ರಾಮನಗರ: ಜಿಲ್ಲೆಯಲ್ಲಿನ ಹೆದ್ದಾರಿಯಲ್ಲಿ ಅಪರಾಧ ಕೃತ್ಯಗಳು ಹಾಗೂ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಬದಿಯ ಹೋಟೆಲ್, ಡಾಬಾ, ಟೀ ಸ್ಟಾಲ್‍ಗಳು ಕೂಡಾ ರಾತ್ರಿ 11 ಗಂಟೆಗೆ ಸಂಪೂರ್ಣ ವ್ಯಾಪಾರವನ್ನ ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಅಧಿನಿಯಮ 1963ರ ಅಡಿಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾರವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿ ಹಿನ್ನೆಲೆಯಲ್ಲಿ ಆದೇಶ ಹೊರಡಿಸಿದ್ದಾರೆ. ಸಣ್ಣ ಪುಟ್ಟ ಹೋಟೆಲ್‍ಗಳಿಂದ ಹಿಡಿದು ದೊಡ್ಡ ಡಾಬಾಗಳು, ಕೆಫೆ ಡೇಗಳು, ರೆಸ್ಟೋರೆಂಟ್‍ಗಳು ಇನ್ನು ಮುಂದೆ ರಾತ್ರಿ 11ರ ಒಳಗೆ ಬಾಗಿಲು ಮುಚ್ಚುವುದು ಕಡ್ಡಾಯವಾಗಿದ್ದು, ರಾತ್ರಿ 11 ಗಂಟೆ ನಂತರವೂ ವ್ಯಾಪಾರ ವಹಿವಾಟು ನಡೆಸಿದರೆ ಕಾನೂನು ಕ್ರಮ ಜರುಗಿಸಲಾಗುವುದು.
Advertisement
Advertisement
ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275(ರಾಮನಗರ ಮಾರ್ಗ), ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 209(ಕನಕಪುರ ಮಾರ್ಗ) ಬೆಂಗಳೂರು-ಕುಣಿಗಲ್ ರಾಷ್ಟ್ರೀಯ ಹೆದ್ದಾರಿ 75 (ಮಾಗಡಿ ಮಾರ್ಗ) ಹಾದು ಹೋಗಿವೆ. ಈ ಹೆದ್ದಾರಿಯ ಅಕ್ಕಪಕ್ಕದಲ್ಲಿ ನೂರಾರು ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್, ರೆಸಾರ್ಟ್ ಗಳು ಭರ್ಜರಿ ವ್ಯಾಪಾರ ನಡೆಸುತ್ತಿದ್ದು, ಇವುಗಳು ರಾತ್ರಿ 11 ಗಂಟೆಗೆ ಬಂದ್ ಮಾಡುವಂತೆ ಆದೇಶಿಸಲಾಗಿದೆ.
Advertisement
ಜಿಲ್ಲಾಡಳಿತದಿಂದ ಆದೇಶ ಜಾರಿಯಾಗಿದೆ. ರಾತ್ರಿ 11ರ ಬಳಿಕ ಪೊಲೀಸರು ಹೆದ್ದಾರಿಯಲ್ಲಿ ಗಸ್ತು ತಿರುಗಲಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಿದ್ದಾರೆ. ಮತ್ತೆ ತಪ್ಪು ಮುಂದುವರಿಸಿದಲ್ಲಿ ಅಂಗಡಿ, ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್ ಯಾವುದೇ ರೀತಿಯ ವಹಿವಾಟು ನಡೆಸುವ ಮಾಲೀಕರ ಪರವಾನಗಿ ರದ್ದು ಮಾಡುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.
Advertisement
ಭದ್ರತೆಯ ದೃಷ್ಟಿ, ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಹಾಗೂ ರಸ್ತೆ ಪ್ರಯಾಣಿಕರ ಸುರಕ್ಷತೆಯೇ ಈ ಆದೇಶಕ್ಕೆ ಮುಖ್ಯ ಕಾರಣವಾಗಿದೆ. ಕಳೆದ 4 ವರ್ಷದ ಅವಧಿಯಲ್ಲಿ ರಾತ್ರಿ ಸಮಯದಲ್ಲಿ ಹೆಚ್ಚು ಅಪರಾಧ ಪ್ರಕರಣಗಳು ವರದಿಯನ್ನ ಆಧರಿಸಿ ಎಸ್‍ಪಿ ಅನೂಪ್ ಶೆಟ್ಟಿರವರು ಇಂತಹದೊಂದು ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆ ಜಿಲ್ಲಾಧಿಕಾರಿಗಳು ಮನವಿಯನ್ನು ಪರಿಗಣಿಸಿ ಆದೇಶ ಹೊರಡಿಸಿದ್ದಾರೆ.
ಕಳೆದ ನಾಲ್ಕು ವರ್ಷದಲ್ಲಿ ಜಿಲ್ಲೆಯಾದ್ಯಂತ 2015ರ ಸೆಪ್ಟೆಂಬರ್‍ನಿಂದ ಈವರೆಗೆ ರಾತ್ರಿ ವೇಳೆ 66 ಕೊಲೆ, 14 ದರೋಡೆ, 53 ದರೋಡೆ ಯತ್ನ ಪ್ರಕರಣಗಳು ವರದಿ ಆಗಿವೆ. ಇದೇ ಸಮಯದಲ್ಲಿ 55 ಸುಲಿಗೆ, 12 ಸರಗಳ್ಳತನ, 655 ರಾತ್ರಿ ಕಳವು, 75 ಮನೆ ಕಳ್ಳತನ, 375 ಸಾಧಾರಣ ಕಳ್ಳತನ, 517 ವಾಹನ ಕಳ್ಳತನ, 637 ಮಾರಣಾಂತಿಕ ವಲ್ಲದ ರಸ್ತೆ ಅಪಘಾತ, 229 ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸಿವೆ. ಈ ಅಪರಾಧ ಕೃತ್ಯಗಳ ನಿಯಂತ್ರಣದ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ.
ರಾತ್ರಿ ಹೊತ್ತು ರಸ್ತೆ ಬದಿಯ ಡಾಬಾ, ಕೆಫೆಗಳಲ್ಲಿ ಜನರು ಮನೋರಂಜನೆ ಉದ್ದೇಶಕ್ಕೆ ಹೆಚ್ಚು ಸೇರುತ್ತಿದ್ದು, ತಡರಾತ್ರಿ ಮೋಜು-ಮಸ್ತಿ ನಡೆಯುತ್ತಿದೆ. ಇದರಿಂದ ಸಾರ್ವಜನಿಕರ ಶಾಂತಿಗೆ ಭಂಗವಾಗುತ್ತಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಿದ್ದು, ಇದರಿಂದಾಗಿ ಅಪಘಾತ, ಅಪರಾಧ ಪ್ರಮಾಣವೂ ಹೆಚ್ಚುತ್ತಿದೆ. ಹೀಗಾಗಿ ರಾತ್ರಿ ವ್ಯಾಪಾರಕ್ಕೆ ನಿರ್ಬಂಧ ಹೇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಜಿಲ್ಲಾಧಿಕಾರಿಗೆ ಪತ್ರದ ಮೂಲಕ ಕೋರಿದ್ದರು. ಅದರಂತೆ ರಾತ್ರಿ ವ್ಯಾಪಾರಕ್ಕೆ ಜಿಲ್ಲಾಧಿಕಾರಿಗಳು ಬ್ರೇಕ್ ಹಾಕಿದ್ದಾರೆ.