ಕೆಲವರಿಗೆ ಮಳೆ ಎಂದ್ರೆ ಕಿರಿಕಿರಿ, ಇನ್ನು ಕೆಲವರಿಗೆ ಮಳೆ ಅಂದ್ರೆ ಸಕತ್ ಇಷ್ಟ. ಮಳೆಯಲ್ಲಿ ಪ್ರವಾಸಿ ತಾಣಗಳನ್ನು ಸುತ್ತೋದು ಒಂತರಾ ಮಜಾ. ಅಂಥವರಿಗಾಗಿ ಸಕಲೇಶಪುರದ ಕೆಲವು ಸ್ಥಳಗಳು ಸಕತ್ ಮಜಾ ಕೊಡಲಿವೆ. ಅಂತಹ ಪ್ರವಾಸಿ ತಾಣಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಸಕಲೇಶಪುರವು ಕರ್ನಾಟಕದ ಅತ್ಯಂತ ಸುಂದರವಾದ ಗಿರಿಧಾಮವಾಗಿದೆ. ಪ್ರಾಚೀನ ಕೋಟೆಯಿಂದ ಹಿಡಿದು ದೇವಾಲಯ, ಜಲಪಾತಗಳವರೆಗೆ ಎಲ್ಲವೂ ಇಲ್ಲಿವೆ. ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಸಕಲೇಶಪುರವು ಚಹಾ, ಕಾಫಿ ಮತ್ತು ವಿಶಾಲವಾದ ತೋಟಗಳಿಂದ ಕಂಗೊಳಿಸುತ್ತದೆ. ಅದರಲ್ಲೂ ಈ ಮಳೆಯ ಸಮಯದಲ್ಲಿ ಇಲ್ಲಿನ ಸೌಂದರ್ಯ ಇಮ್ಮಡಿಯಾಳ್ಳುತ್ತದೆ.

ಸಕಲೇಶ್ವರ ದೇವಸ್ಥಾನ
ಸಕಲೇಶಪುರದ ಪ್ರಮುಖ ಆಕರ್ಷಣೆಯ ಸ್ಥಳ (Sakleshwara Temple) ಸಕಲೇಶ್ವರ ದೇವಸ್ಥಾನ. ಹೊಯ್ಸಳ ವಾಸ್ತುಶಿಲ್ಪದ ಅತ್ಯುತ್ತಮ ಕರಕುಶಲತೆಗೆ ಸಾಕ್ಷಿಯಾಗಿ ನಿಂತಿರುವ ಈ ದೇವಾಲಯ ಚಿಕ್ಕದಾಗಿದ್ದರೂ, ಸುಂದರ ವಾಸ್ತುಶಿಲ್ಪವನ್ನು ಒಳಗೊಂಡಿದೆ. ಇದನ್ನು 11 ಮತ್ತು 14 ನೇ ಶತಮಾನದ ನಡುವೆ ನಿರ್ಮಿಸಲಾಗಿದೆ. ಸಕಲೇಶಪುರ ಬಸ್ ನಿಲ್ದಾಣದಿಂದ 1.5 ಕಿ.ಮೀ ದೂರದಲ್ಲಿ ಈ ದೇವಸ್ಥಾನವಿದೆ.
ಬೆಟ್ಟದ ಭೈರವೇಶ್ವರ ದೇವಸ್ಥಾನ
ಸಕಲೇಶಪುರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಬೆಟ್ಟದ ಭೈರವೇಶ್ವರ ದೇವಸ್ಥಾನವು ಪಶ್ಚಿಮ ಘಟ್ಟದ ಪಾಂಡವರ ಗುಡ್ಡದ ಮೇಲಿದೆ. ಸುಂದರ ಪ್ರಕೃತಿಯ ಮಡಿಲಲ್ಲಿರುವ 600 ವರ್ಷಗಳಷ್ಟು ಹಳೆಯದಾದ ಈ ಶಿವನ ದೇವಾಲಯವು, ಟ್ರೆಕ್ಕಿಂಗ್‌ಗೆ ಹಾಗೂ ಪ್ರವಾಸಿಗರಿಗೆ ಅತ್ಯುತ್ತಮ ತಾಣವಾಗಿದೆ. ದೇವಸ್ಥಾನ ಪ್ರತಿದಿನ ಬೆಳಿಗ್ಗೆ 6 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ.

ಮಂಜರಾಬಾದ್ ಕೋಟೆ
ಸಕಲೇಶಪುರದ ಪ್ರಧಾನ ಪ್ರವಾಸಿ ಆಕರ್ಷಣೆ ಎಂದರೆ ಅದು(Manjarabad Fort) ಮಂಜರಾಬಾದ್ ಕೋಟೆ. ಇಲ್ಲಿ ಸಾಕಷ್ಟು ಸಿನಿಮಾಗಳ ಶೂಟಿಂಗ್ ಸಹ ನಡೆದಿದೆ. ದೇಶದ ವಿಶಿಷ್ಟ ಕೋಟೆಗಳಲ್ಲಿ ಒಂದಾದ ಮಂಜರಾಬಾದ್ ಕೋಟೆಯನ್ನು ಟಿಪ್ಪು ಸುಲ್ತಾನ್ 1785-1792ರ ನಡುವೆ ನಿರ್ಮಿಸಿದ ಎಂದು ಹೇಳಲಾಗುತ್ತದೆ. ಈ ಕೋಟೆ ಭಾರತದಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ಶ್ರೀಮಂತಿಕೆಯನ್ನು ತೋರಿಸುತ್ತದೆ.
ಅಷ್ಟಭುಜಾಕೃತಿಯ ವಿನ್ಯಾಸದ ಈ ವಿಶಿಷ್ಟ ಕೋಟೆಯನ್ನು ನೋಡಲು ಅನೇಕ ಭಾಗಗಳಿಂದ ಇತಿಹಾಸಕಾರರು, ಪ್ರವಾಸಿಗರು ಬರುತ್ತಾರೆ.

ಮಂಜರಾಬಾದ್ ಕೋಟೆ ಬೆಂಗಳೂರು – ಮಂಗಳೂರು ಹೆದ್ದಾರಿಯಲ್ಲಿ ಸಕಲೇಶಪುರ ದಿಂದ ಮುಂದಕ್ಕೆ 5 ಕಿ.ಮೀ ದೂರದಲ್ಲಿರುವ ದೋಣಿಗಾಲ್ ಎಂಬ ಊರಿನ ಸಣ್ಣ ಗುಡ್ಡದ ಮೇಲೆ ಇದೆ.
ಬಿಸ್ಲೆ ವ್ಯೂ
ಮಳೆ ಆರಂಭವಾದಾಗ ಹಸುರಿನಿಂದ ಕಂಗೊಳಿಸುವ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬಿಸ್ಲೆ ವ್ಯೂ ಪಾಯಿಂಟ್‌ಗೆ ( Bisle View Point) ಭೇಟಿ ನೀಡಲೇಬೇಕು. ಇದು ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ಪ್ರವಾಸಿಗರ ಮುಂದೆ ತೆರೆದಿಡುತ್ತದೆ.

ಇದು ಸುಮಾರು 3,800 ಅಡಿ ಎತ್ತರದಲ್ಲಿದೆ ಮತ್ತು ಪಶ್ಚಿಮ ಘಟ್ಟಗಳ ಸುತ್ತಮುತ್ತಲಿನ ಪರ್ವತ ಶ್ರೇಣಿಗಳ ಅದ್ಭುತ ನೋಟಗಳಿಗೆ ಜನಪ್ರಿಯವಾಗಿದೆ. ಬಿಸ್ಲೆ ಘಾಟ್ ವ್ಯೂ ಪಾಯಿಂಟ್ ಸೂರ್ಯಾಸ್ತವನ್ನು ವೀಕ್ಷಿಸಲು ಸೂಕ್ತವಾದ ಸ್ಥಳವಾಗಿದೆ.
ನಿರಂತರ ಕೆಲಸ, ಒತ್ತಡದಿಂದ ತಪ್ಪಿಸಿಕೊಂಡು ಪ್ರಕೃತಿಯ ನಡುವೆ ಕಳೆಯಲು ಈ ಜಾಗ ಅತ್ಯುತ್ತಮವಾದದ್ದು.
ಮಗಜನಹಳ್ಳಿ ಜಲಪಾತ
ಸಕಲೇಶಪುರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮಗಜನಹಳ್ಳಿ ಜಲಪಾತ (Manjehalli Waterfalls) ಸಹ ಒಂದು. ಸ್ಥಳೀಯವಾಗಿ ಈ ಜಲಪಾತವನ್ನು ಅಬ್ಬಿ ಜಲಪಾತ ಎಂದೂ ಕರೆಯಲಾಗುತ್ತದೆ. ಮಗಜನಹಳ್ಳಿ ಜಲಪಾತವು ಸಕಲೇಶಪುರದ ಅತ್ಯಂತ ಸುಂದರವಾದ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಮಳೆಯಲ್ಲಿ ಜಲಪಾತದ ಸೌದರ್ಯ ಇನ್ನಷ್ಟು ಹೆಚ್ಚಾಗಿದ್ದು, ಕುಟುಂಬಸ್ಥರು ಮತ್ತು ಸ್ನೇಹಿತರ ಜೊತೆ ಪ್ರಕೃತಿಯ ಪ್ರಶಾಂತತೆಯನ್ನು ಆನಂದಿಸಲು ಇದು ಹೇಳಿ ಮಾಡಿಸಿದ ಜಾಗ.
ಪ್ರವಾಸಿಗರು ಪ್ರಕೃತಿಯ ಶಾಂತಿ, ತಂಪಾದ ಗಾಳಿ ಮತ್ತು ನಿಸರ್ಗದ ಶಬ್ಧದಿಂದ ತಮ್ಮ ದೈನಂದಿನ ಒತ್ತಡದಿಂದ ವಿಶ್ರಾಂತಿ ಪಡೆಯಬಹುದು. ಜಲಪಾತಗಳ ಬಳಿ ಪಿಕ್ನಿಕ್ ಮಾಡಲು, ಫೋಟೋ ತೆಗೆದುಕೊಳ್ಳಲು ಹಾಗೂ ಟ್ರೆಕ್ಕಿಂಗ್ ಅನುಭವ ಪಡೆಯಲು ಇಲ್ಲಿ ಅನೇಕ ಅವಕಾಶಗಳಿವೆ.

ಜಲಪಾತ ಸಕಲೇಶಪುರದಿಂದ 21 ಕಿ.ಮೀ ದೂರವಿದೆ. ಮುಖ್ಯ ರಸ್ತೆಯಿಂದ ಜಲಪಾತವನ್ನು ತಲುಪಲು ಮಂಜೇಹಳ್ಳಿ ಗ್ರಾಮದ ಮೂಲಕ ಸುಮಾರು 1 ಕಿಲೋಮೀಟರ್ ಸುಂದರವಾದ ಕಾಫಿ ತೋಟಗಳ ನಡುವೆ ನಡೆದುಕೊಂಡು ಹೋಗಬೇಕು.
ಭೇಟಿ ನೀಡಲು ಉತ್ತಮ ಸಮಯ: ಬೇಸಿಗೆ ಮತ್ತು ಚಳಿಗಾಲ ಮತ್ತು ಮಳೆಗಾಲದ ತಿಂಗಳುಗಳು ಈ ಜಲಪಾತವನ್ನು ಭೇಟಿ ಮಾಡಲು ಉತ್ತಮ ಕಾಲವಾಗಿದೆ.
ಜೇನುಕಲ್ ಗುಡ್ಡ
ಸಕಲೇಶಪುರ ಪ್ರವಾಸದಲ್ಲಿ ಪಶ್ಚಿಮ ಘಟ್ಟಗಳ ಅತ್ಯಂತ ಮೋಡಿಮಾಡುವ ಪ್ರಕೃತಿ ಸೌಂದರ್ಯವನ್ನು ನೋಡಲು ಜೇನುಕಲ್ ಗುಡ್ಡಕ್ಕೆ ಭೇಟಿ ನೀಡಿ. ಇದು ಟ್ರೆಕ್ಕಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಪ್ರವಾಸಿಗರಿಂದ ತುಂಬಿ ತುಳುಕುತ್ತದೆ ಮತ್ತು ಸಾಹಸಕ್ಕಾಗಿ ಅವರ ಉತ್ಸಾಹಕ್ಕೆ ಸವಾಲು ಹಾಕುತ್ತದೆ.ಈ ಸ್ಥಳವು ದಟ್ಟವಾದ ನಿತ್ಯಹರಿದ್ವರ್ಣ ಕಾಡುಗಳು ಮತ್ತು ಅನೇಕ ಕಾಫಿ ಮತ್ತು ಚಹಾ ತೋಟಗಳಿಂದ ಆವೃತವಾಗಿದೆ. ಬೆಟ್ಟದ ಮೇಲೆ ಏರಿದಾಗ ಸುತ್ತಮುತ್ತಲಿನ ಹಸಿರು, ಮಳೆಯ ಹರಿಯುವ ನದಿ ಮತ್ತು ದೂರದ ಮಳೆಯ ಕಾಡು ದೃಶ್ಯಗಳು ಅತ್ಯಂತ ಮನಮೋಹಕವಾಗಿವೆ.

ಅಗ್ನಿ ಗುಡ್ಡ
ಅಗ್ನಿ ಗುಡ್ಡ ಬೆಟ್ಟ ಕರ್ನಾಟಕದ ಸಕಲೇಶಪುರದ ಹತ್ತಿರ ಇರುವ ಒಂದು ಪ್ರಸಿದ್ಧ ಟ್ರೆಕ್ಕಿಂಗ್ ಸ್ಥಳವಾಗಿದೆ. ಪಶ್ಚಿಮ ಘಟ್ಟಗಳ ಹಸಿರು ಬೆಟ್ಟಗಳ ನಡುವೆ ಇರುವ ಅಗ್ನಿ ಗುಡ್ಡವು ಪ್ರವಾಸಿಗರಿಗೆ ಹತ್ತಿರದಿಂದ ನೈಸರ್ಗಿಕ ಸೌಂದರ್ಯದ ಔತಣವನ್ನು ನೀಡುತ್ತದೆ.
ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಈ ಸ್ಥಳಕ್ಕೆ ಭೇಟಿ ನೀಡುವುದರಿಂದ ಪ್ರಕೃತಿಯ ಸೌಂದರ್ಯವನ್ನು ಸಂಪೂರ್ಣವಾಗಿ ಅನುಭವಿಸಬಹುದು. ಅಗ್ನಿ ಗುಡ್ಡ ಬೆಟ್ಟವು ಸಾಹಸಪ್ರಿಯರು, ಫೋಟೋಗ್ರಾಫರ್‌ಗಳು ಮತ್ತು ಪ್ರಕೃತಿ ಪ್ರೇಮಿಗಳಿಗೆ ಹೇಳಿ ಮಾಡಿಸಿದ ತಾಣ.
ಹಳೇಬೀಡು – ಬೇಲೂರು
ಕರ್ನಾಟಕದ ಹಳೇಬೀಡು ಮತ್ತು ಬೇಲೂರು ದೇವಾಲಯಗಳು ಹೊಯ್ಸಳ ಸಾಮ್ರಾಜ್ಯದ ಅಡಿಯಲ್ಲಿ ನಿರ್ಮಿಸಲಾದ ಹಿಂದೂ ದೇವಾಲಯಗಳಾಗಿವೆ. ಈ ಎರಡು ದೇವಾಲಯವು ಸಕಲೇಶಪುರದ ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ಹೆಸರುವಾಸಿಯಾಗಿದೆ. ನಗರದಿಂದ ದೂರವಿದ್ದು, ಶಾಂತಿಯುತ ಈ ಆಸಕ್ತಿದಾಯಕ ಐತಿಹಾಸಿಕ ಸ್ಥಳಗಳು ಪ್ರವಾಸಕ್ಕೆ ಸೂಕ್ತವಾಗಿವೆ.

