Dharwad

ಆರ್ ಆ್ಯಂಡ್ ಡಿ ಹೊಸ ನೀತಿ ರೂಪಿಸಲು ಕಾರ್ಯಪಡೆ ರಚನೆ: ಬಸವರಾಜ ಬೊಮ್ಮಾಯಿ

Published

on

Share this

ಹುಬ್ಬಳ್ಳಿ: ಕೃಷಿ, ತೈಲ, ಕೈಗಾರಿಕೆ ಮತ್ತಿತರ ಎಲ್ಲಾ ರಂಗಗಳಲ್ಲಿ ಇಂದು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆ್ಯಂಡ್ ಡಿ) ಅಗತ್ಯವಾಗಿದೆ. ರಾಜ್ಯದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದ 180 ಆರ್ ಆ್ಯಂಡ್ ಡಿ ಕೇಂದ್ರಗಳಿವೆ. ಅವುಗಳಿಗೆ ಹೆಚ್ಚು ಮಹತ್ವ ನೀಡಿ ಕೈಗಾರಿಕೆ, ಕೃಷಿ, ಆಹಾರ ರಂಗದಲ್ಲಿ ಆರ್ ಆ್ಯಂಡ್ ಡಿ ಬಳಕೆಗೆ ಹೆಚ್ಚು ಒತ್ತು ನೀಡಲು ಸರ್ಕಾರ ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹೊಸ ಆರ್ ಆ್ಯಂಡ್ ಡಿ ನೀತಿ ರಚನೆಗೆ ಕಾರ್ಯಪಡೆ ಅಧ್ಯಕ್ಷರನ್ನಾಗಿ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಉಪಕುಲಪತಿ ಡಾ.ಅಶೋಕ್ ಶೆಟ್ಟರ್ ಅವರನ್ನು ನೇಮಿಸಲು ಚಿಂತನೆ ನಡೆದಿದೆ. ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಕೆಎಲ್‍ಇ ಟೆಕ್‍ಪಾರ್ಕಿನ ಅಭಿವೃದ್ಧಿಗೆ ಅಗತ್ಯವಾಗಿರುವ ಇನ್ನೂ 2 ಕೋಟಿ ರೂ.ಗಳನ್ನು ಹಳೆಯ ವಿದ್ಯಾರ್ಥಿಗಳ ಸಂಘದ ಮೂಲಕ ಕ್ರೂಢೀಕರಿಸಿ ನೀಡಲಾಗುವುದು. ಸ್ಟಾರ್ಟ್ ಅಪ್‍ಗಳ ಉತ್ತೇಜನಕ್ಕಾಗಿ ಹುಬ್ಬಳ್ಳಿ ಮತ್ತು ಕಲಬುರ್ಗಿಯಲ್ಲಿ ಪ್ರಾದೇಶಿಕ ಕಚೇರಿಗಳನ್ನು ಪ್ರಾರಂಭಿಸಲಾಗುವುದು ಎಂದು ನುಡಿದರು.

ಕೆಎಲ್‍ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ 75ನೇ ವರ್ಷಾಚರಣೆ ಹಾಗೂ ಕೆಎಲ್‍ಇ ಟೆಕ್ ಪಾರ್ಕ್ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ಸಮಗ್ರ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ದೊಡ್ಡದು. ಯುವಕರಲ್ಲಿ ವಿದ್ಯೆ, ವ್ಯಕ್ತಿತ್ವ ನಿರ್ಮಾಣ ಮಾಡುವುದು ಸಂಸ್ಥೆ, ಸರ್ಕಾರಗಳ ಜವಾಬ್ದಾರಿ. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ ಸಂಸ್ಥೆಗೆ, ಸಮಾಜಕ್ಕೆ ಉತ್ತಮ ಮಾನವ ಸಂಪನ್ಮೂಲವಾಗಿ ಕೊಡುಗೆಗಳನ್ನು ಮರಳಿ ನೀಡಬೇಕು. ಕೆಎಲ್‍ಇ ಸಂಸ್ಥೆಯ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜು ವಿವಿಧ ಬಹು ಅಧ್ಯಯನ ಶಿಸ್ತುಗಳಲ್ಲಿ ಮಾದರಿಯಾಗಿ ರೂಪುಗೊಂಡಿದೆ. ಇಂದು ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ ಸಂಪೂರ್ಣ ಸ್ವರೂಪವೇ ಬದಲಾಗಿದ್ದು, ಮತ್ತೊಮ್ಮೆ ವಿದ್ಯಾರ್ಥಿಯಾಗಿ ಪ್ರವೇಶಪಡೆಯಲು ಮನಸ್ಸಾಗುತ್ತಿದೆ ಎಂದು ತಮಗೆ ವಿದ್ಯೆ ನೀಡಿದ ಸರಸ್ವತಿ ದೇಗುಲದ ಬಗ್ಗೆ ಮನದುಂಬಿ ಮಾತನಾಡಿದರು. ಇದನ್ನೂ ಓದಿ: ಸಿಎಂ ಜಿಲ್ಲೆಯಲ್ಲಿ ಮರಳು ಸಾಗಾಣಿಕೆಗೆ ಮಕ್ಕಳ ಬಳಕೆ – ಕಣ್ಣುಮುಚ್ಚಿ ಕುಳಿತ ಪೊಲೀಸ್ ಇಲಾಖೆ

ತಮಗೆ ವಿದ್ಯೆ ಕಲಿಸಿದ ಪ್ರಾಧ್ಯಾಪಕರು, ಹಿರಿಯ-ಕಿರಿಯ ಸಹಪಾಠಿಗಳನ್ನು, ಹಾಜರಾಗದ ಪ್ರಯೋಗಾಲಯಗಳು, ಪುಸ್ತಕ ಪಡೆಯದ ಗ್ರಂಥಾಲಯಗಳು, ಹಾಸ್ಟೇಲ್, ಕ್ಯಾಂಪಸ್, ಕ್ಯಾಂಟೀನ್ ಎಲ್ಲವನ್ನು ವಿನೋದವಾಗಿ ನೆನಪಿಸಿಕೊಂಡರು. ಮುಖ್ಯಮಂತ್ರಿಯಾಗಿ ಕೈಗೊಳ್ಳುವ ಎಲ್ಲಾ ಜನಪರ ಕಾರ್ಯಗಳಲ್ಲಿ ಬಿವಿಬಿ ಕಾಲೇಜು ಕಲಿಸಿದ ಪಾಠಗಳ ಪಾತ್ರ ಇರುತ್ತದೆ. ಆಡಳಿತದಲ್ಲಿ ತಾಂತ್ರಿಕತೆ, ವೈಜ್ಞಾನಿಕತೆ ತರಲು ಉತ್ಸುಕನಾಗಿದ್ದೇನೆ. ಪ್ರತಿ ಹಂತದಲ್ಲಿಯೂ ನನ್ನ ಜ್ಞಾನವನ್ನು ಪ್ರಸ್ತುತ ಸಂಶೋಧನೆಗಳೊಂದಿಗೆ ತಾಳೆ ಮಾಡಿ ಪರೀಕ್ಷಿಸಿಕೊಳ್ಳುತ್ತಿರುತ್ತೇನೆ. ಸಾರ್ವಜನಿಕ ಉಪಯೋಗ, ಸಂಕೇತಗಳ ರವಾನೆಗೆ ವೈರ್‍ಲೆಸ್ ತಂತ್ರಜ್ಞಾನ, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಸಾಫ್ಟ್ ವೇರ್ ಕ್ಷೇತ್ರಗಳ ಅತ್ಯಾಧುನಿಕ ವಿದ್ಯೆ, ಸಂಶೋಧನೆಗಳಲ್ಲಿ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜು ಮಹತ್ವದ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಹಿಂದೆ ನಾನು ವಿದ್ಯಾರ್ಥಿಯಾಗಿದ್ದಾಗ ಕರ್ನಾಟಕ ವಿವಿ ಕುಲಪತಿಗಳಾಗಿದ್ದ ಡಾ.ಡಿ.ಎಂ.ನಂಜುಂಡಪ್ಪ ಅವರ ಕಾಠಿಣ್ಯ, ಶಿಸ್ತು, ಬದ್ಧತೆಯಿಂದ ನಮ್ಮ ವ್ಯಾಸಂಗ ಪೂರ್ಣವಾಗಲು ಸಾಧ್ಯವಾಯಿತು. ಉತ್ತಮ ಭೂತಕಾಲವಷ್ಟೇ ಅಲ್ಲ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು ಅಷ್ಟೇ ಮುಖ್ಯ. ರಾಜಕೀಯವೂ ಒಂದು ವಿಜ್ಞಾನವೇ ಆಗಿದೆ. ಅಲ್ಲಿಯೂ ವೈಜ್ಞಾನಿಕ ವಿಧಾನಗಳಿವೆ. ತಾಂತ್ರಿಕ ಹಾಗೂ ವೈಜ್ಞಾನಿಕ ಸಂಶೋಧನೆಗಳನ್ನು ರಾಜತಾಂತ್ರಿಕವಾಗಿ ಬಳಸುವುದು ರಾಜಕೀಯ ವಿಜ್ಞಾನವಾಗಿದೆ. ಎಲ್ಲಾ ದೇಶಗಳು ಈ ನೀತಿ ಪಾಲಿಸಬೇಕು. ಕರ್ತವ್ಯವನ್ನು ನೈತಿಕತೆಯ ಕಾಯಕದ ರೀತಿಯಲ್ಲಿ ನಿರ್ವಹಿಸಬೇಕು. ದೇಶದ ಬಡತನ, ಆರೋಗ್ಯ, ಶಿಕ್ಷಣ, ಆರ್ಥಿಕ ಸವಾಲುಗಳನ್ನು ಅರಿಯಲು ನಾವು ಸದಾ ಕಾಲ ಜನರ ನಡುವೆ ಇರಬೇಕು. ಅದೇ ಜನರ, ಜನಪರ ರಾಜಕೀಯವಾಗಿದೆ. ಪ್ರಧಾನಮಂತ್ರಿಗಳು ಸಕ್ಕರೆ ಕಾರ್ಖಾನೆಗಳಲ್ಲಿ ಇಥೆನಾಲ್ ಉತ್ಪಾದನೆಗೆ ಶೇ.20 ರಷ್ಟು ಅವಕಾಶ ನೀಡಿದ್ದಾರೆ. ಮುರುಗೇಶ್ ನಿರಾಣಿ ಅವರ ಇದರ ಸದುಪಯೋಗ ಪಡೆದವರಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: 10 ವರ್ಷ ಕಾಲ ರೈತರು ಪ್ರತಿಭಟನೆಗೆ ಸಿದ್ದರಿದ್ದಾರೆ – ರಾಕೇಶ್ ಟಿಕಾಯತ್

ಇದೇ ವೇಳೆ ಬೃಹತ್, ಮಧ್ಯಮ ಕೈಗಾರಿಕೆ ಸಚಿವರಾದ ಮುರುಗೇಶ್ ನಿರಾಣಿ ಮಾತನಾಡಿ, ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ಇಂದು ಮುಖ್ಯಮಂತ್ರಿಯವರೊಂದಿಗೆ ಹಂಚಿಕೊಳ್ಳುತ್ತಿರುವುದು ತವರಿಗೆ ಬಂದಿರುವ ಸಂತಸದ ಭಾವನೆ ಮೂಡಿಸಿದೆ. ಕೆಎಲ್‍ಇ ಸಪ್ತರ್ಷಿಗಳ ಪ್ರಯತ್ನದಿಂದ ಈ ಭಾಗದಲ್ಲಿ ಶಿಕ್ಷಣದ ಕ್ರಾಂತಿಯಾಗಲು, ವಿಶೇಷವಾಗಿ ಮಹಿಳೆಯರು ತಾಂತ್ರಿಕ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. 3-4 ದಶಕಗಳ ಹಿಂದೆ ಕೇವಲ ಸುಮಾರು 500 ರಿಂದ 600 ವಿದ್ಯಾರ್ಥಿಗಳಿದ್ದ ಈ ಕಾಲೇಜು ಇಂದು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಸುಮಾರು 6 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಕೇವಲ ಉದ್ಯೋಗಿಗಳಾಗದೇ ಮತ್ತೊಬ್ಬರಿಗೆ ಕೆಲಸ ನೀಡುವ ಉದ್ಯಮಪತಿಗಳಾಗಬೇಕು. ಸರ್ಕಾರ ಅನೇಕ ಪ್ರೋತ್ಸಾಹಕ ಯೋಜನೆಗಳ ಪ್ರಯೋಜನ ಪಡೆಯಬೇಕು. ಅಕ್ಟೋಬರ್ 15 ರಿಂದ ತಮ್ಮ ನಿರಾಣಿ ಸಮೂಹ ಸಂಸ್ಥೆಗಳ ಉದ್ಯಮ ಘಟಕಗಳು ಪುನರಾರಂಭ ಮಾಡಲಿವೆ. ಕಾಲೇಜಿನ ವಿದ್ಯಾರ್ಥಿಗಳು ಅಲ್ಲಿಗೆ ಭೇಟಿ ನೀಡಿ ಸ್ಫೂರ್ತಿ ಪಡೆಯಲಿ ಎಂದರು. ಇದನ್ನೂ ಓದಿ: ಹೆತ್ತ ಮಗಳನ್ನೇ ಕೊಂದ ತಂದೆ, ತಾಯಿ, ದೊಡ್ಡಪ್ಪ – ಮರ್ಯಾದಾ ಹತ್ಯಾ ಪ್ರಕರಣ ಬಯಲು

ಇದೇ ಸಂದರ್ಭದಲ್ಲಿ ಕೆಎಸ್ ಸಂಸ್ಥೆ ಹಾಗೂ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾಗಿರುವ ಬಸವರಾಜ ಬೊಮ್ಮಾಯಿ ಹಾಗೂ ಮುರುಗೇಶ್ ನಿರಾಣಿ ಅವರನ್ನು ಸನ್ಮಾನಿಸಲಾಯಿತು. ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications