ರಾಮನಗರ: ಬಿಡದಿ ಟೌನ್‌ಶಿಪ್ (Bidadi Township) ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ರೈತರು (Farmers) ನಡೆಸುತ್ತಿರುವ ಪ್ರತಿಭಟನೆ ಸದ್ಯ 485ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಭೈರಮಂಗಲ ಗ್ರಾಮದಲ್ಲಿ ನಡೆಯುತ್ತಿರುವ ರೈತರ ಈ ಸುದೀರ್ಘ ಹೋರಾಟಕ್ಕೆ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ (N. Santosh Hegde) ಭಾಗವಹಿಸಿ, ತಮ್ಮ ಪೂರ್ಣ ಬೆಂಬಲವನ್ನು ಘೋಷಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ರೈತರ ಅಹವಾಲು ಮತ್ತು ಸಮಸ್ಯೆಗಳನ್ನು ಆಲಿಸಿದ ಸಂತೋಷ್ ಹೆಗ್ಡೆಗೆ, ತಮ್ಮ ಭೂಮಿಯನ್ನು ಉಳಿಸಿಕೊಡುವಂತೆ ರೈತರು ಮನವಿ ಮಾಡಿದರು. ಈ ವೇಳೆ ಸಂತೋಷ್ ಹೆಗ್ಡೆ ಮಾತನಾಡಿ, ರೈತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿರುವುದನ್ನು ನೋಡಿ ನನಗೆ ನೋವು ತಡೆಯಲಾಗದೆ ಇಲ್ಲಿಗೆ ಬಂದಿದ್ದೇನೆ. ವ್ಯವಸಾಯ ಇಲ್ಲದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಜಗತ್ತಿಗೆ ಎಷ್ಟೇ ದೊಡ್ಡ ಎಐ ತಂತ್ರಜ್ಞಾನ ಬಂದರೂ, ಕೃಷಿ ಮಾಡದಿದ್ದರೆ ಹೊಟ್ಟೆ ತುಂಬುವುದಿಲ್ಲ. ಕೃಷಿ ಕ್ಷೀಣಿಸಿದರೆ ಭವಿಷ್ಯದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಾಗಲಿದೆ ಎಂದರು. ಇದನ್ನೂ ಓದಿ: ವಸತಿ ಶಾಲೆಯಲ್ಲಿ ಬಾಲಕ ಅನುಮಾನಾಸ್ಪದ ಸಾವು ಕೇಸ್ – ದೈಹಿಕ ಶಿಕ್ಷಕ ಪೊಲೀಸರ ವಶಕ್ಕೆ
ಪಟ್ಟಣಗಳಲ್ಲಿರುವ ಕೆರೆಗಳನ್ನು ಮುಚ್ಚಿ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸರ್ಕಾರಕ್ಕೆ ವಿವೇಚನೆ ಇರಬೇಕು. ನಾವು ಬದುಕಬೇಕಾದರೆ ಅಭಿವೃದ್ಧಿ ಬೇಕು, ಆದರೆ ಅಭಿವೃದ್ಧಿ ಇರಬೇಕಾದರೆ ಮೊದಲು ಕೃಷಿ ಉಳಿಯಬೇಕು. ರೈತರ ಕಷ್ಟ ಅರ್ಥವಾಗದಿದ್ದರೆ ನೀವು ಹೇಗೆ ಆಡಳಿತ ನಡೆಸುತ್ತೀರಿ? ರೈತರಿಂದ ವ್ಯವಸಾಯವನ್ನು ಕಸಿದುಕೊಂಡು ಅವರಿಗೆ ಬೇರೆ ಕೆಲಸ ಕೊಡುವುದು ಎಷ್ಟು ಸರಿ? ಇಂತಹ ಜನಪ್ರತಿನಿಧಿಗಳನ್ನು ನಾವು ಯಾಕೆ ಆಯ್ಕೆ ಮಾಡಬೇಕು? ನಾನು ಬದುಕಿರುವಷ್ಟು ದಿನ ರೈತರ ಜೊತೆ ಇರುತ್ತೇನೆ, ಅವರ ಹೋರಾಟಕ್ಕೆ ಕೈಜೋಡಿಸುತ್ತೇನೆ. ಸರ್ಕಾರ ಮೊದಲು ರೈತರನ್ನು ರಕ್ಷಣೆ ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ಫುಟ್‌ಪಾತ್ ತೆರವು ಕಾರ್ಯಾಚರಣೆ ನಿಲ್ಲಲ್ಲ – ಸಚಿವ ಕೃಷ್ಣ ಬೈರೇಗೌಡ
ಧರಣಿ ನಿರತ ಸ್ಥಳದಲ್ಲೇ ಕುಳಿತು ಸಂತೋಷ್ ಹೆಗ್ಡೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಬಿಡದಿ ಟೌನ್‌ಶಿಪ್‌ಗಾಗಿ ರೈತರಿಂದ ಬಲವಂತವಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸಬಾರದು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷ – ವಾಕಿಂಗ್‌ಗೆ ಬಂದಿದ್ದವರಿಗೆ ದರ್ಶನ, ಪಾರ್ಕ್‌ನಿಂದ ಎದ್ನೋ ಬಿದ್ನೋ ಅಂತ ಓಡಿದ ಜನ
