- ಮಂತ್ರಾಲಯ ಮಠಕ್ಕೆ ಆಸ್ತಿ ಒಪ್ಪಿಸಲು ಸಿದ್ಧತೆ
ರಾಯಚೂರು: ತಾಲೂಕಿನ ಬಿಚ್ಚಾಲಿ (Bichchali) ಗ್ರಾಮದಲ್ಲಿನ ರಾಘವೇಂದ್ರ ಸ್ವಾಮಿಗಳ ಏಕಶಿಲಾ ವೃಂದಾವನ ಬಳಿಯ ಜಾಗದ ವಿವಾದ ಹಿನ್ನೆಲೆ ರಾಯರ ಜಪದ ಕಟ್ಟೆ ಬಳಿಯ 6 ಕೋಣೆಗಳು ಹಾಗೂ ಗೋಶಾಲೆಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ.
ಪೊಲೀಸ್ ಅಧಿಕಾರಿಗಳ ರಕ್ಷಣೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಅರ್ಚಕರ ವಶದಲ್ಲಿದ್ದ ಕೋಣೆಗಳಿಗೆ ಬೀಗ ಹಾಕಿ ವಶಕ್ಕೆ ಪಡೆದಿದ್ದಾರೆ. ಸರ್ವೆ ನಂ.35, 37 ರ 2 ಎಕರೆ 33 ಗುಂಟೆ ಜಾಗಕ್ಕಾಗಿ ಮಂತ್ರಾಲಯ ರಾಯರ ಮಠ ಹಾಗೂ ಅರ್ಚಕರು, ರೈತರ ನಡುವೆ ವಿವಾದವಿತ್ತು.
ಮಂತ್ರಾಲಯ ರಾಯರ ಮಠಕ್ಕೆ ( Mantralayam Raghavendra Swamy Mutt) ಸರ್ಕಾರ ಈ ಜಾಗ ಮಂಜೂರು ಮಾಡಿದ್ದು, ಇದರ ವಿರುದ್ಧ ಜಪದ ಕಟ್ಟಿ ಬಿಚ್ಚಾಲಿ ಅಪ್ಪಣ್ಣಾಚಾರ್ಯ ಸೇವಾ ಟ್ರಸ್ಟ್ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯ ಅರ್ಜಿ ವಜಾಗೊಳಿಸಿದ್ದರಿಂದ ಕೋರ್ಟ್ ಸೂಚನೆಯಂತೆ ಅಧಿಕಾರಿಗಳು ಸ್ಥಳದ ಸರ್ವೆ ಇದೇ ಏಪ್ರಿಲ್ 13 ರಂದು ಮಾಡಿದ್ದರು. ಯಾವುದೇ ನೋಟಿಸ್ ನೀಡದೆ ಸರ್ವೆ ಮಾಡಲಾಗಿದೆ ಎಂದು ಉಳುಮೆ ಮಾಡುತ್ತಿದ್ದ ರೈತರು ಆಕ್ರೋಶ ಹೊರ ಹಾಕಿದ್ದರು.
ಈಗ ಏಕಾಏಕಿ ಕೋಣೆಗಳಿಗೆ ಬೀಗ ಹಾಕಲಾಗುತ್ತಿದೆ ಎಂದು ಅರ್ಚಕರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಸೂಚನೆಯಂತೆ ಜಾಗದ ಸರ್ವೆ ಮಾಡಿ ಅಧಿಕಾರಿಗಳು ಬೀಗ ಹಾಕಿದ್ದಾರೆ. ರಾಯಚೂರು ಉಪ ವಿಭಾಗ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ರಾಯಚೂರು ತಹಶಿಲ್ದಾರ್ ಸುರೇಶ್ ವರ್ಮಾ ನೇತೃತ್ವದಲ್ಲಿ ಕೋಣೆಗಳಿಗೆ ಬೀಗ ಹಾಕಲಾಗಿದೆ. ಮಂತ್ರಾಲಯ ಮಠಕ್ಕೆ ಆಸ್ತಿಯನ್ನು ಒಪ್ಪಿಸಲಾಗುತ್ತಿದೆ.

