ನವದೆಹಲಿ: ಸನಾತನ ಧರ್ಮವನ್ನು ಟೀಕಿಸಿದ್ದ ಉದಯನಿಧಿ ಸ್ಟಾಲಿನ್ (Udhayanidhi Stalin), ಮಹಿಳೆಯೊಬ್ಬರ ವಿರುದ್ಧ ಕೆಟ್ಟ ಮತ್ತು ಅವಹೇಳನಕಾರಿ ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದಾರೆ ಎಂದು ಬಿಜೆಪಿ (BJP) ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ (Amit Malviya) ಕುಟುಕಿದ್ದಾರೆ.

ಅವರ ಬಂಧನವನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ಸನಾತನ ಧರ್ಮವನ್ನು ಹಳಿದಿದ್ದ ವ್ಯಕ್ತಿ ಈಗ ಮಹಿಳೆಯರ ವಿರುದ್ಧದ ನಿಂದನಾತ್ಮಕ ಹೇಳಿಕೆಗಾಗಿ ಕಾನೂನು ಕ್ರಮ ಎದುರಿಸುತ್ತಿದ್ದಾರೆ. ಸಾರ್ವಜನಿಕವಾಗಿ ಮಹಿಳೆಯರ ಘನತೆಗೆ ಕುಂದಂಟು ಮಾಡುವ ಇಂತಹ ಅಸಭ್ಯ ಭಾಷಣಕ್ಕಾಗಿ ಅವರನ್ನು ಬಂಧಿಸಿದ್ದು ಸರಿಯಾದ ಕ್ರಮವೇ ಆಗಿದೆ ಎಂದು ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ತ್ರಿಷಾ ವಿರುದ್ಧ ವಿವಾದಾತ್ಮಕ ಹೇಳಿಕೆ – ಉದಯನಿಧಿ ಸ್ಟಾಲಿನ್ ಅರೆಸ್ಟ್
Udhayanidhi Stalin, the man who abused Sanatan Dharma, has been arrested for his vile and slanderous remark involving a woman. It was time he met this fate.
— Amit Malviya (@amitmalviya) August 4, 2026
ನಟಿ ತ್ರಿಷಾ (Trisha) ಅವರನ್ನು ಉಲ್ಲೇಖಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ನಡುವೆಯೇ ತಮಿಳುನಾಡು (Tamil Nadu) ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udayanidhi Stalin) ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಕಾವೇರಿ ಜಲ ವಿವಾದದ ಕುರಿತು ಭಾಷಣ ಮಾಡುವ ವೇಳೆ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಕಾವೇರಿ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸರ್ಕಾರವನ್ನು ಟೀಕಿಸುತ್ತಿದ್ದ ವೇಳೆ ಉದಯನಿಧಿ ನೀಡಿದ ಹೇಳಿಕೆಯನ್ನು ಹಲವರು ನಟಿ ತ್ರಿಷಾ ಅವರನ್ನು ಉಲ್ಲೇಖಿಸಿ ಮಾಡಿದ ದ್ವಂದ್ವಾರ್ಥದ ಮಾತು ಎಂದು ಆರೋಪಿಸಿದ್ದರು. ಈ ಕುರಿತು ಟಿವಿಕೆ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕ್ರಮಕ್ಕೆ ಒತ್ತಾಯಿಸಿದ್ದವು. ಪ್ರಕರಣ ದಾಖಲಾದ ಕೆಲವೇ ಹೊತ್ತಿನಲ್ಲಿ ಪೊಲೀಸರು ಉದಯನಿಧಿ ಅವರನ್ನು ಬಂಧಿಸಿದ್ದಾರೆ.
ಏನಿದು ವಿವಾದ?
ತಂಜಾವೂರಿನಲ್ಲಿ ಕಾವೇರಿ ನೀರಿನ ಬಿಕ್ಕಟ್ಟಿನ ಕುರಿತು ನಡೆದ ಡಿಎಂಕೆ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದ ಉದಯನಿಧಿ ಸ್ಟಾಲಿನ್, ನಮ್ಮ ಮುಖ್ಯಮಂತ್ರಿ ಕಾವೇರಿ ನೀರಿನ ವಿಷಯದ ಬಗ್ಗೆ ಬಾಯಿ ತೆರೆಯುತ್ತಿಲ್ಲ. ಅವರ ಏಕೈಕ ಚಿಂತೆ ಡಿಎಂಕೆ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೇಗೆ ಹಾಕುವುದು ಎಂಬುದು ಅಷ್ಟೇ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ವಿಜಯ್ ಸರ್ಕಾರವನ್ನು ಟೀಕಿಸುತ್ತಿದ್ದರು. ಇದೇ ವೇಳೆ ಜನಸಮೂಹದಿಂದ ‘ತ್ರಿಷಾ… ತ್ರಿಷಾ…’ ಎಂಬ ಘೋಷಣೆಗಳು ಕೇಳಿಬಂದವು. ಅದಕ್ಕೆ ಪ್ರತಿಕ್ರಿಯಿಸಿದ ಉದಯನಿಧಿ, ನಗುಮುಖದೊಂದಿಗೆ ತಮಿಳಿನಲ್ಲಿ ದ್ವಂದ್ವಾರ್ಥ ಬರುವ ರೀತಿಯಲ್ಲಿ ʼಯಾವ ನೀರು ಬರುತ್ತದೋ ಇಲ್ಲವೋ, ಆ ನೀರು ಬರಲೇಬೇಕುʼ ಎಂದು ಹೇಳಿದರು. ಈ ಮಾತು ನಟಿ ತ್ರಿಷಾ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿ, ಮಹಿಳೆಯನ್ನು ಅವಮಾನಿಸುವ ಹಾಗೂ ಅಶ್ಲೀಲ ಅರ್ಥ ನೀಡುವ ರೀತಿಯಲ್ಲಿದೆ ಎಂದು ಟಿವಿಕೆ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಆರೋಪಿಸಿವೆ.
ಸನಾತನ ಧರ್ಮದ ಬಗ್ಗೆ ಉದಯನಿಧಿ ಹೇಳಿದ್ದೇನು?
2023ರ ಸೆಪ್ಟೆಂಬರ್ 3 ರಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಸನಾತನನ ಧರ್ಮವು ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು ಎಂದು ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಸನಾತನ ಧರ್ಮವನ್ನು ಕೊನೆವರೆಗೂ ವಿರೋಧಿಸುತ್ತೇನೆ: ಉದಯನಿಧಿ ಸ್ಟಾಲಿನ್
