ಭಾರತದಲ್ಲಿ ಸೌರಶಕ್ತಿಯ ಬೆಳವಣಿಗೆ ಕಳೆದ ಒಂದು ದಶಕದಲ್ಲಿ ಗಮನಾರ್ಹ ವೇಗ ಪಡೆದುಕೊಂಡಿದೆ. 2016ರಲ್ಲಿ ಕೇವಲ 3 ಗಿಗಾವ್ಯಾಟ್ (GW) ಇದ್ದ ದೇಶದ ಸ್ಥಾಪಿತ ಸೌರಶಕ್ತಿ ಸಾಮರ್ಥ್ಯ, 2026ರ ವೇಳೆಗೆ 160 GW ಗಡಿ ದಾಟಿದೆ. ಈ ವೃದ್ಧಿಗೆ ಮುಖ್ಯವಾಗಿ ಭೂಮಿಯ ಮೇಲೆ ನಿರ್ಮಿಸಲಾದ ಬೃಹತ್ ಸೌರ ಯೋಜನೆಗಳೇ ಕಾರಣ. ಆದರೆ ಮುಂದಿನ ಹಂತದ ಸೌರಶಕ್ತಿ ವಿಸ್ತರಣೆಗೆ ಹೊಸ ಸವಾಲು ಎದುರಾಗಿದೆ. ಸೌರ ಯೋಜನೆಗಳಿಗೆ ಅಗತ್ಯವಿರುವ ಭೂಮಿ ನಗರೀಕರಣ ಮತ್ತು ಕೃಷಿಯೊಂದಿಗೆ ಸ್ಪರ್ಧಿಸುತ್ತಿದೆ. ಮತ್ತೊಂದೆಡೆ, ಪರಿಸರ ಮತ್ತು ಜೀವವೈವಿಧ್ಯ ಸಂರಕ್ಷಣೆಯ ಅಗತ್ಯವೂ ಹೆಚ್ಚುತ್ತಿದೆ. ಹೀಗಾಗಿ ಹೆಚ್ಚುವರಿ ಭೂಮಿಯನ್ನ ಬಳಸದೇ ಸೌರಶಕ್ತಿ ಸಾಮರ್ಥ್ಯವನ್ನು ವಿಸ್ತರಿಸುವ ಮಾರ್ಗಗಳನ್ನು ನೀತಿನಿರೂಪಕರು ಹುಡುಕಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಅನುಮೋದನೆಗೊಂಡ ಪ್ರಧಾನಮಂತ್ರಿ ಸೂರ್ಯ ಸರೋವರ ಯೋಜನೆ (PM-SSY) ಮಹತ್ವ ಪಡೆದುಕೊಂಡಿದೆ. ಭೂಮಿಯ ಮೇಲಿನ ಒತ್ತಡ ಕಡಿಮೆ ಮಾಡುವ ಸೌರ ಯೋಜನೆಗಳಿಗೆ ಉತ್ತೇಜನ ನೀಡುವ ಉದ್ದೇಶವನ್ನು ಇದು ಸ್ಪಷ್ಟಪಡಿಸುತ್ತದೆ. ಯೋಜನೆಯಡಿ ದೇಶಾದ್ಯಂತ 5,000 ಮೆಗಾವ್ಯಾಟ್ (MW) ತೇಲುವ ಸೌರ ಯೋಜನೆಗಳನ್ನ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಒಟ್ಟು 5,070 ರೂ. ಕೋಟಿ ವೆಚ್ಚ ನಿಗದಿಪಡಿಸಲಾಗಿದೆ.
ಭಾರತದಲ್ಲಿ ತೇಲುವ ಸೌರಶಕ್ತಿಯನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದ ಮೊದಲ ಸಮರ್ಪಿತ ರಾಷ್ಟ್ರೀಯ ಯೋಜನೆ ಎಂಬ ಹೆಗ್ಗಳಿಕೆಯೂ PM-SSYಗೆ ಸಲ್ಲುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

ತೇಲುವ ಸೌರಶಕ್ತಿ ಎಂದರೇನು?
ತೇಲುವ ಸೌರಶಕ್ತಿ ಎಂದರೆ ಜಲಾಶಯಗಳು, ಕೆರೆಗಳು ಮತ್ತು ಇತರ ಒಳನಾಡು ಜಲಮೂಲಗಳ ಮೇಲೆ ತೇಲುವ ವೇದಿಕೆಗಳಲ್ಲಿ ಸೌರ ಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆ.
ಈ ತೇಲುವ ವೇದಿಕೆಗಳು ಜಲಾಶಯದ ತಳಭಾಗ ಅಥವಾ ದಡಕ್ಕೆ ಆಂಕರ್‌ಗಳ ಮೂಲಕ ಸ್ಥಿರಗೊಳಿಸಲಾಗುತ್ತವೆ. ಯೋಜನೆಯ ವಿನ್ಯಾಸಕ್ಕೆ ಅನುಗುಣವಾಗಿ ಇನ್ವರ್ಟರ್‌ಗಳು ಮತ್ತು ಇತರ ವಿದ್ಯುತ್ ಉಪಕರಣಗಳನ್ನ ತೇಲುವ ವೇದಿಕೆಗಳ ಮೇಲೆಯೇ ಅಥವಾ ದಡದಲ್ಲಿಯೂ ಸ್ಥಾಪಿಸಬಹುದು. ಸೌರ ಫಲಕಗಳಿಂದ ಉತ್ಪಾದನೆಯಾಗುವ ವಿದ್ಯುತ್ ಅನ್ನು ವಿದ್ಯುತ್ ಕೇಬಲ್‌ಗಳ ಮೂಲಕ ದಡಕ್ಕೆ ರವಾನಿಸಲಾಗುತ್ತದೆ. ಭೂಮಿಯ ಅಗತ್ಯವಿಲ್ಲದ ಕಾರಣ ಕೈಗಾರಿಕಾ ಕೊಳಗಳು, ಜಲಾಶಯಗಳು ಮತ್ತು ಇತರ ಒಳನಾಡು ಜಲಮೂಲಗಳು ತೇಲುವ ಸೌರ ಯೋಜನೆಗಳಿಗೆ ಸೂಕ್ತವಾಗಿವೆ.
ಭಾರತಕ್ಕೆ ಏಕೆ ಮುಖ್ಯ?
ತೇಲುವ ಸೌರಶಕ್ತಿಯ ದೊಡ್ಡ ಪ್ರಯೋಜನವೆಂದರೆ ಭೂಮಿ ಉಳಿಸುವ ಸಾಮರ್ಥ್ಯ. ಕೃಷಿ ಮತ್ತು ನಗರ ಪ್ರದೇಶಗಳಿಗೆ ಅಗತ್ಯವಿರುವ ಭೂಮಿಯನ್ನು ಸೌರ ಯೋಜನೆಗಳಿಗಾಗಿ ಬಳಸುವ ಒತ್ತಡವನ್ನ ಇದು ಕಡಿಮೆ ಮಾಡಬಹುದು. ಒಂದೇ ಸಮಯದಲ್ಲಿ ಜಲಮೂಲಗಳ ಮೇಲ್ಮೈಯನ್ನ ಬಳಸಿಕೊಂಡು ಹೆಚ್ಚಿನ ಪ್ರಮಾಣದ ನವೀಕರಿಸಬಹುದಾದ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತದೆ.
ಇದರ ಮತ್ತೊಂದು ಪ್ರಯೋಜನ ನೀರಿನ ಆವಿಯಾಗುವಿಕೆಯನ್ನು ಕಡಿಮೆ ಮಾಡುವ ಸಾಧ್ಯತೆ. ಸೌರ ಫಲಕಗಳಿಂದ ಮುಚ್ಚಲ್ಪಟ್ಟ ಜಲಮೇಲ್ಮೈಯ ಭಾಗದಲ್ಲಿ ನೀರಿನ ಆವಿಯಾಗುವಿಕೆ ಕಡಿಮೆಯಾಗಬಹುದು. ಆದರೆ ಉಳಿತಾಯವಾಗುವ ನೀರಿನ ಪ್ರಮಾಣವು ಫಲಕಗಳಿಂದ ಆವೃತವಾಗಿರುವ ಪ್ರದೇಶ, ಸ್ಥಳೀಯ ಹವಾಮಾನ ಮತ್ತು ಜಲಾಶಯದ ಸ್ವರೂಪದ ಮೇಲೆ ಅವಲಂಬಿತವಾಗಿರುತ್ತದೆ. ಇದರ ಜೊತೆಗೆ, ಫಲಕಗಳ ಕೆಳಗಿನ ನೀರು ಅವುಗಳನ್ನು ತಂಪಾಗಿರಿಸಲು ನೆರವಾಗುತ್ತದೆ. ವಿಶೇಷವಾಗಿ ಬೇಸಿಗೆಯ ಬಿಸಿಲಿನ ಸಂದರ್ಭದಲ್ಲಿ ಇದು ಸೌರ ಫಲಕಗಳ ಕಾರ್ಯಕ್ಷಮತೆ ಮತ್ತು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನ ಹೆಚ್ಚಿಸಲು ಸಹಕಾರಿಯಾಗಬಹುದು.

ಭಾರತ ಈಗಾಗಲೇ ಹೆಜ್ಜೆ ಇಟ್ಟಿದೆ
ತೇಲುವ ಸೌರಶಕ್ತಿಯ ಕ್ಷೇತ್ರದಲ್ಲಿ ಭಾರತ ಈಗಾಗಲೇ ಕೆಲವು ಮಹತ್ವದ ಯೋಜನೆಗಳನ್ನ ಕೈಗೊಂಡಿದೆ. NTPC Limited ಸಂಸ್ಥೆಯು 2022 ರಲ್ಲಿ ತೆಲಂಗಾಣದ 100 MW (ಮೆಗಾವ್ಯಾಟ್) ರಾಮಗುಂಡಂ ಮತ್ತು ಕೇರಳದ 92 MW ಕಾಯಂಕುಲಂ ತೇಲುವ ಸೌರ ಯೋಜನೆಗಳನ್ನು ಕಾರ್ಯಾರಂಭಗೊಳಿಸಿತು. ಇವು ದೇಶದ ಪ್ರಮುಖ ತೇಲುವ ಸೌರ ಯೋಜನೆಗಳಲ್ಲಿವೆ.
ಮಧ್ಯಪ್ರದೇಶದ 600 MW ಓಂಕಾರೇಶ್ವರ ತೇಲುವ ಸೌರ ಪಾರ್ಕ್ ಮತ್ತೊಂದು ಮಹತ್ವದ ಯೋಜನೆಯಾಗಿದೆ. ಇದರಲ್ಲಿ ಪ್ರಸ್ತುತ 278 MW ಸಾಮರ್ಥ್ಯ ಕಾರ್ಯನಿರ್ವಹಿಸುತ್ತಿದೆ. ಸಂಪೂರ್ಣವಾಗಿ ಕಾರ್ಯಾರಂಭಗೊಂಡ ಬಳಿಕ, ಈ ಪಾರ್ಕ್ ತನ್ನ 25 ವರ್ಷಗಳ ಕಾರ್ಯಾವಧಿಯಲ್ಲಿ ಸುಮಾರು 460 ಕೋಟಿ ಯೂನಿಟ್‌ಗಳಷ್ಟು ಶುದ್ಧ ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ. ಈ ಬೆಳವಣಿಗೆಯ ನಡುವೆಯೂ ದೇಶದ ಒಟ್ಟು ತೇಲುವ ಸೌರಶಕ್ತಿ ಸ್ಥಾಪಿತ ಸಾಮರ್ಥ್ಯ ಇನ್ನೂ ಕೇವಲ 700 ಮೆಗ್ಯಾವ್ಯಾಟ್‌ನಷ್ಟು ಮಾತ್ರ ಇದೆ.
ಇದಕ್ಕೆ ಹೋಲಿಸಿದ್ರೆ ಅವಕಾಶ ಬಹಳ ದೊಡ್ಡದಾಗಿದೆ. ರಾಷ್ಟ್ರೀಯ ಸೌರಶಕ್ತಿ ಸಂಸ್ಥೆಯ ಇತ್ತೀಚಿನ ಮೌಲ್ಯಮಾಪನದ ಪ್ರಕಾರ, ಜಲಾಶಯಗಳ ಒಟ್ಟು ಪ್ರದೇಶದ ಕೇವಲ ಶೇ.20ರಷ್ಟನ್ನು ಮಾತ್ರ ಬಳಸಿಕೊಂಡರೂ ಭಾರತದಲ್ಲಿ ಸುಮಾರು 102 GW (ಗಿಗಾವ್ಯಾಟ್) ತೇಲುವ ಸೌರಶಕ್ತಿ ಸಾಮರ್ಥ್ಯವಿದೆ. ಅಂದರೆ ಪ್ರಸ್ತುತ ಸಾಮರ್ಥ್ಯಕ್ಕಿಂತ ಹಲವು ಪಟ್ಟು ಹೆಚ್ಚಿನ ಅವಕಾಶ ದೇಶದ ಮುಂದಿದೆ.
ಪಿಎಂ ಸೂರ್ಯ ಸರೋವರ ಯೋಜನೆ ಏನು ಬದಲಾಯಿಸಬಹುದು?
ಭಾರತದ ಪ್ರಸ್ತುತ ತೇಲುವ ಸೌರ ಯೋಜನೆಗಳು ಮುಖ್ಯವಾಗಿ ಕೆಲವು ದೊಡ್ಡ ಯೋಜನೆಗಳಿಗೆ ಮತ್ತು ಸರ್ಕಾರಿ ಸಂಸ್ಥೆಗಳು ಅಥವಾ ಸಾರ್ವಜನಿಕ ವಲಯದ ಕಂಪನಿಗಳಿಗೆ ಸೀಮಿತವಾಗಿವೆ. ಈ ಕ್ಷೇತ್ರವನ್ನು ದೇಶಾದ್ಯಂತ ವ್ಯಾಪಕಗೊಳಿಸುವಲ್ಲಿ ಪಿಎಂ ಸೂರ್ಯ ಸರೋವರ ಯೋಜನೆ (PM-SSY) ಮಹತ್ವದ ಪಾತ್ರವಹಿಸಬಹುದು. ಯೋಜನೆಯಡಿ ಅರ್ಹ ತೇಲುವ ಸೌರ ಯೋಜನೆಗಳು ಕಾರ್ಯಾರಂಭ ಮಾಡಿದ ಬಳಿಕ ಪ್ರತಿ ಮೆಗಾವ್ಯಾಟ್‌ಗೆ 1 ಕೋಟಿ ರೂ. ಕೇಂದ್ರ ಹಣಕಾಸು ನೆರವು (CFA) ನೀಡಲಾಗುತ್ತದೆ.

ಯೋಜನೆಯ ಯಶಸ್ಸಿಗೂ ಮುನ್ನ ಸಮಗ್ರ ಸಿದ್ಧತೆ ಅಗತ್ಯ. ಜಲಮೂಲದ ಆಳ, ತಳಭಾಗದ ಸ್ವರೂಪ ಮತ್ತು ಇತರ ಭೌತಿಕ ಗುಣಲಕ್ಷಣಗಳನ್ನು ತಿಳಿದುಕೊಳ್ಳಲು ಹೈಡ್ರೋಗ್ರಾಫಿಕ್ ಅಧ್ಯಯನಗಳು ಅಗತ್ಯವಾಗುತ್ತವೆ. ಅದೇ ರೀತಿ ಜಲಚರ ಜೀವಿಗಳು ಮತ್ತು ನೀರಿನ ಗುಣಮಟ್ಟದ ಮೇಲೆ ಯೋಜನೆಯ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಪರಿಸರ ಅಧ್ಯಯನಗಳೂ ಅತ್ಯಗತ್ಯ.
ಈ ಪೂರ್ವಸಿದ್ಧತಾ ಚಟುವಟಿಕೆಗಳಿಗೆ ಸಮುಯ & ಹಣ ಎರಡೂ ಅಗತ್ಯವಾಗುತ್ತವೆ. ಆದ್ರೆ ಯೋಜನೆಗಳಿಂದ ಎದುರಾಗಬಹುದಾದ ಅಪಾಯಗಳನ್ನ ಕಡಿಮೆ ಮಾಡಲು ಅವು ನಿರ್ಣಾಯಕ. PM-SSY ಈ ಅಗತ್ಯವನ್ನು ಪರಿಗಣಿಸಿ, ಇಂತಹ ಅಧ್ಯಯನ ಮತ್ತು ಸಿದ್ಧತಾ ಕಾರ್ಯಗಳಿಗೆ ಪ್ರತಿ ಯೋಜನೆಗೆ ಕೇಂದ್ರ ಸರ್ಕಾರವು ಗರಿಷ್ಠ 0.5 ಕೋಟಿ ರೂ. ಹೆಚ್ಚುವರಿ ಹಣಕಾಸು ನೆರವು ಒದಗಿಸುತ್ತದೆ.
ಸೌರಶಕ್ತಿಯ ಜೊತೆಗೆ ಶಕ್ತಿ ಸಂಗ್ರಹಣೆ
PM-SSY ಕೇವಲ ಸೌರ ವಿದ್ಯುತ್ ಉತ್ಪಾದನೆಗೆ ಸೀಮಿತವಾಗಿಲ್ಲ. ಯೋಜನೆಗೆ ಸಂಬಂಧಿಸಿದಂತೆ ಸಹ-ಸ್ಥಾಪಿತ ಶಕ್ತಿ ಸಂಗ್ರಹ ವ್ಯವಸ್ಥೆಗಳಿಗೂ ಒತ್ತು ನೀಡಲಾಗಿದೆ. ಕನಿಷ್ಠ ಎರಡು ಗಂಟೆಗಳ ಸಂಗ್ರಹ ಸಾಮರ್ಥ್ಯ ಹೊಂದಿರುವ ಒಟ್ಟು 10,000 MWh ಶಕ್ತಿ ಸಂಗ್ರಹಣಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಗುರಿಯಿದೆ. ಸೌರ ವಿದ್ಯುತ್ ಉತ್ಪಾದನೆ ಸೂರ್ಯನ ಬೆಳಕಿನ ಲಭ್ಯತೆಯ ಮೇಲೆ ಅವಲಂಬಿತವಾಗಿರುವುದರಿಂದ, ಶಕ್ತಿ ಸಂಗ್ರಹ ವ್ಯವಸ್ಥೆಗಳು ಅಗತ್ಯವಿದ್ದಾಗ ವಿದ್ಯುತ್ ಪೂರೈಸಲು ನೆರವಾಗುತ್ತವೆ. ಇದರಿಂದ ವಿದ್ಯುತ್ ಗ್ರಿಡ್‌ನ ಸ್ಥಿರತೆಯನ್ನ ಹೆಚ್ಚಿಸುವ ನಿರೀಕ್ಷೆಯಿದೆ.
ಉದ್ಯೋಗ ಮತ್ತು ದೇಶೀಯ ಉತ್ಪಾದನೆಗೆ ಉತ್ತೇಜನ
ತೇಲುವ ಸೌರ ಯೋಜನೆಗಳ ವಿಸ್ತರಣೆ ಕೇವಲ ಸ್ವಚ್ಛ ವಿದ್ಯುತ್ ಉತ್ಪಾದನೆಗೆ ಮಾತ್ರ ಸೀಮಿತವಾಗುವುದಿಲ್ಲ. ಸೌರ ಫಲಕಗಳು, ತೇಲುವ ವೇದಿಕೆಗಳು, ಆಂಕರ್ ವ್ಯವಸ್ಥೆಗಳು, ಕೇಬಲ್‌ಗಳು, ಇನ್ವರ್ಟರ್‌ಗಳು, ಶಕ್ತಿ ಸಂಗ್ರಹ ಘಟಕಗಳು ಮತ್ತು ಇತರ ಉಪಕರಣಗಳ ಬೇಡಿಕೆ ಹೆಚ್ಚುವುದರಿಂದ ದೇಶೀಯ ಉತ್ಪಾದನಾ ವಲಯಕ್ಕೂ ಉತ್ತೇಜನ ದೊರೆಯಬಹುದು.
ಯೋಜನೆಯು ತೇಲುವ ಸೌರಶಕ್ತಿಯು ಉದ್ಯೋಗಾವಕಾಶಗಳನ್ನೂ ಸೃಷ್ಟಿಸುವ ನಿರೀಕ್ಷೆಯಿದೆ. PM-SSYಗೆ 5 ವರ್ಷಗಳ ಅನುಷ್ಠಾನ ಅವಧಿ ನಿಗದಿಪಡಿಸಲಾಗಿದ್ದು, ಹಣಕಾಸು ನೆರವು 2032-33ರ ವರೆಗೆ ಲಭ್ಯವಾಗಲಿದೆ.

ಮುಂದಿನ ದೊಡ್ಡ ಸೌರ ಕ್ರಾಂತಿಯೇ?
ಭಾರತವು ಸೌರಶಕ್ತಿಯಲ್ಲಿ ವೇಗವಾಗಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ, ಮುಂದಿನ ಹಂತದ ಬೆಳವಣಿಗೆಗೆ ಭೂಮಿ ದೊಡ್ಡ ಸವಾಲಾಗಬಹುದು. ಈ ಸಮಸ್ಯೆಗೆ ತೇಲುವ ಸೌರಶಕ್ತಿ ಒಂದು ಪರ್ಯಾಯ ಮಾರ್ಗವನ್ನು ಒದಗಿಸುತ್ತದೆ.
ಪ್ರಸ್ತುತ 700 ಮೆಗಾವ್ಯಾಟ್ ನಷ್ಟಿರುವ ತೇಲುವ ಸೌರ ಸಾಮರ್ಥ್ಯದಿಂದ 102 GWನಷ್ಟು ಅಂದಾಜು ಸಾಮರ್ಥ್ಯದತ್ತ ಸಾಗುವುದು ಸುಲಭದ ಕೆಲಸವಲ್ಲ. ಜಲಮೂಲಗಳ ಪರಿಸರ ಸಂರಕ್ಷಣೆ, ನೀರಿನ ಗುಣಮಟ್ಟ, ಜಲಚರ ಜೀವಿಗಳ ಮೇಲೆ ಪರಿಣಾಮ, ತಾಂತ್ರಿಕ ಸವಾಲುಗಳು ಮತ್ತು ಯೋಜನಾ ವೆಚ್ಚಗಳಂತಹ ಅಂಶಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ. ಆದರೆ ಸೂಕ್ತ ಪರಿಸರ ಮಾನದಂಡಗಳು, ತಾಂತ್ರಿಕ ಯೋಜನೆ ಮತ್ತು ಪರಿಣಾಮಕಾರಿ ನೀತಿ ಬೆಂಬಲದೊಂದಿಗೆ ತೇಲುವ ಸೌರಶಕ್ತಿ ಭಾರತಕ್ಕೆ “ಹೆಚ್ಚು ಸೌರ ವಿದ್ಯುತ್—ಹೆಚ್ಚುವರಿ ಭೂಮಿ ಇಲ್ಲದೆ” ಎಂಬ ಹೊಸ ದಿಕ್ಕನ್ನು ನೀಡುವ ಸಾಮರ್ಥ್ಯ ಹೊಂದಿದೆ.
