ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ(Hippargi) ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ್ದ ಕಾರು ಸ್ಫೋಟ(Car Blast) ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಇದೊಂದು ಪೂರ್ವಯೋಜಿತ ಕೊಲೆಯ ಸಂಚು ಎಂಬುದನ್ನು ಭೇದಿಸಿದ್ದಾರೆ.
ಭೂಮಿ ಹಾಗೂ ಹಣಕಾಸಿನ ವೈಷಮ್ಯದ ಹಿನ್ನೆಲೆಯಲ್ಲಿ ಬಾರ್ ವ್ಯವಸ್ಥಾಪಕ ಹನಮಂತ ಅಥಣಿ ಅವರನ್ನು ಹತ್ಯೆ(Murder) ಮಾಡಲು ಈ ಸ್ಫೋಟ ನಡೆಸಲಾಗಿತ್ತು ಎಂಬುದು ಬಹಿರಂಗವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ನಾಲ್ವರೂ ಆರೋಪಿಗಳು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನವರಾಗಿದ್ದಾರೆ. ತಿಗಣಿಬಿದರಿ ಗ್ರಾಮದ ನಿವಾಸಿ ಶಿವಾನಂದ ಪರಸಪ್ಪ ಜಲ್ಲಿ (29), ರೇವಣಪ್ಪ ನಿಂಗಪ್ಪ ಜಲ್ಲಿ (24), ಮಹಾದೇವ ಬೀರಪ್ಪ ಸಂಗಾಪುರ (21), ಮಲ್ಲಿಕಾರ್ಜುನ ಮುರಗೆಪ್ಪ ಭದ್ರಾಪನವರ (23) ಬಂಧಿತ ಆರೋಪಿಗಳು.
ಸ್ಫೋಟಕ ವಸ್ತುಗಳನ್ನು ವ್ಯವಸ್ಥೆ ಮಾಡಿಕೊಟ್ಟಿದ್ದ ಶಿವಾನಂದನ ಸಂಬಂಧಿ ಗಜಾನನ ಸಂಗಾಪುರ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕೊಲೆಗೆ ಯತ್ನಿಸಿದ್ದು ಯಾಕೆ?
ಪ್ರಕರಣದ ಪ್ರಮುಖ ಆರೋಪಿ (ಎ1) ಶಿವಾನಂದನ ದೊಡ್ಡಪ್ಪ ನಿಂಗಪ್ಪ ಕಾರಿನ ಮಾಲೀಕ ಹನುಮಂತ ಅವರ ಬಳಿ 40 ಲಕ್ಷ ಸಾಲ ಪಡೆದಿದ್ದ. ಸಾಲ ಮರುಪಾವತಿ ಮಾಡದ ಕಾರಣ ನಿಂಗಪ್ಪ ಅವರ 5 ಎಕರೆ ಜಮೀನನ್ನು ಹನುಮಂತ ತಮ್ಮ ವಶಕ್ಕೆ ಪಡೆದುಕೊಂಡಿದ್ದರು.
ಕುಟುಂಬದ ಆಸ್ತಿ ಬೇರೆಯವರ ಪಾಲಾಗುವುದು ಶಿವಾನಂದನಿಗೆ ಇಷ್ಟವಿರಲಿಲ್ಲ. ಹೀಗಾಗಿ ಸಾಲದ ಹಣವನ್ನು ತೀರಿಸಿ ಜಮೀನನ್ನು ಮರಳಿ ಪಡೆಯಲು ಮುಂದಾಗಿದ್ದ. ಇದಕ್ಕೆ ಒಪ್ಪಿದ ಹನುಮಂತ ಅಸಲು ₹0 ಲಕ್ಷ ಹಾಗೂ ಬಡ್ಡಿ ಸೇರಿ ಒಟ್ಟು ₹67 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದರಿಂದ ಹನುಮಂತ ತಮಗೆ ವಂಚಿಸುತ್ತಿದ್ದಾರೆ ಎಂದು ಭಾವಿಸಿದ ಶಿವಾನಂದ ಅವರನ್ನು ಮುಗಿಸಲು ಸಂಚು ರೂಪಿಸಿದ್ದ.
ಜುಲೈ 25ರ ರಾತ್ರಿ ನಡೆದದ್ದೇನು?
ಜುಲೈ 25ರಂದು ರಾತ್ರಿ ಶಿವಾನಂದ ಮತ್ತು ರೇವಣಪ್ಪ ಹಿಪ್ಪರಗಿಗೆ ತೆರಳಿ ಹನಮಂತ ಅವರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಜನರ ಸಂಚಾರ ಸಂಪೂರ್ಣ ಕಡಿಮೆಯಾದ ಬಳಿಕ, ಹನಮಂತ ಅವರ ಕಾರಿನ ಸಮೀಪ ಸ್ಫೋಟಕ ಸಾಧನವನ್ನು ಇಟ್ಟಿದ್ದರು.
ಚಿಕ್ಕ ವಯಸ್ಸಿನಲ್ಲೇ ಜಿಲೆಟಿನ್ ಕಡ್ಡಿ ಬಳಸುವ ವಿಧಾನ ತಿಳಿದುಕೊಂಡಿದ್ದ ಶಿವಾನಂದ, 25 ರಿಂದ 30 ಜಿಲೆಟಿನ್ ಕಡ್ಡಿಗಳನ್ನು ಒಟ್ಟುಗೂಡಿಸಿ, ಕೆಪಾಸಿಟರ್ ಹಾಗೂ ಡಿಟೋನೇಟರ್ ಮೂಲಕ ಹನುಮಂತ ಅವರ ಕಾರಿನ ಟೈರ್ ಬಳಿ ಇರಿಸಿ ಸ್ಫೋಟಿಸಿದ್ದ. ರಾತ್ರಿ ಸುಮಾರು 10:45ಕ್ಕೆ ಭೀಕರ ಸ್ಫೋಟ ಸಂಭವಿಸಿದ್ದು, ಕಾರು ಸಂಪೂರ್ಣವಾಗಿ ಜಖಂಗೊಂಡಿತ್ತು. ಸ್ಫೋಟದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡರೂ, ಹನುಮಂತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಸಿಕ್ಕಿಬಿದ್ದಿದ್ದು ಹೇಗೆ?
ಹನಮಂತ ಅವರು ಬದುಕುಳಿದಿರುವುದು ಗೊತ್ತಾದ ಬಳಿಕ, ಆರೋಪಿಗಳು ಸೆಕೆಂಡ್ ಹ್ಯಾಂಡ್ ಮೊಬೈಲ್ ಹಾಗೂ ನಕಲಿ ಸಿಮ್ ಕಾರ್ಡ್ ಬಳಸಿ ಆಗಸ್ಟ್ 6ರಂದು ಎಸ್‌ಎಂಎಸ್ ಮತ್ತು ವಾಟ್ಸಾಪ್ ಮೂಲಕ ಹನಮಂತ ಹಾಗೂ ಅವರ ಸಹೋದರ ಬಸವರಾಜ್ ಅವರಿಗೆ ಬೆದರಿಕೆ ಸಂದೇಶ ರವಾನಿಸಿದ್ದರು. ಭೂಮಿ ಮತ್ತು ಹಣದ ಬೇಡಿಕೆ ಕೈಬಿಡುವಂತೆ ಬೆದರಿಸಿದ್ದರು.
ಈ ಬೆದರಿಕೆ ಸಂದೇಶದ ಮೊಬೈಲ್ ಸಿಗ್ನಲ್, ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ನೆಟ್‌ವರ್ಕ್ ಡೇಟಾ ಹಾಗೂ ಸ್ಫೋಟಕ ಖರೀದಿಯ ಮೂಲವನ್ನು ಬೆನ್ನತ್ತಿದ ತನಿಖಾ ತಂಡ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ. ಅಥಣಿ ಮತ್ತು ವಿಜಯಪುರದಲ್ಲಿ ಸ್ಫೋಟಕ ಮಾರಾಟ ಮಾಡಿದ್ದ ತಲಾ ಒಂದು ಅಂಗಡಿಯ ಮಾಲೀಕರು ಮತ್ತು ವ್ಯವಸ್ಥಾಪಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸಿದ್ಧಾರ್ಥ್ ಗೋಯಲ್ ಅವರ ನೇತೃತ್ವದಲ್ಲಿ, ಹೆಚ್ಚುವರಿ ಎಸ್‌ಪಿ ಜಗದೀಶ್, ಜಮಖಂಡಿ ಡಿವೈಎಸ್‌ಪಿ ಜಮೀರ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಎಂ.ಡಿ. ಮಡ್ಡಿ ಹಾಗೂ ಪಿಎಸ್‌ಐಗಳ ತನಿಖಾ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.

