ಉಡುಪಿ: ಶಾರ್ಜಾದಲ್ಲಿ (Sharjah) ಭೀಕರವಾಗಿ ಕೊಲೆಗೀಡಾದ, ಉಡುಪಿ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ (Alwin Prashanth Kunder) ಶವ ತವರಿಗೆ ಬಂದಿದೆ. ಕುಟುಂಬಸ್ಥರು ಕಳೆದ ಎರಡು ತಿಂಗಳಿಂದ ಪ್ರಾಯಾಸಪಟ್ಟು ಕೊನೆಗೂ ಮನೆಮಗನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಒಂಬತ್ತು ತುಂಡುಗಳಾಗಿದ್ದ ಮೃತ ಶರೀರ, ಊರಿಗೆ ಊರನ್ನೇ ಮನಕಲಕುವಂತೆ ಮಾಡಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಶೀಘ್ರ ಪತ್ತೆಗೆ ನಾಗರಿಕರು ಒತ್ತಾಯಿಸಿದ್ದಾರೆ.
ಜುಲೈ ತಿಂಗಳ ಕೊನೆಯ ಭಾಗದಲ್ಲಿ ಪ್ರಕಾಶ್ ಕುಂದರ್ ಕೊಲೆ ನಡೆದಿತ್ತು. ಮೃತದೇಹ ತವರಿಗೆ ತರಲು ಕುಟುಂಬಸ್ಥರು ಮನವಿ ಮಾಡಿದ್ದರು. ಕೊನೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪ್ರತಿನಿಧಿಗಳ ಸತತ ಪ್ರಯತ್ನದಿಂದ ಮೃತ ಶರೀರ ಮುಚ್ಚಿದ ಬಾಕ್ಸ್ನಲ್ಲಿ ಮನೆಗೆ ಬಂದಿದೆ. ಇದನ್ನೂ ಓದಿ: ದುಬೈನಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಹತ್ಯೆ – ಕಾರಿನ ಡಿಕ್ಕಿಯಲ್ಲಿ 9 ಪೀಸ್ ಮಾಡಿ ತುಂಬಿದ್ದ ದುಷ್ಕರ್ಮಿಗಳು

ಶುಕ್ರವಾರ ಮುಂಜಾನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಸಹೋದರ ಪ್ರಶಾಂತ್ ಕುಂದರ್ ಶವಪೆಟ್ಟಿಗೆ ಪಡೆದಿದ್ದಾರೆ. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂಎ ಗಫೂರ್, ಸ್ಥಳದಲ್ಲಿ ಇದ್ದು ನೆರವು ನೀಡಿದ್ದಾರೆ. ಬಳಿಕ ಅಂಬುಲೆನ್ಸ್ನಲ್ಲಿ ಕುಂದಾಪುರ ಪೇಟೆಯ ಪ್ರಕಾಶ್ ಕುಂದರ್ ಮನೆಗೆ ಪಾರ್ಥಿವ ಶರೀರ ತರಲಾಯಿತು. ಧರ್ಮ ಗುರುಗಳು ಪ್ರಾರ್ಥನೆ ನಡೆಸಿಕೊಟ್ಟರು. ನೂರಾರು ಬಂಧುಗಳು ಭಾಗಿಯಾದರು. ಎರಡು ತಿಂಗಳ ಹಿಂದೆ ಕೊಲೆ ನಡೆದ ಕಾರಣ ಪೆಟ್ಟಿಗೆಯೊಳಗಿಂದ ಶವದ ಮುಖದರ್ಶನ ಮಾಡಲಿಲ್ಲ. ಸಂಪೂರ್ಣ ಫ್ರೀಜ್ ಮಾಡಿದ ಸ್ಥಿತಿಯಲ್ಲಿ ಶವವನ್ನು ರವಾನಿಸಲಾಗಿತ್ತು.
ಅಂತಿಮ ನಮನ ಸಲ್ಲಿಸಿದ ಬಳಿಕ ಶವವನ್ನು ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿಯ, ಪ್ರೊಟೆಸ್ಟೆಂಟ್ ಸಿಎಸ್ಐ ಕೃಪಾ ಧಫನಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇಲ್ಲೂ ಕೂಡ ನೂರಾರು ಬಂಧುಗಳು ಸೇರಿದ್ದರು. ಕೊಲೆಯ ಭೀಕರತೆ ಕಂಡು ನಾಗರಿಕರು ಮರುಗಿದರು. ಈ ಘಟನೆಯ ಬಳಿಕ ಮೃತರ ಪತ್ನಿ ಟೀನ ಕುಂದರ್ ಹಾಗೂ ಪುತ್ರ ಕಣ್ಮರೆಯಾಗಿದ್ದಾರೆ. ಶಾರ್ಜಾದಿಂದ ಪರಾರಿಯಾಗಿ ಭಾರತ ತಲುಪಿದ್ದಾರೆ. ಹಾಗಾಗಿ ಭಾರತದಲ್ಲಿ ಅವರನ್ನು ಪತ್ತೆ ಮಾಡಬೇಕು. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಅನುಕೂಲವಾಗುವಂತೆ ಕ್ರಮವಹಿಸಬೇಕೆಂದು ಒತ್ತಾಯಿಸಲಾಗಿದೆ. ಇದನ್ನೂ ಓದಿ: ಉಡುಪಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ – ಮಾದಕವಸ್ತು ಸೀಜ್; 9 ಮಂದಿ ಅರೆಸ್ಟ್

