ಚೆನ್ನೈ: ನಟಿ ತ್ರಿಷಾ ವಿರುದ್ಧ ಡಬಲ್ ಮಿನಿಂಗ್ ಹೇಳಿಕೆ ವಿವಾದದಲ್ಲಿ ಅರೆಸ್ಟ್ ಆಗಿದ್ದ ತಮಿಳುನಾಡು ವಿಧಾನಸಭೆಯ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನ ಬಿಡುಗಡೆ ಮಾಡಲು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ಈ ಬೆನ್ನಲ್ಲೇ ಡಿಎಂಕೆ ಅಧ್ಯಕ್ಷ ಹಾಗೂ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್, ವಿಜಯ್ ನೇತೃತ್ವದ ಟಿವಿಕೆ (TVK) ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ʻXʼ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಕಾವೇರಿ ವಿಚಾರದಿಂದ ಜನರ ಗಮನವನ್ನ ಬೇರೆಡೆ ಸೆಳೆಯುವ ಉದ್ದೇಶದಿಂದಲೇ ಉದಯನಿಧಿ ಅವರನ್ನ ಬಂಧಿಸಲಾಗಿದೆ. ಅಲ್ಲದೇ, ಹೈಕೋರ್ಟ್ ನೀಡಿದ ಆದೇಶವು ಸರ್ಕಾರದ ʻಫ್ಯಾಸಿಸ್ಟ್ ಧೋರಣೆಗೆʼ ದೊಡ್ಡ ಹಿನ್ನಡೆಯಾಗಿದೆ ಎಂದು ಅವರು ಟೀಕಿಸಿದ್ದಾರೆ. ಇದನ್ನೂ ಓದಿ: ಇಂದೇ ಉದಯನಿಧಿ ಸ್ಟಾಲಿನ್ ಬಿಡುಗಡೆ ಮಾಡಿ: ಮದ್ರಾಸ್ ಹೈಕೋರ್ಟ್
எதிர்க்கட்சித் தலைவர் உதயநிதி கைது: ஆணவம், அழிவுக்கு வழிவகுக்கும்; தொடர்ச்சியான ஆணவம், அழிவை விரைவுபடுத்தும்!#தொடைநடுங்கி_அரசு pic.twitter.com/bsF6gm0PzT
— M.K.Stalin (@mkstalin) August 4, 2026
‘ದುರಹಂಕಾರವೇ ವಿನಾಶಕ್ಕೆ ಕಾರಣ’
ಮುಂದುವರಿದು… ʻದುರಹಂಕಾರವೇ ವಿನಾಶಕ್ಕೆ ದಾರಿ. ನಿರಂತರ ಅಹಂಕಾರವು ವಿನಾಶವನ್ನ ಇನ್ನಷ್ಟು ವೇಗಗೊಳಿಸುತ್ತದೆ. ಕಾವೇರಿ ನೀರಿನ ಹಕ್ಕುಗಳನ್ನು ತಮಿಳುನಾಡಿಗೆ ಸಮರ್ಪಕವಾಗಿ ದೊರಕಿಸಿಕೊಡುವಲ್ಲಿ ಹಾಗೂ ಮೇಕೆದಾಟು ಅಣೆಕಟ್ಟು ಯೋಜನೆಯನ್ನ ತಡೆಯುವಲ್ಲಿ ಸರ್ಕಾರ ತೋರಿದ ನಿರ್ಲಕ್ಷ್ಯ ಮತ್ತು ಅಹಂಕಾರವನ್ನ ಖಂಡಿಸಲು ತಂಜಾವೂರಿನಲ್ಲಿ ಡಿಎಂಕೆ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಕರ್ತರು, ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ಸ್ಟಾಲಿನ್ ತಿಳಿಸಿದ್ದಾರೆ.
ಉದಯನಿಧಿ ಭಾಷಣಕ್ಕೆ ಬೆಂಬಲ
ಪ್ರತಿಭಟನೆಯಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಕಾವೇರಿ ವಿಚಾರದಲ್ಲಿ ಸರ್ಕಾರದ ವೈಫಲ್ಯವನ್ನ ತೀವ್ರವಾಗಿ ಟೀಕಿಸಿದ್ದರು. ಕಾವೇರಿ ನೀರನ್ನ ಸಮರ್ಪಕವಾಗಿ ಪಡೆಯುವಲ್ಲಿ ಸರ್ಕಾರ ವಿಫಲವಾಗಿದೆ, ಮೇಕೆದಾಟು ಅಣೆಕಟ್ಟು ಯೋಜನೆಯನ್ನ ತಡೆಯಲು ಕ್ರಮ ಕೈಗೊಂಡಿಲ್ಲ ಹಾಗೂ ರೈತರ ಸಂಕಷ್ಟಗಳನ್ನು ಕಡೆಗಣಿಸಿ ಸಿನಿಮಾಗೆ ಸಂಬಂಧಿಸಿದ ವಿವಾದಗಳತ್ತ ಮಾತ್ರ ಗಮನ ಹರಿಸುತ್ತಿದೆ ಎಂದು ಉದಯನಿಧಿ ಆರೋಪಿಸಿದ್ದಾಗಿ ಸ್ಟಾಲಿನ್ ಉಲ್ಲೇಖಿಸಿದರು. ಈ ಟೀಕೆಗಳಿಗೆ ಸರ್ಕಾರ ಉತ್ತರ ನೀಡಲು ಸಾಧ್ಯವಾಗದೆ, ಜನರ ಗಮನವನ್ನ ಬೇರೆಡೆ ಸೆಳೆಯುವ ಉದ್ದೇಶದಿಂದ ಉದಯನಿಧಿ ಅವರನ್ನ ಬಂಧಿಸಿದೆ ಎಂದು ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.

ಪೊಲೀಸರು ಉದಯನಿಧಿ ಸ್ಟಾಲಿನ್ ಅವರ ನಿವಾಸಕ್ಕೆ ತೆರಳಿ, ಪ್ರತಿಪಕ್ಷ ನಾಯಕ ಎಂಬ ಹುದ್ದೆಯಲ್ಲಿದ್ದರೂ ಅವರನ್ನ ಬಂಧಿಸಿ ತಂಜಾವೂರಿಗೆ ಕರೆದೊಯ್ದರು ಎಂದು ಸ್ಟಾಲಿನ್ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ತ್ರಿಷಾ ವಿರುದ್ಧ ವಿವಾದಾತ್ಮಕ ಹೇಳಿಕೆ – ಉದಯನಿಧಿ ಸ್ಟಾಲಿನ್ ಅರೆಸ್ಟ್
ಏನಿದು ವಿವಾದ?
ತಂಜಾವೂರಿನಲ್ಲಿ ಕಾವೇರಿ ನೀರಿನ ಬಿಕ್ಕಟ್ಟಿನ ಕುರಿತು ನಡೆದ ಡಿಎಂಕೆ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದ ಉದಯನಿಧಿ ಸ್ಟಾಲಿನ್, ನಮ್ಮ ಮುಖ್ಯಮಂತ್ರಿ ಕಾವೇರಿ ನೀರಿನ ವಿಷಯದ ಬಗ್ಗೆ ಬಾಯಿ ತೆರೆಯುತ್ತಿಲ್ಲ. ಅವರ ಏಕೈಕ ಚಿಂತೆ ಡಿಎಂಕೆ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೇಗೆ ಹಾಕುವುದು ಎಂಬುದು ಅಷ್ಟೇ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ವಿಜಯ್ ಸರ್ಕಾರವನ್ನು ಟೀಕಿಸುತ್ತಿದ್ದರು. ಇದೇ ವೇಳೆ ಜನಸಮೂಹದಿಂದ ‘ತ್ರಿಷಾ… ತ್ರಿಷಾ…’ ಎಂಬ ಘೋಷಣೆಗಳು ಕೇಳಿಬಂದವು. ಅದಕ್ಕೆ ಪ್ರತಿಕ್ರಿಯಿಸಿದ ಉದಯನಿಧಿ, ನಗುಮುಖದೊಂದಿಗೆ ತಮಿಳಿನಲ್ಲಿ ದ್ವಂದ್ವಾರ್ಥ ಬರುವ ರೀತಿಯಲ್ಲಿ ʼಯಾವ ನೀರು ಬರುತ್ತದೋ ಇಲ್ಲವೋ, ಆ ನೀರು ಬರಲೇಬೇಕುʼ ಎಂದು ಹೇಳಿದರು. ಈ ಮಾತು ನಟಿ ತ್ರಿಷಾ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿ, ಮಹಿಳೆಯನ್ನು ಅವಮಾನಿಸುವ ಹಾಗೂ ಅಶ್ಲೀಲ ಅರ್ಥ ನೀಡುವ ರೀತಿಯಲ್ಲಿದೆ ಎಂದು ಟಿವಿಕೆ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಆರೋಪಿಸಿವೆ.
ಸನಾತನ ಧರ್ಮದ ಬಗ್ಗೆ ಉದಯನಿಧಿ ಹೇಳಿದ್ದೇನು?
2023ರ ಸೆಪ್ಟೆಂಬರ್ 3 ರಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಸನಾತನನ ಧರ್ಮವು ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು ಎಂದು ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಸನಾತನ ಧರ್ಮ ಟೀಕಿಸಿದ್ದ ವ್ಯಕ್ತಿಯ ಬಂಧನವಾಗಿದೆ – ಉದಯನಿಧಿ ಬಂಧನಕ್ಕೆ ಕುಟುಕಿದ ಅಮಿತ್ ಮಾಳವೀಯ
