Bengaluru CityDistrictsKarnatakaLatestLeading NewsMain Post

ನಿಮ್ದು ದುರ್ಯೋಧನನ ರೀತಿ ಕೆಟ್ಟ ಹಠ: ಸಿದ್ದು, ಡಿಕೆಶಿಗೆ ಅಶೋಕ್ ಗುದ್ದು

ಬೆಂಗಳೂರು: ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮದು ಮಹಾಭಾರತದ ದುರ್ಯೋಧನನ ರೀತಿಯ ಕೆಟ್ಟ ಹಠ. ಇದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಕಿಡಿಕಾರಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್. ಕಂದಾಯ ಸಚಿವ ಆರ್. ಅಶೋಕ್ ಸೇರಿದಂತೆ ಬಿಜೆಪಿಯ ಹಲವಾರು ನಾಯಕರು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದಾರೆ.

ಬೊಮ್ಮಾಯಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ, ಕರ್ನಾಟಕದ ನೆಲ, ಜಲ ಹಾಗೂ ಜನರ ಬಗ್ಗೆ ಯಾವಾಗಲೂ ಕೂಡ ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ಕೆಲಸ ಮಾಡಿದ್ದಾವೆ. ಮೇಕೆದಾಟು ವಿಚಾರದಲ್ಲಿ ಕೂಡಾ ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಯನ್ನು ಸಾಕಾರಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಇದನ್ನೂ ಓದಿ: ಪಾದಯಾತ್ರೆ ತಡೆಯಲು ಯಾರಿಗೆ ಕಾಯುತ್ತಿದ್ದೀರಿ – ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ

ಈಗ ಕೋವಿಡ್ ಮಹಾಮಾರಿ ಮೂರನೆಯ ಅಲೆಯು ಕರ್ನಾಟಕ ರಾಜ್ಯಕ್ಕೆ ಹಾಗೂ ವಿಶೇಷವಾಗಿ ಬೆಂಗಳೂರಿಗೆ ಆವರಿಸಿಕೊಂಡಿದೆ. ಈ ಸಂದರ್ಭದಲ್ಲಿ ಕರ್ನಾಟಕ ಮತ್ತು ಬೆಂಗಳೂರು ಜನರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಪ್ರಥಮ ಕರ್ತವ್ಯ ಆಗಿದೆ. ಹೀಗಾಗಿ ಈ ಕರ್ತವ್ಯವನ್ನು ನಿರ್ವಹಿಸಲು ಬದ್ಧತೆ ತೋರಿಸಬೇಕಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಕಾನೂನನ್ನು ಉಲ್ಲಂಘನೆ ಮಾಡದೇ ಎಲ್ಲರ ಸಹಕಾರವನ್ನು ಬಯಸುತ್ತೇನೆ. ಈ ಸಾಂಕ್ರಾಮಿಕ ರೋಗವನ್ನು ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ನಿಯಂತ್ರಿಸಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲು ಸರಕಾರ ತೀರ್ಮಾನಿಸಿದೆ ಎಂದು ಬರೆದುಕೊಂಡಿದ್ದಾರೆ.

ಆರ್. ಅಶೋಕ್ ಅವರು, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮದು ಮಹಾಭಾರತದ ದುರ್ಯೋಧನನ ರೀತಿಯ ಕೆಟ್ಟ ಹಠ. ಇದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ದುರ್ಯೋಧನನಿಗೆ ಆದಂತೆ, ನೀವೂ, ನಿಮ್ಮ ಕಾಂಗ್ರೆಸ್ ಪಕ್ಷ ನಿರ್ನಾಮವಾಗುತ್ತದೆ. ನಮಗೆ ವಿರೋಧ ಪಕ್ಷವೂ ಇರುವುದಿಲ್ಲ. ದಯವಿಟ್ಟು ಹಠ ಬಿಡಿ ಎಂದಿದ್ದಾರೆ. ಇದನ್ನೂ ಓದಿ: ಸರ್ಕಾರ ಯಾವುದೇ ಆದೇಶ ನೀಡಲಿ ಪಾದಯಾತ್ರೆ ನಿಲ್ಲಲ್ಲ: ಡಿ.ಕೆ ಸುರೇಶ್

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರೇ, ಹಠ ಪ್ರತಿಯೊಬ್ಬರಿಗೂ ಬೇಕು. ಆದರೆ ನಿಮ್ಮದು ಮಹಾಭಾರತದ ದುರ್ಯೋಧನನ ರೀತಿಯ ಹಠ. ಇದು ನಿಮಗೂ, ನಾಡಿಗೂ ಒಳ್ಳೆಯದಲ್ಲ. ದುರ್ಯೋಧನನಂತೆ, ನೀವೂ ಮತ್ತು ನಿಮ್ಮ ಕಾಂಗ್ರೆಸ್ ಸರ್ವನಾಶವಾಗಲು ಬಯಸುತ್ತೀರಾ? ಯೋಚಿಸಿ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಮತ್ತೊಂದೆಡೆ ನಳಿನ್ ಕುಮಾರ್ ಅವರು, ಕೋವಿಡ್ ಹರಡುವ ಮೂಲಕ ಜನರ ಪ್ರಾಣ ಬಲಿ ಪಡೆಯಲು ಹೊರಟಿರುವ ಕಾಂಗ್ರೆಸ್ಸಿಗರ ಪಾದಯಾತ್ರೆ ಜನ ವಿರೋಧಿಯಾಗಿದೆ. ನ್ಯಾಯಾಂಗದ ಬಗ್ಗೆ ವಿಶ್ವಾಸ ಇದ್ದರೆ ಜನರ ಮೇಲೆ ಕಾಳಜಿ ಇಟ್ಟು ಪಾದಯಾತ್ರೆ ರದ್ದು ಮಾಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರ ನೆಲ, ಜಲದ ವಿಷಯದಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಆದೇಶಕ್ಕೆ ಡಿಕೆಶಿ ಮೌನ

ಮೇಕೆದಾಟು ಪಾದಯಾತ್ರೆಯನ್ನು ತಕ್ಷಣ ನಿಲ್ಲಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಮೇಕೆದಾಟು ಪಾದಯಾತ್ರೆಗೆ ಅನುಮತಿ ಕೊಟ್ಟಿಲ್ಲದಿದ್ದರೆ ತಡೆಯಲು ಯಾರಿಗಾಗಿ ಕಾಯುತ್ತಿದ್ದೀರಿ ಎಂದು ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿ ಛೀಮಾರಿ ಹಾಕಿತ್ತು. ಈ ಬೆನ್ನಲ್ಲೇ ರಾಜ್ಯ ಸರ್ಕಾರ ಬುಧವಾರ ಕಾಂಗ್ರೆಸ್ ನಡೆಸುತ್ತಿದ್ದ ಮೇಕೆದಾಟು ಪಾದಯಾತ್ರೆಗೆ ನಿರ್ಬಂಧ ಹೇರಿದೆ.

Leave a Reply

Your email address will not be published.

Back to top button