ಯಾದಗಿರಿ: ಮಗ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿ, ಚಿಕಿತ್ಸೆ ಪಡೆದು ಸದ್ಯ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಆದರೂ ಆಶಾ ಕಾರ್ಯಕರ್ತೆಯೊಬ್ಬರು ತಮ್ಮ ಮಗನ ಆರೈಕೆ ಜೊತೆ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕಾಟಮನಹಳ್ಳಿ ಆಶಾ ಕಾರ್ಯಕರ್ತೆ ದಾನಮ್ಮ ತನ್ನ ಕುಟುಂಬ ನೋವಿನಲ್ಲಿದ್ದರೂ ಜನರ ಸೇವೆ ಮಾಡುತ್ತಿದ್ದಾರೆ. ದಾನಮ್ಮ ಕೊರೊನಾ ಭೀತಿಯಿಂದ ಜಿಲ್ಲೆಗೆ ವಾಪಸಾಗಿರುವ ಕೂಲಿ ಕಾರ್ಮಿಕರಿಗೆ ಮತ್ತು ವಿದೇಶದಿಂದ ಬಂದವರಿಗೆ ತಪಾಸಣೆಗೆ ನಡೆಸಿ ವರದಿ ತಯಾರಿಸುತ್ತಿದ್ದಾರೆ. ಜೊತೆಗೆ ವಿವಿಧ ಹಳ್ಳಿಗಳಿಗೆ ತೆರಳಿ ಕೊರೊನಾ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.
Advertisement
Advertisement
ಕಳೆದ ವಾರ ದಾನಮ್ಮರ ಮಗ ವಿಜಾಪುರದಿಂದ ಯಾದಗಿರಿಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ, ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕಲಬುರಗಿ ಖಾಸಗಿ ಆಸ್ಪತ್ರೆಗೆ ಸೇರಿದ್ದನು. ಸದ್ಯ ಸ್ವಲ್ಪ ಚೇತರಿಸಿಕೊಂಡಿರುವ ದಾನಮ್ಮನ ಮಗ ರಾಹುಲ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ. ಇಂತಹ ಸಮಯದಲೂ ತಮ್ಮ ವೃತ್ತಿಗೆ ಗೌರವ ಕೊಡುತ್ತಿರುವ ದಾನಮ್ಮ, ಮಗನ ಆರೈಕೆ ಜೊತೆಗೆ ಜನರ ಹಿತವನ್ನು ಸಹ ಕಾಯುತ್ತಿದ್ದಾರೆ. ದಾನಮ್ಮ ಕಾರ್ಯಕ್ಕೆ ಜಿಲ್ಲೆಯಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತದೆ.