ಏ.. ನಿಂಗ್ ಗೊತ್ತಾ? ಈಗೆಲ್ಲ ಹಾರ್ಟ್ ಆಟ್ಯಾಕ್ ಆಗ್ತಿರೋದಕ್ಕೆ ಆ ಇಂಜೆಕ್ಷನ್ನೇ ಕಾರಣ. ಅದೆಂತ ಒತ್ತಾಯ ಮಾಡಿ ಎಲ್ಲರಿಗೂ ಕೊಟ್ರೋ ಏನೋ.. ಈ ರೀತಿಯ ವದಂತಿಗಳು ಭಾರತದಲ್ಲಿ ಈ ಹಿಂದೆ ಕೇಳಿ ಬಂದಿತ್ತು. ಈಗಲೂ ಅದೇ ರೀತಿಯ ಆರೋಪ ಜೀವ ಉಳಿಸುವ ಮತ್ತೊಂದು ಔಷಧದ ಮೇಲೆ ಕೇಳಿ ಬರುತ್ತಿದೆ. ಆದರೆ ಅದು ನಿಜವಲ್ಲ. ಹಾಗಾದ್ರೆ ಆ ಔಷಧ ಯಾವುದು? ಯಾಕೆ ಆ ಔಷಧಿಯ ಮೇಲೆ ಇಂತಹ ದೊಡ್ಡ ಆರೋಪ? ಈ ಆರೋಪ ಕೇಳಿ ಬಂದಿದ್ದು ಎಲ್ಲಿ ಎಂದು ಈ ಬರಹದಲ್ಲಿ ವಿವರಿಸಲಾಗಿದೆ.
ಕೇಂದ್ರ ಸರ್ಕಾರ ಆರಂಭಿಸಿದ ಕ್ಯಾನ್ಸರ್ ತಡೆಗಟ್ಟುವ HPV ಲಸಿಕೆ ಮೇಲೆ ಈ ಆರೋಪ ಕೇಳಿ ಬಂದಿದೆ. ಹರಿಯಾಣದಲ್ಲಿ ಇಂತಹ ಊಹಾಪೋಹಗಳು ಅತಿ ಹೆಚ್ಚಾಗಿ ಹಬ್ಬಿದೆ. ಕರ್ನಾಟಕದಲ್ಲೂ ಲಸಿಕೆ ಮೇಲೆ ಇಂತಹ ಆರೋಪಗಳು ಕೇಳಿಬಂದಿವೆ. ಇದು ಲಸಿಕಾ ಅಭಿಯಾನದ ಭಾರೀ ಹಿನ್ನಡೆಗೆ ಕಾರಣವಾಗಿದೆ.
ಏನಿದು HPV ಲಸಿಕೆ?
Human Papilloma virus ಒಂದು ವೈರಸ್. ಇದರಲ್ಲಿ 200ಕ್ಕೂ ಹೆಚ್ಚು ವಿಧಗಳು ಇವೆ. ಕೆಲವು ಗರ್ಭಕಂಠದ ಕ್ಯಾನ್ಸರ್, ಗುದದ್ವಾರ, ಬಾಯಿ-ಗಂಟಲು, ಜನನಾಂಗದ ಕ್ಯಾನ್ಸರ್‌ಗೆ ಕಾರಣ ಆಗುತ್ತದೆ. ಲೈಂಗಿಕ ಸಂಪರ್ಕ, ಚರ್ಮದ ಸಂಪರ್ಕದಿಂದ ಇದು ಹರಡುತ್ತದೆ. ಈ ಲಸಿಕೆ ದೇಹದಲ್ಲಿ HPV ವೈರಸ್ ವಿರುದ್ಧ ಹೋರಾಡುವ ಶಕ್ತಿಯನ್ನು ಹುಟ್ಟುಹಾಕುತ್ತದೆ. ಈ ವೈರಸ್ ದೇಹಕ್ಕೆ ಬಂದ್ರೂ ಸೋಂಕು ಆಗದಂತೆ ತಡೆಯುತ್ತದೆ.

ಯಾರಿಗೆ ಈ ಲಸಿಕೆ?
9-14 ವರ್ಷದವರಿಗೆ 2 ಡೋಸ್ 6-12 ತಿಂಗಳ ಅವಧಿಯಲ್ಲಿ ನೀಡಲಾಗುತ್ತದೆ. 15-26 ವರ್ಷದವರಿಗೆ 3 ಡೋಸ್ 0, 1-2, 6 ತಿಂಗಳ ಅಂತರದಲ್ಲಿ ನೀಡಲಾಗುತ್ತದೆ. ವೈವಾಹಿಕ ಜೀವನ ಶುರುವಾಗುವ ಮೊದಲೇ, ಅಂದ್ರೆ 9-14 ವಯಸ್ಸಲ್ಲಿ ಲಸಿಕೆ ಹಾಕಿದ್ರೆ ಸಂಪೂರ್ಣ ರಕ್ಷಣೆ ಸಿಗಲಿದೆ. ಈಗಾಗಲೇ ಬಂದಿರೋ HPV ಸೋಂಕು ಅಥವಾ ಕ್ಯಾನ್ಸರ್‌ನ್ನು ಈ ಲಸಿಕೆ ಗುಣಪಡಿಸಲ್ಲ.
ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ ಮಹಿಳೆಯರನ್ನು ಭಾದಿಸುತ್ತಿರುವ ಎರಡನೆಯ ದೊಡ್ಡ ಕ್ಯಾನ್ಸರ್ ಆಗಿದೆ. ಲೈಂಗಿಕವಾಗಿ ಸಕ್ರಿಯವಾಗಿರುವವರಿಗೆಲ್ಲ ಒಂದಲ್ಲ ಒಂದು ಸಂದರ್ಭಗಳಲ್ಲಿ ಈ ಸೋಂಕು ಕಾಡಬಹುದು. ಆದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದಾಗ ಈ ಹೆಚ್ಪಿವಿ ಸೋಂಕು ಯಾವುದೇ ತೊಂದರೆಯನ್ನುಂಟು ಮಾಡುವುದಿಲ್ಲ. ಹೆಣ್ಣುಮಕ್ಕಳಿಗೆ ಲಸಿಕೆ ನೀಡುವುದರಿಂದ ಗಂಡುಮಕ್ಕಳಿಗೆ ಹೆಚ್.ಪಿ.ವಿ ಸೋಂಕು ಹರಡುವಿಕೆಯನ್ನು ಶೇ. 80ರಷ್ಟು ತಡೆಯಬಹುದಾಗಿದೆ.
ಹರಿಯಾಣದಲ್ಲಿಲಸಿಕೆ ಅಭಿಯಾನಕ್ಕೆ ಹಿನ್ನೆಡೆ ಯಾಕೆ?
ತಪ್ಪು ಕಲ್ಪನೆ: ಅನೇಕ ಪೋಷಕರು, ವಿಶೇಷವಾಗಿ ಗ್ರಾಮೀಣ ಮತ್ತು ಸಂಪ್ರದಾಯವಾದಿಗಳಿರುವ ಪ್ರದೇಶಗಳಲ್ಲಿ HPV ಲಸಿಕಾ ಅಭಿಯಾನಕ್ಕೆ ಹಿನ್ನಡೆಯಾಗುತ್ತಿದೆ. ಈ ವೈರಸ್ ಲೈಂಗಿಕ ಸಂಪರ್ಕದಿಂದ ಹರಡುವುದರಿಂದ ಈ ಲಸಿಕೆಯು ವಿವಾಹಪೂರ್ವ ಲೈಂಗಿಕ ಚಟುವಟಿಕೆಗೆ ಉತ್ತೇಜನ ನೀಡುತ್ತದೆ ಎಂಬ ಕಲ್ಪನೆ ಜನರಲ್ಲಿದೆ. ಇದು ಕುಟುಂಬದ ಗೌರವಕ್ಕೆ ಧಕ್ಕೆ ಎಂಬುದು ಅನೇಕರ ವಾದ.
ಬಂಜೆತನದ ಭಯ: HPV ಲಸಿಕೆ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟುಮಾಡಬಹುದು, ನಿರ್ದಿಷ್ಟವಾಗಿ ಚಿಕ್ಕ ಹುಡುಗಿಯರ ಭವಿಷ್ಯದಲ್ಲಿ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ವದಂತಿ ಇದೆ.

ಅಡ್ಡ ಪರಿಣಾಮದ ಭೀತಿ: ಹೆಚ್ಚು ಸಾಂಪ್ರದಾಯಿಕ ರೋಗ ನಿರೋಧಕಗಳಿಗೆ ಹೋಲಿಸಿದರೆ ಹೊಸ ಅಥವಾ ಪರಿಚಯವಿಲ್ಲದ ಲಸಿಕೆಗಳ ಮೇಲೆ ಅಪನಂಬಿಕೆ ಸಹಜವಾಗಿದೆ. ಅಡ್ಡಪರಿಣಾಮಗಳು ಮತ್ತು ದೀರ್ಘಕಾಲೀನ ಪರಿಣಾಮಕಾರಿತ್ವದ ಬಗ್ಗೆ ಪೋಷಕರು ಕಳವಳ ವ್ಯಕ್ತಪಡಿಸುತ್ತಿರುವುದು ಸಹ ಲಸಿಕಾ ಅಭಿಯಾನದ ಹಿನ್ನೆಡೆಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಲಸಿಕೆಯ ಬಗ್ಗೆ ಹರಡುತ್ತಿರುವ ತಪ್ಪು ಮಾಹಿತಿಯಿಂದಾಗಿ ಮಹತ್ವದ ಯೋಜನೆಯಿಂದ ಮಹಿಳೆಯರು ದೂರು ಉಳಿಯುತ್ತಿರುವುದು ಕಂಡು ಬಂದಿದ್ದು, ಇದು ಗುರಿಮುಟ್ಟುವ ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ಭಯ ಹೋಗಲಾಡಿಸಲು ಹರಿಯಾಣ ಸರ್ಕಾರವು U-WIN ಪೋರ್ಟಲ್‌ನಲ್ಲಿ ಶಾಲೆಗಳು, ಆಶಾ ಕಾರ್ಯಕರ್ತರು ಮತ್ತು ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ, ಜನಸಂಪರ್ಕ ಮತ್ತು ಸಾಮೂಹಿಕ ಜಾಗೃತಿ ಕಾರ್ಯಕ್ರಮ ಮಾಡುತ್ತಿವೆ. ಲಸಿಕೆಯನ್ನು 14 ವರ್ಷ ವಯಸ್ಸಿನ ಅರ್ಹ ಬಾಲಕಿಯರಿಗೆ ಉಚಿತವಾಗಿ ನೀಡಲಾಗುತ್ತಿದೆ.
ಲಸಿಕಾ ಅಭಿಯಾನದಲ್ಲಿ ಚೇತರಿಕೆ
ಹರಿಯಾಣದಲ್ಲಿ ಮೂರು ತಿಂಗಳ ವಿಶೇಷ ಅಭಿಯಾನದ ಮೊದಲ ಎರಡು ತಿಂಗಳಲ್ಲಿ ಕೇವಲ 7% ಯುವತಿಯರಿಗೆ ಮಾತ್ರ ಲಸಿಕೆ ಹಾಕುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ. ಮೇ 4, 2026ರ ಹೊತ್ತಿಗೆ ಇದು 12% ಏರಿಕೆ ಕಂಡಿದೆ. ರಾಜ್ಯದಲ್ಲಿ ಸುಮಾರು 2.26 ಲಕ್ಷ ಬಾಲಕಿಯರಿಗೆ ಲಸಿಕೆ ಹಾಕುವ ಗುರಿಯನ್ನು ಸರ್ಕಾರ ಹೊಂದಿದೆ. ಇಲ್ಲಿಯವರೆಗೂ 27,227 ( 14–15 ವರ್ಷ ವಯಸ್ಸಿನ) ಬಾಲಕಿಯರಿಗೆ ಲಸಿಕೆ ಹಾಕಲಾಗಿದೆ.
ವೈದ್ಯರು ಹೇಳೋದೇನು?
ಮಹಿಳೆಯರ ಭವಿಷ್ಯದ ಆರೋಗ್ಯ ದೃಷ್ಟಿಯಿಂದ 14 ವರ್ಷದ ಹೆಣ್ಣು ಮಕ್ಕಳಿಗೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಈ ಲಸಿಕೆ ಹಾಕಲಾಗುತ್ತಿದೆ. ಇದರಿಂದ ಶೇ.90ರಷ್ಟು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದು. ಕೇಂದ್ರ ಸರ್ಕಾರ ದೇಶಾದ್ಯಂತ ಒಂದು ಕೋಟಿಗಿಂತ ಅಧಿಕ ಬಾಲಕಿಯರಿಗೆ ಲಸಿಕೆ ಹಾಕುವ ಗುರಿ ಹೊಂದಿದೆ. ಕ್ಯಾನ್ಸರ್ ಎಂಬ ಮಾರಿ ಭವಿಷ್ಯದಲ್ಲಿನಮ್ಮ ಹೆಣ್ಣು ಮಕ್ಕಳ ಜೀವ ಕಿತ್ತುಕೊಳ್ಳುವ ಮುನ್ನ ಪಾಲಕರು ಎಚ್ಚೆತ್ತುಕೊಂಡು ಲಸಿಕೆ ಹಾಕಿಸಬೇಕು ಎನ್ನುತ್ತಾರೆ ವೈದ್ಯರು.
ಅಭಿಯಾನಕ್ಕೆ ರಜೆ ಅಡ್ಡಿ
ಶಾಲೆಗಳು ಆರಂಭವಾಗಿದ್ದರೆ ಆಸ್ಪತ್ರೆ ಸಿಬ್ಬಂದಿ ಆಯಾ ಶಾಲೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿ ಲಸಿಕೆ ಹಾಕಿಸುತ್ತಿದ್ದರು. ಆದರೆ ಸದ್ಯ ಪ್ರೌಢಶಾಲೆಗಳು ರಜೆ ಇರುವ ಕಾರಣ ಆರೋಗ್ಯ ಇಲಾಖೆ ಅಂದುಕೊಂಡಷ್ಟು ಗುರಿಮುಟ್ಟಲು ಆಗುತ್ತಿಲ್ಲ. ಪಾಲಕರಿಗೆ ಈ ಲಸಿಕೆ ಬಗ್ಗೆ ಹೆಚ್ಚು ಅರಿವು ಇಲ್ಲದ ಕಾರಣ ಮಕ್ಕಳಿಗೆ ಲಸಿಕೆ ಹಾಕಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಲಸಿಕಾ ಕಾರ್ಯ ಮಂದಗತಿಯಲ್ಲಿ ಸಾಗಿದೆ.

