– ಕಾಂಗ್ರೆಸ್ ವರಿಷ್ಠರ ವಿರೋಧದ ನಡುವೆ ಅಚ್ಚರಿ ಮೂಡಿಸಿದ ‘ಕೈ’ ಶಾಸಕನ ಹೇಳಿಕೆ
– ಮಸೂದೆಯಿಂದ ಬಿಜೆಪಿಗೆ ಮಾತ್ರ ಲಾಭವಾಗಲ್ಲ ಎಂದ ಕೊತ್ತೂರು ಮಂಜುನಾಥ್
ಕೋಲಾರ: ಕೇಂದ್ರ ಸರ್ಕಾರದ ಡಿಲಿಮಿಟೇಶನ್ ಬಿಲ್ಗೆ (Delimitation Bill) ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ (Kothur Manjunath) ಸ್ವಾಗತ ಕೋರಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಅಚ್ಚರಿ ಮೂಡಿಸಿದೆ.
ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್, ಒಬ್ಬ ಶಾಸಕರ ಕ್ಷೇತ್ರದಲ್ಲಿ ಸುಮಾರು 1 ಲಕ್ಷದಿಂದ 1.5 ಲಕ್ಷ ಮತದಾರರಿದ್ದರೆ ಕ್ಷೇತ್ರವನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಇತರ ದೇಶಗಳಲ್ಲಿ ಜನಪ್ರತಿನಿಧಿಗಳ ಕ್ಷೇತ್ರಗಳ ವ್ಯಾಪ್ತಿ ಮತ್ತು ಮತದಾರರ ಸಂಖ್ಯೆ ಕಡಿಮೆ ಇದೆ. ನಮ್ಮಲ್ಲಿಯೂ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳ ಮರುವಿಂಗಡಣೆ ಮಾಡಿದರೆ ಉತ್ತಮ. ಬೇರೆ ದೇಶಗಳಾದ ಇಂಡೋನೇಷ್ಯಾ, ಕಾಂಬೋಡಿಯಾ, ಮಲೇಷ್ಯಾ, ಸಿಂಗಾಪುರ್ ಮುಂತಾದ ದೇಶಗಳಲ್ಲಿ 8 ಸಾವಿರ ಮತಗಳು, ಸಂಸದರಿಗೆ ಗರಿಷ್ಠ ಸುಮಾರು 60,000 ಮತಗಳು, ಪುರಸಭೆ ಸದಸ್ಯರಿಗೆ ಸುಮಾರು 7,000–8,000 ಮತಗಳ ವ್ಯವಸ್ಥೆ ಇರುತ್ತೆ. ನಮ್ಮಲ್ಲಿ ಜನಸಂಖ್ಯೆ ಹೆಚ್ಚಿದ್ದರೂ, ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ವಿಂಗಡಣೆ ಮಾಡಿದರೆ ಒಳ್ಳೆಯದು ಎಂದರು. ಇದನ್ನೂ ಓದಿ: ಕಾಂಗ್ರೆಸ್ಗೆ ಮತ್ತೊಂದು ಶಾಕ್; ಕೇಂದ್ರದ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಜೆಎಂಎಂ ಬೆಂಬಲ ಸಾಧ್ಯತೆ
ಡಿಲಿಮಿಟೇಶನ್ಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ ಎಂದು ಎಲ್ಲಿಯೂ ಹೇಳಿಲ್ಲ. ಕ್ಷೇತ್ರ ಮರುವಿಂಗಡಣೆಯಿಂದ ಬಿಜೆಪಿಗೆ ಮಾತ್ರ ಲಾಭವಾಗುವುದಿಲ್ಲ. ಯಾರಿಗೂ ವಿಶೇಷ ಲಾಭವಿಲ್ಲ. ಶಾಸಕರು ಮತ್ತು ಸಂಸದರ ಕ್ಷೇತ್ರಗಳ ಮರುವಿಂಗಡಣೆ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ತಮಿಳುನಾಡಿನ ಕಾರ್ತಿಕ ದೀಪ ವಿವಾದದ ಬಗ್ಗೆಯೂ ಶಾಸಕ ಕೊತ್ತೂರು ಮಂಜುನಾಥ್ ಪ್ರತಿಕ್ರಿಯಿಸಿ, ಯಾವುದೇ ಸಮುದಾಯದ ಸಿದ್ಧಾಂತ ಮತ್ತು ಸಂಪ್ರದಾಯಗಳಿಗೆ ಧಕ್ಕೆ ತರಬಾರದು. ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ದೀಪ ಬೆಳಗಿಸುವ ವಿಚಾರವಾಗಿ ನಡೆದ ವಿವಾದದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ್ದು, ದೀಪ ಬೆಳಗಿಸಲು CRPF ಪಡೆ ಆಗಮಿಸಿದಾಗ ಸಾರ್ವಜನಿಕರಿಂದ ಭವ್ಯ ಸ್ವಾಗತ ದೊರೆತಿದೆ. ವಿವಿಧ ಬಣ್ಣಗಳ ಹೂವುಗಳನ್ನು ಸುರಿಸಿ ಪಡೆಗೆ ಸ್ವಾಗತ ಕೋರಿದ್ದಾರೆ. ದೀಪ ಬೆಳಗಿದ ಸಂತಸಕ್ಕೆ ಜನರು ಭಾವುಕರಾಗಿದ್ದಾರೆ. ಕಳೆದ 80 ವರ್ಷಗಳಿಂದ ಬೆಳಗಿಸದಿದ್ದ ದೀಪ ಇದೀಗ ಬೆಳಗಿರುವುದು ಸಂತಸದ ವಿಚಾರ. ಇದರಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಒಂದು ಸಮುದಾಯದ ಧಾರ್ಮಿಕ ಸಂಪ್ರದಾಯ ಮತ್ತು ನಂಬಿಕೆಗಳಿಗೆ ಧಕ್ಕೆ ತರುವ ಪ್ರಯತ್ನವನ್ನು ಸುಪ್ರೀಂ ಕೋರ್ಟ್ ತಡೆದಿದೆ ಎಂದರು. ಇದನ್ನೂ ಓದಿ: ಇಂಡಿ ಒಕ್ಕೂಟದ ನಾಯಕರನ್ನ ಆತ್ಮೀಯವಾಗಿ ಸ್ವಾಗತಿಸಿದ ಸ್ಟಾಲಿನ್
