ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸೋಮವಾರ ಭಾರತ ಪುರುಷರ ಕ್ರಿಕೆಟ್ ತಂಡದ ಮುಖ್ಯ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಮಾಜಿ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ(Pragyan Ojha) ಅವರನ್ನು ನೇಮಕ ಮಾಡಿದೆ.
ಅಜಿತ್ ಅಗರ್ಕರ್(Ajit Agarkar) ಅವರ ಅಧಿಕಾರಾವಧಿ ಮುಕ್ತಾಯದ ಬೆನ್ನಲ್ಲೇ ತೆರವಾದ ಸ್ಥಾನಕ್ಕೆ ಮಾಜಿ ಆಲ್ರೌಂಡರ್ ರಮೇಶ್ ಪೊವಾರ್(Ramesh Powar) ಅವರನ್ನು ಐವರು ಸದಸ್ಯರ ಆಯ್ಕೆ ಸಮಿತಿಗೆ ನೂತನ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲಾಗಿದೆ.
ಟೆಸ್ಟ್ ಪಂದ್ಯಗಳ ಅನುಭವದ ಜ್ಯೇಷ್ಠತೆ ಆಧಾರದ ಮೇಲೆ ಪ್ರಗ್ಯಾನ್ ಓಜಾ ಅವರಿಗೆ ಮುಖ್ಯಸ್ಥನ ಜವಾಬ್ದಾರಿ ವಹಿಸಲಾಗಿದೆ. ಈ ಸಮಿತಿಯಲ್ಲಿ ಶಿವಸುಂದರ್ ದಾಸ್, ಆರ್ಪಿ ಸಿಂಗ್ ಮತ್ತು ಅಜಯ್ ರಾತ್ರಾ ಇತರ ಸದಸ್ಯರಾಗಿ ಮುಂದುವರಿಯಲಿದ್ದಾರೆ.
ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ (CAC) ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಅರ್ಹ ಅಭ್ಯರ್ಥಿಗಳನ್ನು ಸಂದರ್ಶಿಸಿ, ರಮೇಶ್ ಪೊವಾರ್ ಅವರ ಹೆಸರನ್ನು ಸರ್ವಾನುಮತದಿಂದ ಅಂತಿಮಗೊಳಿಸಿ ಶಿಫಾರಸು ಮಾಡಿತ್ತು. ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಜಾಫರ್ 31 ಟೆಸ್ಟ್ ಆಡಿದ್ದು ಓಜಾ ಅವರಿಗಿಂತ ಹೆಚ್ಚು ಅನುಭವ ಹೊಂದಿದ್ದರೂ, ಬಿಸಿಸಿಐ ಅಂತಿಮವಾಗಿ ಓಜಾ ಅವರನ್ನೇ ಸಮಿತಿಯ ಅಧ್ಯಕ್ಷರನ್ನಾಗಿ ಘೋಷಿಸಿದೆ.

38 ವರ್ಷದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಭಾರತದ ಪರ 24 ಟೆಸ್ಟ್ಗಳಲ್ಲಿ 113 ವಿಕೆಟ್ ಕಬಳಿಸಿದ್ದು, 18 ಏಕದಿನ ಹಾಗೂ 6 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇನ್ನು ರಮೇಶ್ ಪೊವಾರ್ ಭಾರತದ ಪರ 2 ಟೆಸ್ಟ್ ಹಾಗೂ 31 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ನಿವೃತ್ತಿಯ ಬಳಿಕ ಯಶಸ್ವಿ ಕೋಚ್ ಆಗಿ ಗುರುತಿಸಿಕೊಂಡಿದ್ದಾರೆ.
ಭಾರತ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಏಷ್ಯಾ ಕಪ್ ಪ್ರಶಸ್ತಿ ಹಾಗೂ ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿ ಪದಕ ಗೆಲ್ಲಿಸಿಕೊಟ್ಟ ಅನುಭವ ಹೊಂದಿರುವ ಅವರು ಮುಂಬೈ, ಗುಜರಾತ್ ತಂಡಗಳ ಜತೆಗೆ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಬೌಲಿಂಗ್ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಮುಖ್ಯ ಆಯ್ಕೆಗಾರರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಅಜಿತ್ ಅಗರ್ಕರ್ ಅವರ ಕೊಡುಗೆಯನ್ನು ಬಿಸಿಸಿಐ ಶ್ಲಾಘಿಸಿದೆ. ಜುಲೈ 2023 ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಅಗರ್ಕರ್ ಮಾರ್ಗದರ್ಶನದ ಅವಧಿಯಲ್ಲಿ ಭಾರತ ತಂಡವು ಮೂರು ಐಸಿಸಿ ಟ್ರೋಫಿಗಳು, ಎರಡು ಏಷ್ಯಾ ಕಪ್ ಪ್ರಶಸ್ತಿಗಳು ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಸದ್ಯ ಓಜಾ ಸಾರಥ್ಯ ಮತ್ತು ಪೊವಾರ್ ಸೇರ್ಪಡೆಯೊಂದಿಗೆ ಬಿಸಿಸಿಐನ ನೂತನ ಆಯ್ಕೆ ಸಮಿತಿ ಸಂಪೂರ್ಣಗೊಂಡಿದೆ.
