ಹಾವೇರಿ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಅವರ ಕಲ್ಪನೆಯ ‘ವಿಕಸಿತ ಭಾರತ 2047’ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಪ್ರತಿಯೊಬ್ಬ ನಾಗರಿಕನೂ ಸಮರ್ಪಣಾ ಭಾವದಿಂದ ಶ್ರಮಿಸಬೇಕು. ಈ ಸುದೀರ್ಘ ಪ್ರಗತಿಯ ಪಯಣಕ್ಕೆ ಎಲ್ಲರೂ ಸಿದ್ಧರಾಗಿ ಪ್ರತಿಜ್ಞೆ ಸ್ವೀಕರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 78-80 ವರ್ಷಗಳ ಸುದೀರ್ಘ ಅವಧಿಯಲ್ಲಿ ದೇಶವು ಸಾಗಿ ಬಂದಿರುವ ದಾರಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಮುಂದಿನ ಭವಿಷ್ಯವನ್ನು ಶಕ್ತಿಯುತವಾಗಿ ನಿರ್ಮಾಣ ಮಾಡಲು ಇದು ಸೂಕ್ತ ಸಮಯ ಎಂದು ಬೊಮ್ಮಾಯಿ ತಿಳಿಸಿದರು.
ಆರ್‌ಎಸ್‌ಎಸ್‌ಗೆ ರಾಜ್ಯ ಸರ್ಕಾರದಿಂದ ಅಂಕುಶದ ಕುರಿತು
ಆರ್‌ಎಸ್‌ಎಸ್‌ಗೆ ರಾಜ್ಯ ಸರ್ಕಾರದಿಂದ ಅಂಕುಶ ಹಾಕಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, “ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ನಾಗರಿಕ ಹಕ್ಕುಗಳು, ವೈಯಕ್ತಿಕ ಹಕ್ಕುಗಳು ಹಾಗೂ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಈ ಹಕ್ಕುಗಳ ಉಲ್ಲಂಘನೆಯಾಗದಂತೆ ಕಾನೂನು ಚೌಕಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕು” ಎಂದರು.
ಸಂಸ್ಕೃತಿ ಮತ್ತು ಐಕ್ಯತೆ
ನಮ್ಮ ದೇಶಕ್ಕೆ ಭವ್ಯ ಪರಂಪರೆ, ಸಂಸ್ಕೃತಿ ಹಾಗೂ ವರ್ಷವಿಡೀ ಆಚರಿಸುವ ಹಬ್ಬ-ಹರಿದಿನಗಳ ಸುದೀರ್ಘ ಇತಿಹಾಸವಿದೆ. ಇಂತಹ ಆಚರಣೆಗಳು ಜನರನ್ನು ಒಂದಾಗಿ ಜೋಡಿಸುವ ಕೆಲಸ ಮಾಡಬೇಕು. ಇಂಥಹ ಪ್ರಕ್ರಿಯೆಗೆ ಅಡಚಣೆ ಮಾಡುವ ಕಾನೂನು ತರಲು ಹೊರಟಿರುವವರು ಸಂವಿಧಾನ ವಿರೋಧಿಗಳು. ಇಂಥಹ ಕಾನೂನು ತರಲು ಹೋಗಿ ಹಿಂದೆ ನ್ಯಾಯಾಲಯಗಳಲ್ಲಿ ಸೋಲು ಕಂಡಿದ್ದಾರೆ. ಇದರ ಹಣೆಬರಹವೂ ಅಷ್ಟೇ, ಕಾನೂನಿನ ಹೋರಾಟದಲ್ಲಿ ನಿಲ್ಲುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.
ಸಂಪುಟಕ್ಕೆ ನಾಗೇಂದ್ರ ಮರು ಸೇರ್ಪಡೆ ಉದ್ಧಟತನ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 89 ಕೋಟಿ ರೂ. ಅವ್ಯವಹಾರವಾಗಿದೆ ಎಂದು ಖುದ್ದು ಹಿಂದಿನ ಸಿಎಂ ಸಿದ್ದರಾಮಯ್ಯನವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ. ಅಧಿಕಾರಿಗಳು ಸಮಗ್ರ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದು, ಹಣ ಎಲ್ಲಿಂದ ಬಂತು ಮತ್ತು ಎಲ್ಲಿಗೆ ಹೋಯಿತು ಎಂಬುದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದಾರೆ. ಇಷ್ಟಾದರೂ, ಚಾರ್ಜ್‌ಶೀಟ್ ಎದುರಿಸುತ್ತಿರುವ ಬಿ. ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ ಮತ್ತು ನೈತಿಕತೆಯ ಬಗ್ಗೆ ಇರುವ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇದು ಉದ್ಧಟತನದ ಪರಮಾವಧಿಯಾಗಿದ್ದು, ಬಿಜೆಪಿ ಇದನ್ನು ತೀವ್ರವಾಗಿ ವಿರೋಧಿಸುತ್ತದೆ ಎಂದು ಕಿಡಿಕಾರಿದರು.
ಸಚಿವ ಜಮೀರ್ ಅಹ್ಮದ್ ಖಾನ್ ಕಡೆಗಣನೆ
ದಾವಣಗೆರೆ ಚುನಾವಣೆಯ ಬಳಿಕ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದಲ್ಲಿ ತಮ್ಮ ಸ್ಥಾನಮಾನ ಹಾಗೂ ಗೌರವವನ್ನು ಕಳೆದುಕೊಂಡಿದ್ದಾರೆ. ಅವರನ್ನು ಪ್ರತಿಯೊಂದು ಹಂತದಲ್ಲೂ ಕಡೆಗಣಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಬೇಡ ಎಂದಿರುವ ಅವರ ಮುಂದಿನ ನಡೆಗಳನ್ನು ನಾವು ಕಾದುನೋಡಬೇಕಿದೆ” ಎಂದರು.
ಮಲ್ಲಿಕಾರ್ಜುನ ಖರ್ಗೆ ಭಾಷಣದ ಸ್ಥಳದ ‘ಶುದ್ಧೀಕರಣ’ ಖಂಡನೀಯ
ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿ ಹೋದ ಬಳಿಕ, ಕೆಲವು ಕಿಡಿಗೇಡಿಗಳು ಆ ಸ್ಥಳವನ್ನು ‘ಶುದ್ಧೀಕರಣ’ ಮಾಡಿದ ಘಟನೆಯನ್ನು ಬೊಮ್ಮಾಯಿ ತೀವ್ರವಾಗಿ ಖಂಡಿಸಿದರು.
ಹಿರಿಯ ನಾಯಕರೊಬ್ಬರು ಭಾಷಣ ಮಾಡಿ ಹೋದ ಬಳಿಕ ಆ ಜಾಗವನ್ನು ಶುದ್ಧೀಕರಣ ಮಾಡುವುದು ಅಕ್ಷಮ್ಯ ಅಪರಾಧ. ಇದನ್ನು ನಾವು ಎಂದಿಗೂ ಒಪ್ಪುವುದಿಲ್ಲ. ಇದು ಅವರಿಗೆ ಮಾಡಿದ ಅವಮಾನವಾಗಿದ್ದು, ಇಂತಹ ಕೃತ್ಯಗಳನ್ನು ನಾವು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪುಣೆಯ 6,000 ಕೋಟಿ ಮೌಲ್ಯದ ಡ್ರಗ್ಸ್ ಮಾಫಿಯಾ ಕೇಸ್ – ಪ್ರಕರಣದ ಕಿಂಗ್‌ಪಿನ್ ವಿರೇಂದ್ರ ಬೈಸೋಯಾ ಅರೆಸ್ಟ್
ಭಯೋತ್ಪಾದಕರಿಗೆ ರಾಜ್ಯವು ‘ಸೇಫ್ ಹೆವೆನ್’ ಆಗಿದೆ
ರಾಜ್ಯದಲ್ಲಿ ಭಯೋತ್ಪಾದನೆ ಮತ್ತು ಭದ್ರತಾ ಲೋಪದ ಕುರಿತು ಮಾತನಾಡಿದ ಅವರು, ದಾವಣಗೆರೆ ಹಾಗೂ ಕಲಬುರಗಿಯಲ್ಲಿ ಉಗ್ರರ ಬಂಧನವಾಗಿರುವುದನ್ನು ಉಲ್ಲೇಖಿಸಿದರು. ರಾಜ್ಯದಲ್ಲಿ ಮತ್ತೆ ಸ್ಲೀಪರ್ ಸೆಲ್‌ಗಳು ಕ್ರಿಯಾಶೀಲವಾಗುತ್ತಿವೆ ಮತ್ತು ಹೊಸ ನೇಮಕಾತಿಗಳು ನಡೆಯುತ್ತಿವೆ ಎಂದು ಇಂಟೆಲಿಜೆನ್ಸ್ ಮಾಹಿತಿ ಇದೆ ಎಂದರು.
ನಾವು ಅಧಿಕಾರದಲ್ಲಿದ್ದಾಗ 15ಕ್ಕೂ ಹೆಚ್ಚು ಉಗ್ರರನ್ನು ಬಂಧಿಸಿ ಜೈಲಿಗಟ್ಟಿದ್ದೆವು. ಆದರೆ ಈಗ ರಾಜ್ಯ ಪೊಲೀಸರಿಗೆ ಮಾಹಿತಿ ಇದ್ದರೂ, ಅವರ ಮೇಲಿರುವ ‘ರಾಜಕೀಯ ಒತ್ತಡ’ ಹಾಗೂ ‘ರಾಜಕೀಯ ಇಚ್ಛಾಶಕ್ತಿ ಕೊರತೆ’ಯಿಂದಾಗಿ ದಿಟ್ಟ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರವೇಶಿಸಿ ಉಗ್ರರನ್ನು ಬಂಧಿಸುವಂತಾಗಿದೆ. ದೇಶದ ಭದ್ರತೆ ವಿಚಾರದಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಖುಷಿಯಾಗಿಲ್ಲ
ಸಚಿವ ಸಂಪುಟದ ಬೆಳವಣಿಗೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಸಂಪುಟ ವಿಸ್ತರಣೆ ಹಾಗೂ ನಿರ್ಧಾರಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುಷಿಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಅವರ ಆಪ್ತರೇ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಬಹಿರಂಗವಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಮಟ್ಟದ ಆಂತರಿಕ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ ಎಂದು ಹೇಳಿದರು.
ಮೇಕೆದಾಟು ಯೋಜನೆಯೇ ಪರಿಹಾರ
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ಮೇಕೆದಾಟು ಯೋಜನೆ ಒಂದೇ ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ” ಎಂದು ಸ್ಪಷ್ಟಪಡಿಸಿದರು.
ಅತಿ ಹೆಚ್ಚು ಮಳೆಯಾದ ವರ್ಷಗಳಲ್ಲಿ ಹೆಚ್ಚುವರಿ ನೀರನ್ನು ಸುಮಾರು 66-67 ಟಿಎಂಸಿ ಶೇಖರಣೆ ಮಾಡಿಟ್ಟುಕೊಂಡರೆ ಮಾತ್ರ, ಮಳೆ ಅಭಾವವಿರುವ ವರ್ಷಗಳಲ್ಲಿ ಉಂಟಾಗುವ ಸಂಘರ್ಷವನ್ನು ತಡೆಯಲು ಸಾಧ್ಯ. ಮೇಕೆದಾಟು ನಿರ್ಮಾಣವಾಗದಿದ್ದರೆ ಪ್ರತಿ ಮಳೆ ಕೊರತೆ ವರ್ಷದಲ್ಲೂ ಈ ಸಮಸ್ಯೆ ಮರುಕಳಿಸುತ್ತಲೇ ಇರುತ್ತದೆ ಎಂದರು.
ಏತ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆಗೆ ಆಗ್ರಹ
ರಾಜ್ಯದಲ್ಲಿ ವರದಾ, ತುಂಗಭದ್ರಾ, ಕೃಷ್ಣಾ, ಮಲಪ್ರಭಾ ಮತ್ತು ಕುಮುದ್ವತಿ ಸೇರಿದಂತೆ ಪ್ರಮುಖ ನದಿಗಳು ಭರ್ತಿಯಾಗಿ ಹರಿಯುತ್ತಿದ್ದರೂ, ಒಳನಾಡಿನಲ್ಲಿ ಸರಿಯಾಗಿ ಮಳೆಯಾಗದ ಕಾರಣ ಕೆರೆಗಳು ತುಂಬಿಲ್ಲ. ರಾಜ್ಯದಲ್ಲಿ ಸುಮಾರು 135 ಲಿಫ್ಟ್ ಇರಿಗೇಷನ್ ಯೋಜನೆಗಳ ವಿದ್ಯುತ್ ಬಿಲ್ ಅನ್ನು ನೀರಾವರಿ ಇಲಾಖೆ ಪಾವತಿಸದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಸರಿಯಾದ ನಿರ್ವಹಣೆ ಇಲ್ಲದೆ ವಿದ್ಯುತ್ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕೇವಲ ಸಭೆಗಳನ್ನು ನಡೆಸಿ ಭಾಷಣ ಮಾಡುವುದರಿಂದ ಅಥವಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಮುಖ್ಯಮಂತ್ರಿಗಳು ತಕ್ಷಣವೇ 135 ಲಿಫ್ಟ್ ಇರಿಗೇಷನ್ ಯೋಜನೆಗಳಿಗೆ ಅಗತ್ಯವಿರುವ ಅನುದಾನ ಹಾಗೂ ವಿದ್ಯುತ್ ಬಿಲ್ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಹಿಪ್ಪರಗಿ ಕಾರು ಸ್ಫೋಟ ಪ್ರಕರಣ| ಬಯಲಾಯ್ತು ಕೊಲೆಯ ಮಹಾಸಂಚು; ನಾಲ್ವರು ಆರೋಪಿಗಳ ಬಂಧನ
ಅಡಿಕೆ ಬೆಳೆಗಾರರ ಹಿತರಕ್ಷಣೆಯೂ ಮುಖ್ಯ
ರಾಜ್ಯದಲ್ಲಿ ಗುಟ್ಕಾ ಮಾರಾಟ ನಿಷೇಧ ಹಾಗೂ ಅಡಿಕೆ ಬೆಳೆಗಾರರ ಮೇಲಾಗುವ ಪರಿಣಾಮಗಳ ಕುರಿತು ಮಾತನಾಡಿದ ಅವರು, ಸಾರ್ವಜನಿಕ ಆರೋಗ್ಯವನ್ನು ಕಾಪಾಡುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ಅಡಿಕೆ ಬೆಳೆಗಾರರ ಹಿತರಕ್ಷಣೆಯನ್ನೂ ಮಾಡಬೇಕಾಗಿದೆ. ಅಡಿಕೆ ಬೆಳೆ ಮೊದಲು ಮಲೆನಾಡಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಬಯಲುಸೀಮೆ ಪ್ರದೇಶಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.
ಅಡಿಕೆ ಬೆಳೆಯಿಂದ ಇಳುವರಿ ಪಡೆಯಲು ಕನಿಷ್ಠ 5 ವರ್ಷ ಕಾಯಬೇಕು. ರೈತರು ತಮ್ಮ ಸಂಪೂರ್ಣ ಸಂಪನ್ಮೂಲ ಹಾಗೂ ಹಣವನ್ನು ಇದರಲ್ಲಿ ಹೂಡಿಕೆ ಮಾಡಿರುತ್ತಾರೆ. ಈಗಾಗಲೇ ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಿಂದ ಅಡಿಕೆ ಸಾಗಾಟ ಹಾಗೂ ಮಾರಾಟಕ್ಕೆ ತೊಂದರೆ ಎದುರಾಗಿದ್ದು, ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.
ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಳ್ಳದೆ, ರೈತರ ಹಿತ ಕಾಯುವ ಸ್ಪಷ್ಟ ನೀತಿಯನ್ನು ರೂಪಿಸಬೇಕು. ಒಂದು ವೇಳೆ ಸರ್ಕಾರದ ನಿರ್ಧಾರದಿಂದ ರೈತರಿಗೆ ನಷ್ಟವಾದರೆ, ಆ ನಷ್ಟ ಪರಿಹಾರವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು.


