ಬೆಂಗಳೂರು: ಬೆಂಗಳೂರಿನ ಉದ್ಯಮಿಯೊಬ್ಬರು ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಮಧ್ಯಪ್ರದೇಶದ ಪುರುಷರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ.
‘A1 ಸ್ಪೋರ್ಟ್ಸ್ ವರ್ಲ್ಡ್’ನ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಕಾರ್ತಿಕ್ ಎಸ್.ಜಿ. (ಇವರನ್ನು ಕಾರ್ತಿಕ್ ಶೆಣೈ ಎಂದೂ ಕರೆಯಲಾಗುತ್ತದೆ). ದೀರ್ಘಕಾಲದ ಆಂತರಿಕ ಚರ್ಚೆ ಮತ್ತು ಭಿನ್ನಾಭಿಪ್ರಾಯದ ನಂತರ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ‘X’ (ಟ್ವಿಟರ್) ವೇದಿಕೆಯಲ್ಲಿ ಪ್ರಕಟಿಸಿದ್ದಾರೆ.
Im sorry for this…
But today we have made it very clear after lengthy discussion and quarrel…
We will not hire any male candidates in our company who come from these 4 states in north india…
1. Uttar Pradesh.
2. Rajasthan.
3. Bihar.
4. Madhya Pradesh.We do have 1…
— Karthik SG (@kkarthikkgs) September 22, 2026
ಎಕ್ಸ್ ಪೋಸ್ಟ್‌ನಲ್ಲಿ ಏನಿದೆ?
‘ಈ ಪ್ರಕಟಣೆಗಾಗಿ ನಾನು ವಿಷಾದಿಸುತ್ತೇನೆ… ಆದರೆ ದೀರ್ಘ ಚರ್ಚೆ ಮತ್ತು ವಾಗ್ವಾದದ ನಂತರ ಇಂದು ನಾವು ಒಂದು ವಿಷಯವನ್ನು ಸ್ಪಷ್ಟಪಡಿಸಿದ್ದೇವೆ… ಉತ್ತರ ಭಾರತದ ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ಮಧ್ಯಪ್ರದೇಶ ರಾಜ್ಯಗಳಿಂದ ಬರುವ ಯಾವುದೇ ಪುರುಷ ಅಭ್ಯರ್ಥಿಗಳನ್ನು ನಾವು ನಮ್ಮ ಕಂಪನಿಯಲ್ಲಿ ನೇಮಿಸಿಕೊಳ್ಳುವುದಿಲ್ಲ…. ನಮ್ಮಲ್ಲಿ ಈಗಾಗಲೇ ರಾಜಸ್ಥಾನ ಮೂಲದ ಒಬ್ಬ ಮಹಿಳೆ ಕೆಲಸ ಮಾಡುತ್ತಿದ್ದಾರೆ. ಅವರು ನಮ್ಮ ಪ್ರಕಟಣೆಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ’ ಎಂದು ಕಾರ್ತಿಕ್ ಶೆಣೈ ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಶೆಣೈ ಅವರ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಕಾಮೆಂಟ್‌ಗಳು ವ್ಯಕ್ತವಾದವು. ಇದು ಶೆಣೈ ಅವರ ಘೋಷಣೆಗೆ ಪ್ರಮುಖ ಕಾರಣವೇನೆಂದು ತಿಳಿಯಲು ಪ್ರೇರೇಪಿಸಿದವು. ಇದರ ಬೆನ್ನಲ್ಲೇ ಕಾರ್ತಿಕ್ ಶೆಣೈ ಮತ್ತೊಂದು ಪೋಸ್ಟ್ ಹಂಚಿಕೊಂಡರು.
Yes ill definitely standby this decision… he was an MBA graduate and resume and background looked clean…
But after 2 months he started being abusive to female employees and also tried to force himself on one of them…
For us our teams safety standards and the Young kids we… https://t.co/oUThLZAszu
— Karthik SG (@kkarthikkgs) September 23, 2026
ಉದ್ಯೋಗಿಯೊಬ್ಬರು ತಮ್ಮ ಕಂಪನಿಯಲ್ಲಿ ಮಹಿಳಾ ಸಹೋದ್ಯೋಗಿಗಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಅವರ ಮಿತಿ ಮೀರಿದ ವರ್ತನೆಯಿಂದ ಕೆಲಸದಿಂದ ವಜಾಗೊಳಿಸಲಾಯಿತು. ಆ ವ್ಯಕ್ತಿ ಉತ್ತರ ಭಾರತ ಮೂಲದವನು ಎಂಬುದನ್ನು ಸಿಇಒ ತಿಳಿಸಿದ್ದಾರೆ. ನಮಗೆ ವ್ಯವಹಾರ ನಡೆಸುವುದಕ್ಕಿಂತ ಕಂಪನಿಯ ತಂಡದ ಸುರಕ್ಷತೆ, ಹಿತಾಸಕ್ತಿ ಮುಖ್ಯವಾಗಿದೆ. ನಾವು ಮಾನವ ಜೀವಕ್ಕೆ ಪ್ರಾಮುಖ್ಯತೆ ನೀಡುತ್ತೇವೆ. ಪರಸ್ಪರರನ್ನು ಗೌರವಿಸುತ್ತೇವೆ ಎಂದು ಶೆಣೈ ಸ್ಪಷ್ಟಪಡಿಸಿದ್ದಾರೆ.
ಕ್ರೀಡಾ ಕಾರ್ಯಕ್ರಮಗಳು ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರು ಮೂಲದ ‘ಎ1 ಸ್ಪೋರ್ಟ್ಸ್ ವರ್ಲ್ಡ್’ (A1 Sports World) ಕಂಪನಿಯ ಸ್ಥಾಪಕ ಕಾರ್ತಿಕ್ ಶೆಣೈ ಎಂದು ತಿಳಿದುಬಂದಿದೆ.

