ನವದೆಹಲಿ: ಭಾರತದ ಪ್ರತಿಷ್ಟಿತ ವಾಯುಯಾನ ಸಂಸ್ಥೆಗಳಾದ ಏರ್ ಇಂಡಿಯಾ (Air India), ಇಂಡಿಗೋ (IndiGo) ಕಳೆದ ಜೂನ್‌ನಿಂದ ಸುಮಾರು 250 ದೈನಂದಿನ ದೇಶೀಯ ವಿಮಾನಗಳ ಹಾರಾಟವನ್ನು ಕಡಿತಗೊಳಿಸಿದೆ.
ಮಧ್ಯಪ್ರಾಚ್ಯದ ತೈಲ ಬಿಕ್ಕಟ್ಟಿನಿಂದಾಗಿ ಇಂಧನ ವೆಚ್ಚ ದುಬಾರಿಯಗುತ್ತಿದೆ. ಇತ್ತ ಪ್ರಯಾಣಿಕರ ಸಂಖ್ಯೆ ಕೂಡ ಕುಸಿಯುತ್ತಿರುವುದರಿಂದ ಕಂಪನಿಗಳ ಮೇಲೆ ಹೊರೆ ಹೆಚ್ಚಾಗುತ್ತಿದೆ. ಇದರಿಂದ ಈಗಾಗಲೇ ವಿಮಾನಯಾನದ ಪ್ರಯಾಣದರ ಕೂಡ ಹೆಚ್ಚಳ ಆಗಿದೆ. ಮುಂದಿನ ಆಗಸ್ಟ್ ವರೆಗೂ ತೈಲ ಬಿಕ್ಕಟ್ಟು ಮುಂದುವರೆಯುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಬೇಸಿಗೆ ರಜೆ, ಪಾರ್ಟಿ ಹಾಗೂ ಇನ್ನಿತರ ಕಾರಣಗಳಿಗಾಗಿ ವಿಮಾನ ಪ್ರಯಾಣ ಕೈಗೊಳ್ಳುವ ಹೊತ್ತಿನಲ್ಲೇ ವಿಮಾನಗಳನ್ನ ಕಡಿಗೊಳಿಸಿರುವುದು ಪ್ರವಾಸೋದ್ಯಮಕ್ಕೂ ಹೊಡೆತ ನೀಡಿದಂತಾಗಿದೆ.

ಎಷ್ಟು ವಿಮಾನಗಳು ಕಡಿತ?
ಕಳೆದ ಜೂನ್ ಮತ್ತು ಜುಲೈ ತಿಂಗಳಲ್ಲಿ ಏರ್ ಇಂಡಿಯಾ ತನ್ನ ದೇಶೀಯ ವಿಮಾನ ಸಂಚಾರ ವೇಳಾಪಟ್ಟಿಯಲ್ಲಿ ಶೇ.22 ರಷ್ಟು ಕಡಿತಗೊಳಿಸಿದೆ. ಈ ಮೂಲಕ ಪ್ರತಿದಿನ ಸುಮಾರು 110 ವಿಮಾನಗಳ ಹಾರಾಟ ಕಡಿತಗೊಳಿಸಿದಂತಾಗುತ್ತದೆ. ಈ ಹಿಂದೆ ಈ ಸಂಸ್ಥೆಯಿಂದ 500 ವಿಮಾನಗಳು ದೇಶದಲ್ಲಿ ಹಾರಾಟ ನಡೆಸುತ್ತಿದ್ದವು.
ಇಂಡಿಗೋ ಸಂಸ್ಥೆಯಿಂದ ದಿನಕ್ಕೆ ಸುಮಾರು 2,200 ವಿಮಾನಗಳು ಹಾರಾಟ ನಡೆಸುತ್ತಿದ್ದವು. ಇದೀಗ ಇಂಡಿಗೋ ಸಂಸ್ಥೆ ಶೇ.5-7 ರಷ್ಟು ಕಡಿತಗೊಳಿಸಲು ಮುಂದಾಗಿದೆ. ಇದರ ಪರಿಣಾಮವಾಗಿ ದಿನಕ್ಕೆ 110 ವಿಮಾನಗಳು ಕಡಿಮೆಯಾಗಿವೆ. ಈ ನಡುವೆ ಏರ್ ಇಂಡಿಯಾ ಲಿಮಿಟೆಡ್‌ನ ಅಂಗಸಂಸ್ಥೆ ಮತ್ತು ಆಲ್-ಎಕಾನಮಿ ಕ್ಲಾಸ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಡಿಮೆ ವೆಚ್ಚದ ಏರ್ ಇಂಡಿಯಾ ಎಕ್ಸ್‌ಪ್ರೆಸ್, ಸುಮಾರು 340 ರಷ್ಟು ದೈನಂದಿನ ದೇಶೀಯ ವಿಮಾನ ಹಾರಾಟದಲ್ಲಿ ಶೇ.10 ರಷ್ಟು ಕಡಿತಗೊಳಿಸಿದೆ.
ಯಾವ್ಯಾವ ನಿಲ್ದಾಣಗಳಿಂದ ವಿಮಾನ ಸಂಚಾರ ಕಡಿತ?
* ಮುಂಬೈನಿಂದ ಜೈಪುರ, ಗೋವಾ, ಬೆಂಗಳೂರು, ಹೈದರಾಬಾದ್, ಚೆನ್ನೈ, ಅಹಮದಾಬಾದ್, ನಾಗ್ಪುರ, ಪಾಟ್ನಾ ಮತ್ತು ಭೋಪಾಲ್‌ಗಳಿಗೆ ವಿಮಾನ ಸಂಚಾರ ಕಡಿಮೆಯಾಗಲಿದೆ.
* ದೆಹಲಿಯಿಂದ ಗೋವಾ, ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ, ಅಹಮದಾಬಾದ್, ಲಕ್ನೋ, ಕೊಚ್ಚಿ ಮತ್ತು ಕೋಲ್ಕತ್ತಾಗೆ ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರುತ್ತದೆ.
* ದಕ್ಷಿಣದ ಪ್ರಮುಖ ಕೇಂದ್ರವಾಗಿರುವ ಬೆಂಗಳೂರಿಗೆ ಬೇರೆ ಬೇರೆ ಕಡೆಯಿಂದ ವಾಪಾಸ್ ತೆರಳುವ ವಿಮಾನಗಳ ಸಂಖ್ಯೆ ಕಡಿಮೆಯಾಗಲಿವೆ.

ವಿಮಾನಗಳನ್ನು ಕಡಿತಗೊಳಿಸಲು ಕಾರಣವೇನು?
ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ವಾಯುಯಾನಕ್ಕೆ ಬಳಸುವ ಟರ್ಬೈನ್ ಇಂಧನದ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ಇಂಧನದ ಬೆಲೆಯಲ್ಲಿ ದೇಶೀಯ ವಿಮಾನಯಾನಕ್ಕೆ ಶೇ.25 ರಷ್ಟು ಮತ್ತು ಅಂತಾರಾಷ್ಟಿçÃಯ ವಿಮಾನಯಾನಕ್ಕೆ ಇನ್ನೂ ಹೆಚ್ಚಾಗಿದೆ. ಒಂದು ತಿಂಗಳ ಹಿಂದೆ ಜೆಟ್ ಇಂಧನದ ಬೆಲೆಯಲ್ಲಿ ಭಾರೀ ಏರಿಕೆಯಾಗಿತ್ತು. ಈ ಹಿನ್ನೆಲೆ ವಿಮಾನಯಾನ ಸಂಸ್ಥೆಗಳು ಸರ್ಕಾರದ ತುರ್ತು ಹಸ್ತಕ್ಷೇಪ ಕೋರಿದ್ದವು.
ವಿಮಾನಯಾನದ ಬಹುಪಾಲು ವೆಚ್ಚವನ್ನು ಜೆಟ್ ಇಂಧನದ ಬಹುಪಾಲು ಜೆಟ್ ಇಂಧನದ ಬೆಲೆ ಮೇಲೆ ನಿರ್ಧರಿತ ಆಗಿದೆ. ಸಹಜವಾಗಿಯೇ ವಿಮಾನ ಟಿಕೆಟ್ ದರ ಕೂಡ ಏರಿಕೆ ಆಗಿರೋದ್ರಿಂದ ಪ್ರಯಾಣಿಕರಿಂದ ಬೇಡಿಕೆಯೂ ಕಡಿಮೆಯಾಗಿದೆ. ಈ ಮೇಲಿನ ಕಾರಣಗಳಿಂದ ಸಂಸ್ಥೆಗಳು ವಿಮಾನಗಳ ಹಾರಾಟ ಕಡಿತಗೊಳಿಸಿವೆ.
ವಿಮಾನಯಾನ ಸಂಸ್ಥೆಗಳು ಹೇಳಿದ್ದೇನು?
ಈ ಬಗ್ಗೆ ಮಾಹಿತಿ ನೀಡಿರುವ ಏರ್ ಇಂಡಿಯಾ ವಿಮಾನ ಸಂಸ್ಥೆ, ಇಂಧನ ಬೆಲೆ ಏರಿಕೆಯಿಂದಾಗಿ ಈ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ. ಏರ್ ಇಂಡಿಯಾ ಬೇಡಿಕೆ ಮತ್ತು ಕಾರ್ಯಾಚರಣೆ ಗಮನಿಸಿ ಮುಂದಿನ ದಿನಗಳಲ್ಲಿ ನಿರ್ಧರಿಸಲಿದೆ ಎಂದು ತಿಳಿಸಿದೆ.
ಇತ್ತ ಇಂಡಿಗೋ ಕೂಡ, ಬೇಸಿಗೆಯ ಋತುವಿನಲ್ಲಿ ವಿಮಾನ ಪ್ರಯಾಣದ ಬೇಡಿಕೆ ಕಡಿಮೆಯಾಗಿರುವುದು ಶೇ.5-7 ರಷ್ಟು ವಿಮಾನಗಳ ಕಡಿತಕ್ಕೆ ಮುಖ್ಯ ಕಾರಣವಾಗಿದೆ ಎಂದು ಸ್ಪಷ್ಟನೆ ನೀಡಿದೆ.

ವಿಮಾನಯಾನ ದರ ಏರಿಕೆ?
ಇತ್ತೀಚಿಗೆ ಹಲವು ಮಾರ್ಗಗಳ ವಿಮಾನ ಪ್ರಯಾಣ ದರದಲ್ಲಿ ಶೇ.30 ರಷ್ಟು ಹೆಚ್ಚಾಗಿದೆ. ಎಟಿಎಫ್ ವೆಚ್ಚ ಹೆಚ್ಚಾದ ಕಾರಣ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ 400-450 ರೂ. ರಷ್ಟು ಇಂಧನ ಸರ್‌ಚಾರ್ಜ್ಗಳನ್ನು ಹಾಕಿವೆ. ಇದೀಗ ಮತ್ತೊಂದು ಸುತ್ತಿನಲ್ಲಿ ಪ್ರಯಾಣದ ದರ ಏರಿಕೆಯಾಗಬಹುದು ಎನ್ನಲಾಗುತ್ತದೆ.
ಕಡಿಮೆ ಸೀಟುಗಳು ಲಭ್ಯವಿದ್ದರೆ ಪ್ರಯಾಣ ದರ ಮತ್ತಷ್ಟು ಏರಿಕೆಯಾಗಬಹುದು. ವಿಶೇಷವಾಗಿ ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ಜನನಿಬಿಡ ನಗರಗಳನ್ನು ಸಂಪರ್ಕಿಸುವ ವಲಯಗಳಲ್ಲಿ ಮುಂದಿನ ಮೂರು ತಿಂಗಳು ವಿಮಾನ ಪ್ರಯಾಣ ಸಮಾನ್ಯರಿಗೆ ಕೈಗೆಟುಕುವುದಿಲ್ಲ ಎನ್ನಲಾಗಿದೆ.
