ದುರ್ಬಲಗೊಳ್ಳುತ್ತಿರುವ ಅಟ್ಲಾಂಟಿಕ್ ಸಾಗರದ ಪ್ರವಾಹ (Atlantic Meridional Overturning Circulation) ಭಾರತದ (india) ಮಾನ್ಸೂನ್ ಮಳೆಯ (Rain) ಸ್ಥಿತಿಯನ್ನೇ ಬದಲಾಯಿಸುವ ಭಯ ಕಾಡುತ್ತಿದೆ. ಇದು ವಿಶೇಷವಾಗಿ ಮಧ್ಯ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಮಾನ್ಸೂನ್ ಮಳೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಅಂದಹಾಗೆ ಅಟ್ಲಾಂಟಿಕ್ ಸಾಗರದ ಪ್ರವಾಹ ಎಂದರೇನು? ಇದಕ್ಕೂ ಭಾರತದ ಮಾನ್ಸೂನ್ ಮಳೆಗೂ ಇರುವ ಸಂಬಂಧವೇನು? ಇದು ಹೇಗೆ ಮಾನ್ಸೂನ್ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಏನಿದು ಅಟ್ಲಾಂಟಿಕ್ ಸಾಗರ ಪ್ರವಾಹ?
ಅಟ್ಲಾಂಟಿಕ್ ಮೆರಿಡಿಯನಲ್ ಓವರ್‌ಟರ್ನಿಂಗ್ ಸರ್ಕ್ಯುಲೇಷನ್ (AMOC) ಭೂಮಿಯ ಪ್ರಮುಖ ಸಾಗರ ಪರಿಚಲನಾ ವ್ಯವಸ್ಥೆಯಾಗಿದೆ. ಇದನ್ನು ಸಾಮಾನ್ಯವಾಗಿ ದೈತ್ಯ ಸಾಗರ ʻಕನ್ವೇಯರ್ ಬೆಲ್ಟ್ʼ ಎಂದು ಕರೆಯಲಾಗುತ್ತದೆ. ಇದು ಉಷ್ಣವಲಯದಿಂದ ಬೆಚ್ಚಗಿನ ಮೇಲ್ಮೈ ನೀರನ್ನು ಉತ್ತರದ ಅಟ್ಲಾಂಟಿಕ್ ಸಾಗರಕ್ಕೆ ಮತ್ತು ತಂಪಾದ ನೀರನ್ನು ಆಳವಾದ ಸಾಗರ ಪ್ರವಾಹಗಳ ಮೂಲಕ ದಕ್ಷಿಣಕ್ಕೆ ಕಳುಹಿಸುತ್ತದೆ.

ಈ ಪರಿಚಲನೆಯು ಭೂಮಿಯ ಶಾಖವನ್ನು, ಜಾಗತಿಕ ಹವಾಮಾನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಏಷ್ಯಾ ಸೇರಿದಂತೆ ಬಹು ಖಂಡಗಳಲ್ಲಿ ಮಳೆ ವ್ಯವಸ್ಥೆ, ತಾಪಮಾನ, ಚಂಡಮಾರುತ ಮತ್ತು ಮಾನ್ಸೂನ್ ಮೇಲೆ ಪ್ರಭಾವ ಬೀರುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಹವಾಮಾನ ಬದಲಾವಣೆಯಿಂದ AMOC ದುರ್ಬಲಗೊಳ್ಳುತ್ತಿರುವ ಸೂಚನೆ ಸಿಗುತ್ತಿದೆ. ಇದು ಗ್ರೀನ್‌ಲ್ಯಾಂಡ್‌ನ ಮಂಜುಗಡ್ಡೆ ಕರಗುವಿಕೆಗೂ ಕಾರಣವಾಗುತ್ತಿದೆ.
ಭಾರತದ ಮಾನ್ಸೂನ್‌ಗೂ AMOC ಏನು ಸಂಬಂಧ?
ಭಾರತದ ಮಾನ್ಸೂನ್ ಮಳೆ ಭೂಮಿ ಮತ್ತು ಸಾಗರದ ನಡುವಿನ ತಾಪಮಾನ ವ್ಯತ್ಯಾಸಗಳಿಂದ ಆಗುತ್ತದೆ. ಬೇಸಿಗೆಯಲ್ಲಿ, ಭಾರತ ಉಪಖಂಡವು ಸುತ್ತಮುತ್ತಲಿನ ಸಾಗರಗಳಿಗಿಂತ ವೇಗವಾಗಿ ಬಿಸಿಯಾಗುತ್ತದೆ. ಅಲ್ಲದೇ ಅರೇಬಿಯನ್ ಸಮುದ್ರ ಮತ್ತು ಬಂಗಾಳಕೊಲ್ಲಿಯಿಂದ ತೇವಾಂಶ ತುಂಬಿದ ಗಾಳಿಯನ್ನು ಎಳೆಯುವ ಕಡಿಮೆ ಒತ್ತಡವನ್ನು ಸೃಷ್ಟಿಸುತ್ತದೆ. AMOC ಜಾಗತಿಕ ಶಾಖ ವಿತರಣೆ ಮತ್ತು ವಾತಾವರಣದ ಪರಿಚಲನೆ ಪರಿಣಾಮ ಬೀರುವ ಮೂಲಕ ಪರೋಕ್ಷವಾಗಿ ಈ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತದೆ.
AMOC ದುರ್ಬಲಗೊಂಡರೆ ಮಾನ್ಸೂನ್ ಮೋಡಗಳ ಸಂಚಾರ ದುರ್ಬಲಗೊಳ್ಳಬಹುದು ಅಥವಾ ಮಳೆಯ ವ್ಯವಸ್ಥೆಯನ್ನೇ ಹೆಚ್ಚು ಅತಂತ್ರಗೊಳಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಸುಮಾರು ಅರ್ಧದಷ್ಟು ಕೃಷಿಭೂಮಿ ಮಳೆಯ ಮೇಲೆ ಹೆಚ್ಚು ಅವಲಂಬಿತವಾಗಿರುವ ದೇಶಕ್ಕೆ, ಸಣ್ಣ ಮಾನ್ಸೂನ್ ಬದಲಾವಣೆಗಳು ಸಹ ಪ್ರಮುಖ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಬೀರಲಿದೆ.

ಕೃಷಿ ಮತ್ತು ಆರ್ಥಿಕತೆ ಮೇಲೆ ದುಷ್ಪರಿಣಾಮ: ಭಾರತದ ಕೃಷಿಯು ಮಾನ್ಸೂನ್ ಮಳೆಯನ್ನು ಅವಲಂಬಿಸಿರುವುದರಿಂದ, ಈ ಬದಲಾವಣೆಗಳು ಬೆಳೆ ನಾಶ, ಆಹಾರ ಅಭದ್ರತೆ ಮತ್ತು ಗ್ರಾಮೀಣ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, AMOC ದುರ್ಬಲಗೊಳ್ಳುವುದು ಭಾರತಕ್ಕೆ ಕೇವಲ ಸಾಗರದಲ್ಲಿನ ಬದಲಾವಣೆಯಲ್ಲ. ದೇಶದ ಆಹಾರ ಭದ್ರತೆ ಮತ್ತು ಆರ್ಥಿಕತೆಯ ಮೇಲಿನ ನೇರ ಬೆದರಿಕೆಯಾಗಿದೆ.
ಭಾರತದ 80% ವಾರ್ಷಿಕ ಮಳೆ ಜೂನ್-ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಬರುತ್ತದೆ. ಈ ಅವಧಿಯಲ್ಲಿ ಕೃಷಿ ಚಟುವಟಿಕೆ ಚುರುಕಾಗಿರುತ್ತದೆ. ಮಳೆ ಕಡಿಮೆಯಾದರೆ ಭತ್ತ, ಗೋಧಿ, ಕಾಳುಗಳು, ಕಬ್ಬು ಸೇರಿದಂತೆ ಹಲವು ಬೆಳೆಗಳ ಇಳುವರಿ ಕುಂಠಿತವಾಗಲಿದೆ. ಇದರಿಂದ ಆಹಾರ ಅಭದ್ರತೆ ಉಂಟಾಗಬಹುದು. ಇನ್ನೂ ಇವುಗಳನ್ನೇ ನಂಬಿಕೊಂಡ ಕಾರ್ಖಾನೆಗಳಿಗೂ ಮುಚ್ಚುವ ಭೀತಿ ಎದುರಾಗಲಿದೆ.
ಜಲ ವಿದ್ಯುತ್ ಉತ್ಪಾದನೆ ಕುಂಠಿತ
ಮಳೆ ಕಡಿಮೆಯಾದರೆ ಜಲಾಶಯ, ನೀರಾವರಿ, ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಜಲವಿದ್ಯುತ್ ಉತ್ಪಾದನೆಯಲ್ಲೂ ಕುಸಿತ ಕಾಣಲಿದೆ.
2100ರ ವೇಳೆಗೆ AMOC 59% ವರೆಗೆ ನಿಧಾನ ಆಗಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಕೆಲವು ಅಧ್ಯಯನಗಳು AMOC ಈ ಶತಮಾನದಲ್ಲಿ ತುಂಬಾ ದುರ್ಬಲವಾಗಲ್ಲ. ಆದ್ರೂ ದುರ್ಬಲ ಆಗೋದು ಖಚಿತ ಎಂದು ದೃಢಪಡಿಸಿವೆ.

