ಬೆಂಗಳೂರು: ನ್ಯಾಯಾಲಯದ ಅನುಮತಿಯಿಲ್ಲದೆ ಬಿಡದಿ ಟೌನ್‌ಶಿಪ್(Bidadi Township) ಯೋಜನಾ ಪ್ರದೇಶದಲ್ಲಿ ಒಂದು ಇಟ್ಟಿಗೆಯನ್ನೂ ಅಲುಗಾಡಿಸುವಂತಿಲ್ಲ ಹಾಗೂ ಒಂದೇ ಒಂದು ಮರವನ್ನೂ ಕಡಿಯುವಂತಿಲ್ಲ ಎಂದು ಸರ್ಕಾರಕ್ಕೆ ಹೈಕೋರ್ಟ್(High Court) ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಬಿಡದಿ ಸ್ಮಾರ್ಟ್ ಸಿಟಿ(Smart City) ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ನಾಲ್ವರು ರೈತರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಇಂದು ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ಪೀಠದಲ್ಲಿ ನಡೆಯಿತು.
ಸರ್ಕಾರ ಪರಿಹಾರ ಮೊತ್ತವನ್ನು ನಿಗದಿಪಡಿಸಿದ ತಕ್ಷಣವೇ ಬುಲ್ಡೋಜರ್ ತೆಗೆದುಕೊಂಡು ಹೋದರೆ ಹೇಗೆ? ರಾತ್ರೋರಾತ್ರಿ ಆಸ್ತಿ ನಾಶಪಡಿಸುವ ಕೆಲಸಕ್ಕೆ ಸರ್ಕಾರ ಕೈಹಾಕಬಾರದು ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು. ಅಷ್ಟೇ ಅಲ್ಲದೇ ಪರಿಹಾರ ಮೊತ್ತ ಪ್ರಕಟವಾದರೂ ಕೂಡ ಹೈಕೋರ್ಟ್ ಅನುಮತಿ ಪಡೆಯದೆ ಕೃಷಿಕರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಸೂಚನೆ ನೀಡಿತು.
ಬಹಳಷ್ಟು ರೈತರು ಭೂಮಿ ನೀಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ವಾಸ್ತವದಲ್ಲಿ ಶೇ. 5 ರಷ್ಟು ರೈತರೂ ಸಹ ಭೂಮಿ ನೀಡಲು ಒಪ್ಪಿಲ್ಲ ಎಂದು ರೈತರ ಪರ ವಕೀಲರು ವಾದ ಮಂಡಿಸಿದರು. ಇದನ್ನೂ ಓದಿ: “ಮನೆಗೆಲಸ ಮಾಡು, ವೃದ್ಧ ಪೋಷಕರನ್ನು ನೋಡಿಕೊಂಡಿರು”- ಪತ್ನಿಗೆ ಪತಿ ಆದೇಶಿಸುವಂತಿಲ್ಲ

ಗ್ರೇಟರ್ ಬೆಂಗಳೂರು ಡೆವಲಪ್‌ಮೆಂಟ್ ಅಥಾರಿಟಿ (GBDA) ಪರ ವಕೀಲ ಶಿವಪ್ರಕಾಶ್ ಶಾಂತನಗೌಡರ್ ವಾದ ಮಂಡಿಸಿ, ಕೃಷಿಕರನ್ನು ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ ಹಾಗೂ ಯಾವುದೇ ಬಲವಂತದ ಕ್ರಮ ಜರುಗಿಸುವುದಿಲ್ಲ ಎಂದು ಈಗಾಗಲೇ ಅಡ್ವೊಕೇಟ್ ಜನರಲ್ ಸ್ಪಷ್ಟಪಡಿಸಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ- UP ವಿದ್ಯಾರ್ಥಿನಿಯ ಅರ್ಜಿ ವಜಾ
ರಾಜ್ಯ ಸರ್ಕಾರದ ಪರವಾಗಿ ಹಾಜರಾದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಪರಿಹಾರ ಮೊತ್ತವನ್ನು ಅಂತಿಮವಾಗಿ ನಿಗದಿಪಡಿಸುವವರೆಗೆ ಯಾವುದೇ ರೈತರನ್ನು ತೆರವುಗೊಳಿಸುವುದಿಲ್ಲ. ಪರಿಹಾರದ ವಿವರಗಳನ್ನು ಮೊದಲು ಹೈಕೋರ್ಟ್ ಪೀಠದ ಮುಂದಿಡಲಾಗುವುದು. ನ್ಯಾಯಾಲಯದ ಗಮನಕ್ಕೆ ತಂದ ಬಳಿಕವೇ ಮುಂದಿನ ಪ್ರಕ್ರಿಯೆ ಮುಂದುವರಿಯಲಿದೆ. ಹೀಗಿರುವಾಗ ಏಕಾಏಕಿ ಮುಂದುವರಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಭರವಸೆ ನೀಡಿದರು.
ಸರ್ಕಾರದ ಪರ ಎಜಿ ನೀಡಿದ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಲಯ, ರಾತ್ರೋರಾತ್ರಿ ಪರಿಹಾರ ನಿಗದಿಪಡಿಸಿ ಮರ ಕಡಿಯುವ ಕೆಲಸ ನಡೆಯುವುದಿಲ್ಲವಾದ್ದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಬಳಿಕ ಮುಖ್ಯ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 29 ಕ್ಕೆ ಮುಂದೂಡಿತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹೊಸ ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್ 1 ಕ್ಕೆ ನಿಗದಿಪಡಿಸಲಾಗಿದೆ.
