ಚಳಿಗಾಲದ ವೇಳೆ ಭಾರಿ ಹಿಮಪಾತದಿಂದ ಶ್ರೀನಗರ ಮತ್ತು ಲೇಹ್, ಲಡಾಖ್ ನಡುವೆ ಸಂಪರ್ಕ ವ್ಯವಸ್ಥೆ ಸ್ಥಗಿತವಾಗುತ್ತಿತ್ತು. ಆದರೆ ಲಡಾಖ್‌ಗೆ (Ladakh) ಸರ್ವಋತು ಸಂಪರ್ಕ ಕಲ್ಪಿಸುವ ಸಲುವಾಗಿ ಝೋಜಿಲಾ ಸುರಂಗವನ್ನು (Zojila Tunnel) ನಿರ್ಮಿಸಲಾಗುತ್ತಿದೆ. ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕೊರೆಯಲಾದ ಝೋಜಿಲಾ ಸುರಂಗದ ಅಂತಿಮ ಬಂಡೆಯನ್ನು ಸ್ಫೋಟಿಸುವ ಮೂಲಕ ಶ್ರೀನಗರ ಮತ್ತು ಲಡಾಕ್ ನಡುವಿನ ಸಂಪರ್ಕ ವ್ಯವಸ್ಥೆಯ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ.
ಜಮ್ಮು-ಕಾಶ್ಮೀರ (Jammu Kashmir) ಮತ್ತು ಲಡಾಖ್ ನಡುವಿನ ಸಂಪರ್ಕವನ್ನು ವರ್ಷಪೂರ್ತಿ ಸುಗಮಗೊಳಿಸುವ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಝೋಜಿಲಾ ಸುರಂಗ ಭಾರತ ಕೈಗೆತ್ತಿಕೊಂಡಿರುವ ಅತ್ಯಂತ ಮಹತ್ವದ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಿದೆ. ಹಿಮಾಲಯ ಪರ್ವತ ಶ್ರೇಣಿಯ ದುರ್ಗಮ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಸುರಂಗವು ದೇಶದ ಅಭಿವೃದ್ಧಿ, ರಾಷ್ಟ್ರೀಯ ಭದ್ರತೆ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಶಕ್ತಿ ನೀಡಲಿದೆ. ಹಾಗಿದ್ರೆ ಏನಿದು ಝೋಜಿಲಾ ಸುರಂಗ? ವಿಶೇಷತೆ ಏನು? ಭಾರತಕ್ಕೆ ಏಕೆ ಮುಖ್ಯ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಝೋಜಿಲಾ ಸುರಂಗ ಯೋಜನೆ:
ಪ್ರಸ್ತುತ ಶ್ರೀನಗರ-ಕಾರ್ಗಿಲ್-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಝೋಜಿಲಾ ಪಾಸ್ ಸಮುದ್ರಮಟ್ಟದಿಂದ ಸುಮಾರು 11,500 ಅಡಿ ಎತ್ತರದಲ್ಲಿದೆ. ಚಳಿಗಾಲದಲ್ಲಿ ಇಲ್ಲಿ ಭಾರೀ ಪ್ರಮಾಣದ ಹಿಮಪಾತವಾಗುವುದರಿಂದ ಮಾರ್ಗವು ಐದರಿಂದ ಆರು ತಿಂಗಳವರೆಗೆ ಸಂಪೂರ್ಣವಾಗಿ ಮುಚ್ಚಲ್ಪಡುತ್ತದೆ. ಇದರಿಂದ ಲಡಾಖ್ ಪ್ರದೇಶವು ದೇಶದ ಇತರ ಭಾಗಗಳೊಂದಿಗೆ ರಸ್ತೆ ಸಂಪರ್ಕವನ್ನು ಕಳೆದುಕೊಳ್ಳುತ್ತದೆ.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಕೇಂದ್ರ ಸರ್ಕಾರ ಝೋಜಿಲಾ ಸುರಂಗ ಯೋಜನೆಯನ್ನು ಆರಂಭಿಸಿದೆ. ಸುಮಾರು 14.15 ಕಿಲೋಮೀಟರ್ ಉದ್ದದ ಈ ಸುರಂಗ ಪೂರ್ಣಗೊಂಡ ನಂತರ ಭಾರತದ ಅತ್ಯಂತ ಉದ್ದದ ರಸ್ತೆ ಸುರಂಗಗಳಲ್ಲಿ ಒಂದಾಗಲಿದೆ. ಇದು ಶ್ರೀನಗರದ ಸೋನಮಾರ್ಗ್ ಮತ್ತು ಲಡಾಖ್‌ನ ಮಿನಾಮಾರ್ಗ್ ಪ್ರದೇಶಗಳನ್ನು ನೇರವಾಗಿ ಸಂಪರ್ಕಿಸಲಿದೆ.
ಪ್ರಯಾಣ ಸಮಯ ಇಳಿಕೆ:
ಸದ್ಯ ಕಠಿಣ ರಸ್ತೆಯಲ್ಲಿ ಝೋಜಿಲಾ ಪಾಸ್ ದಾಟಲು ವಾಹನಗಳಿಗೆ ಕನಿಷ್ಟ 3ರಿಂದ 3.5 ಗಂಟೆ ಬೇಕು. ಆದರೆ ಝೋಜಿಲಾ ಸುರಂಗ ನಿರ್ಮಾಣದಿಂದ ಶ್ರೀನಗರ ಮತ್ತು ಲೇಹ್ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ. ಝೋಜಿಲಾ ಸುರಂಗ ಮಾರ್ಗದಿಂದ ಸುಮಾರು 20 ನಿಮಿಷಗಳಲ್ಲಿ ಝೋಜಿಲಾ ಪಾಸ್ ದಾಟಬಹುದು. ಅಲ್ಲದೇ ಹಿಮಪಾತ, ಭೂಕುಸಿತ ಮತ್ತು ಹವಾಮಾನ ವೈಪರೀತ್ಯಗಳಿಂದ ಉಂಟಾಗುವ ಅಡಚಣೆಗಳೂ ಕಡಿಮೆಯಾಗಲಿವೆ.

ರಾಷ್ಟ್ರೀಯ ಭದ್ರತೆ:
ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದಲೂ ಈ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಲಡಾಖ್ ಪ್ರದೇಶವು ಚೀನಾ ಮತ್ತು ಪಾಕಿಸ್ತಾನದ ಗಡಿಗಳಿಗೆ ಸಮೀಪದಲ್ಲಿದ್ದು, ಸೇನೆಯ ಕಾರ್ಯಾಚರಣೆಗಳಿಗೆ ನಿರಂತರ ಸಂಪರ್ಕ ಅತ್ಯಗತ್ಯವಾಗಿದೆ. ಸುರಂಗ ಪೂರ್ಣಗೊಂಡ ಬಳಿಕ ಸೈನಿಕರು, ಯುದ್ಧೋಪಕರಣಗಳು ಮತ್ತು ಅಗತ್ಯ ಸಾಮಗ್ರಿಗಳನ್ನು ವರ್ಷಪೂರ್ತಿ ಯಾವುದೇ ಅಡೆತಡೆಯಿಲ್ಲದೆ ಸಾಗಿಸಲು ಸಾಧ್ಯವಾಗಲಿದೆ.
2020ರ ಗಲ್ವಾನ್ ಘರ್ಷಣೆಯ ನಂತರ ಗಡಿ ಪ್ರದೇಶಗಳ ಸಂಪರ್ಕ ಮೂಲಸೌಕರ್ಯವನ್ನು ಬಲಪಡಿಸುವ ಅಗತ್ಯ ಇನ್ನಷ್ಟು ಹೆಚ್ಚಾಯಿತು. ಈ ಹಿನ್ನೆಲೆಯಲ್ಲಿ ಝೋಜಿಲಾ ಸುರಂಗ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕಾಮಗಾರಿಯನ್ನು ವೇಗಗೊಳಿಸಲಾಗಿದೆ. ಯೋಜನೆ ಪೂರ್ಣಗೊಂಡ ಬಳಿಕ ಉತ್ತರ ಗಡಿಯ ಭದ್ರತೆಯಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರವಾಸೋದ್ಯಮ:
ಪ್ರವಾಸೋದ್ಯಮ ಕ್ಷೇತ್ರಕ್ಕೂ ಈ ಸುರಂಗ ದೊಡ್ಡ ವರದಾನವಾಗಲಿದೆ. ಲಡಾಖ್, ಕಾರ್ಗಿಲ್ ಮತ್ತು ಸೋನಮಾರ್ಗ್ ಪ್ರದೇಶಗಳು ತಮ್ಮ ನೈಸರ್ಗಿಕ ಸೌಂದರ್ಯದಿಂದ ವಿಶ್ವದಾದ್ಯಂತ ಪ್ರಸಿದ್ಧವಾಗಿವೆ. ಆದರೆ ಚಳಿಗಾಲದಲ್ಲಿ ರಸ್ತೆ ಸಂಪರ್ಕ ಕಡಿತವಾಗುವುದರಿಂದ ಪ್ರವಾಸೋದ್ಯಮಕ್ಕೆ ಹೊಡೆತ ಬೀಳುತ್ತಿತ್ತು. ಸುರಂಗ ನಿರ್ಮಾಣವಾದ ಬಳಿಕ ವರ್ಷಪೂರ್ತಿ ಪ್ರವಾಸಿಗರು ಈ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗಲಿದೆ.
ವ್ಯಾಪಾರ, ಉದ್ಯಮಕ್ಕೆ ಉತ್ತೇಜನ:
ಸ್ಥಳೀಯ ಆರ್ಥಿಕತೆಗೆ ಸಹ ಯೋಜನೆಯಿಂದ ದೊಡ್ಡ ಲಾಭವಾಗಲಿದೆ. ಕೃಷಿ ಉತ್ಪನ್ನಗಳು, ಹಣ್ಣುಗಳು, ತರಕಾರಿಗಳು ಮತ್ತು ಇತರ ವಾಣಿಜ್ಯ ಸರಕುಗಳನ್ನು ಸುಲಭವಾಗಿ ಸಾಗಿಸಬಹುದಾಗಿದೆ. ಸಾರಿಗೆ ವೆಚ್ಚ ಕಡಿಮೆಯಾಗುವುದರಿಂದ ಸ್ಥಳೀಯ ವ್ಯಾಪಾರ ಮತ್ತು ಉದ್ಯಮಗಳಿಗೆ ಉತ್ತೇಜನ ಸಿಗಲಿದೆ. ಉದ್ಯೋಗಾವಕಾಶಗಳೂ ಹೆಚ್ಚಾಗುವ ನಿರೀಕ್ಷೆಯಿದೆ.
ಸುರಂಗದ ವಿಶೇಷತೆಯೇನು?
ಮೇಘಾ ಎಂಜಿನಿಯರಿಂಗ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (MEIL) ಸಂಸ್ಥೆಯು ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ. ವಿಶ್ವದ ಅತಿ ಎತ್ತರದಲ್ಲಿ ನಿರ್ಮಾಣವಾಗುತ್ತಿರುವ ಅತಿ ಉದ್ದದ ಏಕ-ಕೊಳವೆ ಹಾಗೂ ದ್ವಿಮುಖ ರಸ್ತೆಯಾಗಿದೆ. ಕಾಮಗಾರಿ ವೇಳೆ ನ್ಯೂ ಆಸ್ಟ್ರಿಯನ್ ಟನಲಿಂಗ್ ವಿಧಾನ (ಎನ್‌ಎಟಿಎಂ) ಅಳವಡಿಸಲಾಗಿದ್ದು, ಬದಲಾಗುವ ಶಿಲಾಸ್ತರಗಳು ಮತ್ತು ಭೌಗೋಳಿಕ ಅನಿಶ್ಚಿತತೆಗಳಿಗೆ ಇದು ಹೊಂದಿಕೊಳ್ಳಲಿದೆ.
ಎಂಜಿನಿಯರಿಂಗ್ ದೃಷ್ಟಿಯಿಂದ ಝೋಜಿಲಾ ಸುರಂಗವು ಭಾರತದ ಅತ್ಯಂತ ಸವಾಲಿನ ಯೋಜನೆಗಳಲ್ಲಿ ಒಂದಾಗಿದೆ. ತೀವ್ರ ಚಳಿ, ಭಾರೀ ಹಿಮಪಾತ, ಕಠಿಣ ಭೌಗೋಳಿಕ ಪರಿಸ್ಥಿತಿ ಮತ್ತು ಹೆಚ್ಚಿನ ಎತ್ತರದಲ್ಲಿಯೇ ಕಾಮಗಾರಿ ನಡೆಸಬೇಕಾಗಿರುವುದು ನಿರ್ಮಾಣ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿದೆ. ಆದರೂ ಆಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಯಂತ್ರೋಪಕರಣಗಳ ನೆರವಿನಿಂದ ಕಾಮಗಾರಿ ಯಶಸ್ವಿಯಾಗಿ ಸಾಗುತ್ತಿದೆ.
ಸುರಂಗದಲ್ಲಿ ಆಧುನಿಕ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ. ಅಗ್ನಿ ಅವಘಡ ತಡೆ ವ್ಯವಸ್ಥೆ, ತುರ್ತು ನಿರ್ಗಮನ ಮಾರ್ಗಗಳು, ಸುಧಾರಿತ ಗಾಳಿ ಸಂಚಾರ ವ್ಯವಸ್ಥೆ, ಸಿಸಿಟಿವಿ ನಿಗಾ ವ್ಯವಸ್ಥೆ ಮತ್ತು ತುರ್ತು ಸಂಪರ್ಕ ವ್ಯವಸ್ಥೆಗಳನ್ನು ಒಳಗೊಂಡಿರುವುದರಿಂದ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಯೋಜನೆಯ ಪ್ರಮುಖ ಅಂಶಗಳು:
ಸುರಂಗದ ಉದ್ದ: 13.153 ಕಿ.ಮೀ.
ಒಟ್ಟು ಯೋಜನಾ ಉದ್ದ: 30.894 ಕಿ.ಮೀ.
ಸ್ಥಳ: ಬಾಲ್ಟಾಲ್‌ನಿಂದ ಮೀನ್‌ಮಾರ್ಗ್‌ಗೆ ಸಂಪರ್ಕ
ಉದ್ದೇಶ: ಶ್ರೀನಗರ-ಲಡಾಖ್ ನಡುವೆ 365 ದಿನ ಸಂಪರ್ಕ
ಯೋಜನೆ ಆರಂಭ: ಅಕ್ಟೋಬರ್ 1, 2020
ಸುರಂಗದಲ್ಲಿ ಮೊದಲ ಸ್ಫೋಟ: ಅಕ್ಟೋಬರ್ 14, 2020
ಸುರಂಗದ ಕೊನೆಯ ಸ್ಫೋಟ: ಜೂನ್ 9, 2026
ಝೋಜಿಲಾ ಸುರಂಗ ಯೋಜನೆ ಪೂರ್ಣಗೊಂಡ ಬಳಿಕ ಕಾಶ್ಮೀರ ಮತ್ತು ಲಡಾಖ್ ನಡುವಿನ ಅಂತರ ಕೇವಲ ಭೌಗೋಳಿಕವಾಗಿಯೇ ಉಳಿಯುತ್ತದೆ. ಅಭಿವೃದ್ಧಿ, ವ್ಯಾಪಾರ, ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಭದ್ರತೆಯ ಹೊಸ ಅಧ್ಯಾಯಕ್ಕೆ ಈ ಯೋಜನೆ ನಾಂದಿ ಹಾಡಲಿದೆ. ಹಿಮಾಲಯದ ಎದೆಯೊಳಗೆ ನಿರ್ಮಾಣವಾಗುತ್ತಿರುವ ಈ ಅದ್ಭುತ ಸುರಂಗವು ಭಾರತದ ಎಂಜಿನಿಯರಿಂಗ್ ಸಾಮರ್ಥ್ಯ ಮತ್ತು ಅಭಿವೃದ್ಧಿಯ ಸಂಕಲ್ಪಕ್ಕೆ ಜೀವಂತ ಸಾಕ್ಷಿಯಾಗಲಿದೆ.
ಭಾರತದ ಮೂಲಸೌಕರ್ಯ ಇತಿಹಾಸದಲ್ಲಿ ಝೋಜಿಲಾ ಸುರಂಗವು ಕೇವಲ ಒಂದು ರಸ್ತೆ ಯೋಜನೆಯಲ್ಲ, ಇದು ಲಡಾಖ್ ಪ್ರದೇಶದ ಭವಿಷ್ಯವನ್ನು ಬದಲಾಯಿಸುವ, ರಾಷ್ಟ್ರೀಯ ಏಕತೆಯನ್ನು ಬಲಪಡಿಸುವ ಮತ್ತು ಉತ್ತರ ಭಾರತದ ಅಭಿವೃದ್ಧಿಗೆ ವೇಗ ನೀಡುವ ಐತಿಹಾಸಿಕ ಯೋಜನೆಯಾಗಿ ಗುರುತಿಸಿಕೊಳ್ಳಲಿದೆ.
