ಆಕಾಶ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪ್ರಕಾಶ್ ಎಸ್. ಬೂದೂರು ಅವರ ನಿರ್ಮಾಣದಲ್ಲಿ ಕೆ.ಎಸ್ ಕೃಷ್ಣಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೂರನೇ ಕನ್ನಡ ಚಿತ್ರದ ಶೀರ್ಷಿಕೆ `ಬೆಟಾಲಿಯನ್’ (Battalion Movie) ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ. ಮೊದಲನೇ ನಿರ್ಮಾಣದ ಮಹಾನ್ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಮತ್ತು ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅಭಿನಯಿಸಿದ್ದಾರೆ. ಎರಡನೇ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರ ಜೊತೆ ಕೈಜೋಡಿಸಿದ್ದು, ಮೂರನೇ ಚಿತ್ರವನ್ನು ಇಂದಿನ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಬೆಟಾಲಿಯನ್ ಎಂಬ ಅದ್ದೂರಿ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ.
ಪ್ರತಿಭಾವಂತ ಹೊಸ ತಂತ್ರಜ್ಞರು ಚಿತ್ರತಂಡ ಸೇರಿಕೊಂಡಿದ್ದು, ಈಗಾಗಲೇ ಚಿತ್ರಕ್ಕೆ ಒಂದಿಷ್ಟು ಕಲಾವಿದರ ಆಯ್ಕೆಯಾಗಿದೆ. ಶೆಟ್ರು ಬೆಟಾಲಿಯನ್ ಇಂದ ಒಬ್ಬರು, ಡಾಲಿ ಬೆಟಾಲಿಯನ್ ಇಂದ ಒಬ್ಬರು ಚಿತ್ರತಂಡ ಸೇರಿಕೊಂಡಿದ್ದಾರೆ. ಇನ್ನುಳಿದ ಕಲಾವಿದರ ಆಯ್ಕೆಗಾಗಿ ಶೀಘ್ರದಲ್ಲಿ ಚಿತ್ರತಂಡ ಆಡಿಷನ್ ಕರೆ ನೀಡಿ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ. ಇದನ್ನೂ ಓದಿ: ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿಗೆ ಪ್ರೇಮ್ ಸಾಥ್
ಅಲೈಯನ್ಸ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೇಕಿಂಗ್ & ಪರ್ಫಾರ್ಮಿಂಗ್ ಆರ್ಟಸ್ ಸಹಕಾರದೊಂದಿಗೆ ಕರ್ನಾಟಕದ ವಿವಿಧ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸುವ ಯೋಜನೆ ಚಿತ್ರ ತಂಡಕ್ಕಿದೆ. ತಾಂತ್ರಿಕ ಗುಣಮಟ್ಟ ಹಾಗೂ ಮನರಂಜನೆಗೆ ಸಮಾನ ಆದ್ಯತೆ ನೀಡಿ ಚಿತ್ರವನ್ನು ನಿರ್ಮಿಸಲಾಗುತ್ತಿದ್ದು, ಶೀಘ್ರದಲ್ಲೇ ಚಿತ್ರದ ಮುಹೂರ್ತ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

