ಕೋಲ್ಕತ್ತಾ: ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ (Hardik Pandya), ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆ ಅವರಿಗೆ ಬಿಸಿಸಿಐ ಪಂದ್ಯ ಶುಲ್ಕದ ಶೇ.10 ರಷ್ಟು ದಂಡ ವಿಧಿಸಿ, 1 ಡಿಮೆರಿಟ್ ಅಂಕ ನೀಡಿದೆ.
ಪಾಂಡ್ಯ ಅವರು ತಮ್ಮ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬೌಲ್ ಮಾಡುವಾಗ ಈ ಘಟನೆ ನಡೆಯಿತು. 10 ನೇ ಓವರ್‌ನ 4ನೇ ಎಸೆತದ ವೇಳೆ ಪಾಂಡ್ಯ ರನ್‌ಅಪ್‌ಗೆ ಹಿಂತಿರುಗುವಾಗ ಕೋಪದಲ್ಲಿ ವಿಕೆಟ್‌ನ ಬೇಲ್ಸ್‌ಗಳನ್ನು (Wicket Bails) ತನ್ನ ಬಾಲ್‌ನಿಂದ ಬಲವಾಗಿ ಹೊಡೆದು ಕೆಡವಿದ್ದರು. ಇದರಿಂದಾಗಿ ಅವರು ನೀತಿ ಸಂಹಿತೆ 2.2 ಅನ್ನು ಉಲ್ಲಂಘಿಸಿದಂತಾಗಿದೆ.

ಐಪಿಎಲ್ ನೀತಿ ಸಂಹಿತೆ (IPL Code of Conduct) 2.2 ಪಂದ್ಯದ ವೇಳೆ ಕ್ರಿಕೆಟ್ ಉಪಕರಣಗಳು, ಬಟ್ಟೆ, ನೆಲದ ಉಪಕರಣಗಳ ದುರುಪಯೋಗಕ್ಕೆ ಸಂಬಂಧಿಸಿದೆ.
ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ ಸೋಲು ಕಂಡಿತು. ಈ ವೇಳೆ 10 ನೇ ಓವರ್‌ನಲ್ಲಿ ದೀಪಕ್ ಚಹಾರ್ ಹಾಗೂ ರಾಬಿನ್ ಮಿಂಜ್ ಅವರು ಬೌಂಡರಿ ಲೈನ್‌ನಲ್ಲಿ ರೋವಮನ್ ಪೊವೆಲ್ ಅವರ ಕ್ಯಾಚ್ ಕೈ ಚೆಲ್ಲಿದರು. ಆಗ ಪೊವೆಲ್ 8 ಬಾಲ್‌ಗಳಲ್ಲಿ 14 ರನ್ ಬಾರಿಸಿದ್ದರು. ಕ್ಯಾಚ್ ಕೈ ಬಿಟ್ಟ ಬೆನ್ನಲ್ಲೇ ಇನ್ನೊಂದು ಬದಿಯಲ್ಲಿ ಬ್ಯಾಟ್ ಮಾಡುತ್ತಿದ್ದ ಮನೀಷ್ ಪಾಂಡೆಯವರು ಸತತ ಬೌಂಡರಿ ಬಾರಿಸಿದರು. ಈ ವೇಳೆ ಹಾರ್ದಿಕ್ ಪಾಂಡ್ಯ ಹತಾಶರಾಗಿ ಈ ವರ್ತನೆ ತೋರಿದ್ದರು.

ಜೀವದಾನ ಪಡೆದ ಪೊವೆಲ್ ಅಂತಿಮವಾಗಿ 30 ಎಸೆತಗಳಲ್ಲಿ 4 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳೊಂದಿಗೆ 40 ರನ್ ಗಳಿಸಿದರು. ಇತ್ತ ಮನೀಷ್ ಪಾಂಡೆ ಅವರು ಕೂಡ 33 ಎಸೆತಗಳಲ್ಲಿ 45 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಮುಂಬೈ ವಿರುದ್ಧ ಗೆಲುವು ಸಾಧಿಸಿದ ಕೆಕೆಆರ್
ಈಡನ್ ಗಾರ್ಡನ್‌ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಕೆಕೆಆರ್ ಮುಂಬೈ ವಿರುದ್ಧ 4 ವಿಕೆಟ್‌ಗಳ ಜಯ ದಾಖಲಿಸಿತ್ತು. ಮುಂಬೈ ನೀಡಿದ್ದ 148 ರನ್‌ಗಳ ಗುರಿ ಬೆನ್ನತ್ತಿದ ಕೆಕೆಆರ್ 18.5 ಓವರ್‌ನಲ್ಲಿಯೇ ಗೆಲುವಿನ ದಡ ಸೇರಿತು. ಕೋಲ್ಕತ್ತಾ ಗೆಲುವಿನಲ್ಲಿ ಮನೀಷ್ ಪಾಂಡೆ 33 ಎಸೆತಗಳಲ್ಲಿ 45 ರನ್, ಪೊವೆಲ್ 30 ಎಸೆತಗಳಲ್ಲಿ 40 ರನ್ ಸಿಡಿಸಿ ಕೆಕೆಆರ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

