬಂಗಾಳದ 1 ರಾಜ್ಯಸಭಾ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ರುಕ್ಮಿಣಿ ಮಲ್ಲಿಕ್ (ಅಲಿಯಾಸ್ ಕೋಯಲ್ ಮಲ್ಲಿಕ್) ಅವರು ಟಿಎಂಸಿ ಯಿಂದ ರಾಜ್ಯಸಭಾ ಸಂಸದರಾಗಿದ್ದರು, 2032ರ ಏಪ್ರಿಲ್ 2ರ ವರೆಗೆ ಅವರ ಅಧಿಕಾರವಧಿ ಇತ್ತು. ಆದ್ರೆ 2026ರ ಜುಲೈ 16 ರಂದು ರಾಜ್ಯಸಭೆಗೆ ರಾಜೀನಾಮೆ ನೀಡಿದ ನಂತರ ಈ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.

ಕೋಯಲ್ ಮಲ್ಲಿಕ್ ಜುಲೈ 2026 ರಲ್ಲಿ ರಾಜೀನಾಮೆ ನೀಡಿದ 4ನೇ ರಾಜ್ಯಸಭಾ ಸಂಸದರಾಗಿದ್ದರು. ಇದಕ್ಕೂ ಮೊದಲು ಸುಖೇಂದು ಶೇಖರ್ ರೇ, ಸುಶ್ಮಿತಾ ದೇವ್ ಮತ್ತು ಪ್ರಕಾಶ್ ಚಿಕ್ ಬಾರೈಕ್ ಕೂಡ ಮೇಲ್ಮನೆಯಿಂದ ರಾಜೀನಾಮೆ ನೀಡಿದ್ದರು. ಈ ಮೂವರು ನಂತರ ಬಿಜೆಪಿಗೆ ಸೇರ್ಪಡೆಗೊಂಡು ಮರುಚುನಾಯಿತರಾಗಿದ್ದರು.

