ಧುವನ್ ಫಿಲಂಸ್ ಲಾಂಛನದಲ್ಲಿ ಅಖಿಲೇಶ್ ಎಂ. ಅವರು ನಿರ್ಮಿಸಿರುವ, ವಿಜಯ್ ಪಾಳೇಗಾರ್ ನಿರ್ದೇಶಿಸಿರುವ ‘ರಾಶಿ’ (Raashi Movie) ಚಿತ್ರದ ಮೊದಲ ಹಾಡು ‘ಮೊದಲ ಪ್ರೀತಿ’ ಇತ್ತೀಚೆಗೆ ಬಿಡುಗಡೆಯಾಗಿದೆ. ಸುಪ್ರೀಂ ಹೀರೋ ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸಿರುವ ಈ ಚಿತ್ರದ ಹಾಡಿಗೆ ಇದೀಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಚಿತ್ರದ ನಿರ್ದೇಶಕ ವಿಜಯ್ ಪಾಳೇಗಾರ್ ಅವರೇ ಹಾಡನ್ನು ಬರೆದು, ಸಂಗೀತ ಸಂಯೋಜಿಸಿದ್ದಾರೆ. ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಹಾಡಿಗೆ ಧ್ವನಿಯಾಗಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಆದಿತ್ಯ ಶಶಿಕುಮಾರ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಆದಿತ್ಯ ಅವರು ತಂದೆ ಶಶಿಕುಮಾರ್ ಅವರಂತೆ ಉತ್ತಮ ನೃತ್ಯಗಾರರಾಗಿದ್ದು, ‘ಮೊದಲ ಪ್ರೀತಿ’ ಹಾಡಿನಲ್ಲಿ ಅವರ ಡ್ಯಾನ್ಸ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಹೆಸರಾಂತ ಡಿ ಬಿಟ್ಸ್ ಕಂಪನಿಯ ಮೂಲಕ ಬಿಡುಗಡೆಯಾಗಿರುವ ಹಾಡಿಗೆ ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಪಡೆಯುತ್ತಿದೆ. ಇದನ್ನೂ ಓದಿ: ಅವತ್ತು ಕಾರ್ ಕಾರ್.. ಇವತ್ತು ರನ್ ರನ್ : ಅಮೆರಿಕಾ ಅಮೆರಿಕಾ 2 ಸಾಂಗ್
‘ರಾಶಿ’ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ಇದರಲ್ಲಿ ಐದು ಹಾಡುಗಳು ಚಿತ್ರದಲ್ಲಿದ್ದು, ಒಂದು ಪ್ರಚಾರಗೀತೆಯಾಗಿರಲಿದೆ. ಕುನಾಲ್ ಗಾಂಜಾವಾಲ, ವಿಜಯ್ ಯೇಸುದಾಸ್, ಅನುರಾಧಾ ಭಟ್, ಶರಣ್, ಮಳವಳ್ಳಿ ಮಹಾದೇವಸ್ವಾಮಿ, ಸಿಟಿ ಲೈಟ್ಸ್ ಹಾಗೂ ‘ಭಾವ ಭಾವ’ ಖ್ಯಾತಿಯ ಅಂಕಿತ್ ಸೇರಿದಂತೆ ಹಲವು ಗಾಯಕರು ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ತೆರೆಗೆ ಬರಲು ಸಿದ್ಧವಾಗಿದೆ. ಕಾಮಿಡಿ, ಲವ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ಮಾಪಕ ಅಖಿಲೇಶ್ ಕಥೆ ಬರೆದಿದ್ದಾರೆ. ಚಿತ್ರಕಥೆ ಮತ್ತು ನಿರ್ದೇಶನ ವಿಜಯ್ ಪಾಳೇಗಾರ್ ಅವರದ್ದು.

ನವೀನ್ ಸೂರ್ಯ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಹಾಗೂ ಮಹೇಶ್ ಸಾತನೂರು ಕಲಾ ನಿರ್ದೇಶನ ಚಿತ್ರಕ್ಕಿದೆ. ಆದಿತ್ಯ ಶಶಿಕುಮಾರ್ ಅವರಿಗೆ ಸಮೀಕ್ಷಾ ನಾಯಕಿಯಾಗಿ ನಟಿಸಿದ್ದಾರೆ. ರಮೇಶ್ ಇಂದಿರಾ, ತಬಲ ನಾಣಿ, ವೀಣಾ ಸುಂದರ್, ಮಂಜು ಪಾವಗಡ, ಕರಿ ಸುಬ್ಬು, ವಿನೋದ್ ಗೊಬ್ಬರಗಾಲ, ಹುಲಿ ಕಾರ್ತಿಕ್, ವರ್ಧನ್ ತೀರ್ಥಹಳ್ಳಿ, ಉಗ್ರಂ ರವಿ, ಭಜರಂಗಿ ಪ್ರಸನ್ನ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ: ಯಶ್ ದಂಪತಿಯನ್ನು ಮದುವೆಗೆ ಆಹ್ವಾನಿಸಿದ ಚಿಕ್ಕಣ್ಣ

