ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು ಭಾರತೀಯ ಪೌರತ್ವ ಪಡೆಯುವ 3 ವರ್ಷಗಳ ಮುನ್ನವೇ, 1980ರ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು (Delhi Police) ಶನಿವಾರ ನ್ಯಾಯಾಲಯಕ್ಕೆ 2 ವರದಿಗಳನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಸಲ್ಲಿಸಲಾಗಿದ್ದ ದೂರಿನ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ವರದಿ ನೀಡುವಂತೆ ಮ್ಯಾಜಿಸ್ಟ್ರೇಟ್ ವಿನೋದ್ ಜೋಶಿ ಅವರು ಈ ಹಿಂದೆ ಪೊಲೀಸರಿಗೆ ಸೂಚಿಸಿದ್ದರು. ಪ್ರಕರಣದ ಮುಂದಿನ ವಿಚಾರಣೆಯನ್ನ ಡಿಸೆಂಬರ್ 14ಕ್ಕೆ ನಿಗದಿಪಡಿಸಲಾಗಿದೆ.
ನ.27ರಂದು ಸಲ್ಲಿಸಲಾದ ಪೊಲೀಸ್ ವರದಿಯ ಪ್ರಕಾರ, ದೂರಿನಲ್ಲಿ ಮಾಡಲಾಗಿರುವ ಆರೋಪಗಳು ಐಪಿ ಎಸ್ಟೇಟ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಅಗತ್ಯ ಕ್ರಮಕ್ಕಾಗಿ ದೂರನ್ನ ನವದೆಹಲಿ ಜಿಲ್ಲೆಗೆ ವರ್ಗಾಯಿಸಲಾಗಿತ್ತು. ನಂತರ ದೂರನ್ನು ತುಘಲಕ್ ರೋಡ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಮ್ಯಾಜಿಸ್ಟ್ರೇಟ್ ಸೂಚಿಸಿದ ಹಿನ್ನೆಲೆ ಠಾಣಾಧಿಕಾರಿಯು ಕೈಗೊಂಡ ಕ್ರಮಗಳ ಕುರಿತು ಮತ್ತೊಂದು ವರದಿ ಸಲ್ಲಿಸಿದ್ದಾರೆ.
2ನೇ ವರದಿಯಲ್ಲಿ, 1980 ಮತ್ತು 1983ರ ಮತದಾರರ ಪಟ್ಟಿಗೆ ಸಂಬಂಧಿಸಿದ ದಾಖಲೆಗಳ ಮಾಹಿತಿ ಕೋರಿ ನವದೆಹಲಿ ಜಿಲ್ಲಾಧಿಕಾರಿಗೆ ಈ ಹಿಂದೆ ನೋಟಿಸ್ ನೀಡಲಾಗಿತ್ತು. ಇದಕ್ಕೆ ಜಿಲ್ಲಾಡಳಿತ ನೀಡಿದ ಉತ್ತರದಲ್ಲಿ ಸೋನಿಯಾ ಗಾಂಧಿ ಅವರ ಹೆಸರು ಎರಡೂ ಮತದಾರರ ಪಟ್ಟಿಗಳಲ್ಲಿ ಸೇರ್ಪಡೆಯಾಗಿರುವುದು ದೃಢಪಟ್ಟಿದೆ. ಆದರೆ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಸಲ್ಲಿಸಲಾಗಿದ್ದ ಫಾರ್ಮ್-6 (Form 6) ಸೇರಿದಂತೆ ಇತರ ಸಂಬಂಧಿತ ದಾಖಲೆಗಳು ಇನ್ನೂ ಲಭ್ಯವಾಗಿಲ್ಲ. ಅವುಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ಮುಂದುವರಿದಿವೆ ಎಂದು ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ.
ಇದಲ್ಲದೆ, ಸೋನಿಯಾ ಗಾಂಧಿ ಅವರಿಗೆ ಭಾರತೀಯ ಪೌರತ್ವ ನೀಡಲಾದ ದಿನಾಂಕದ ಕುರಿತು ಮಾಹಿತಿ ಪಡೆಯಲು ಕೇಂದ್ರ ಗೃಹ ಸಚಿವಾಲಯದ ವಿದೇಶಿಗರ ವಿಭಾಗಕ್ಕೆ ನೋಟಿಸ್ ನೀಡಲಾಗಿತ್ತು. ಅದರಂತೆ ಆಂಟೋನಿಯಾ ಮೈನೋ ಅಲಿಯಾಸ್ ಸೋನಿಯಾ ಗಾಂಧಿ ಅವರಿಗೆ 1983ರ ಏಪ್ರಿಲ್ 30ರಂದು ಭಾರತೀಯ ಪೌರತ್ವ ಪ್ರಮಾಣಪತ್ರ ನೀಡಲಾಗಿದೆ ಎಂದು ಪೊಲೀಸರು ಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖವಾಗಿರುವುದು ಬೆಳಕಿಗೆ ಬಂದಿದೆ.
ದೂರುದಾರರ ಪರವಾಗಿ ವಕೀಲ ವಿಕಾಸ್ ತ್ರಿಪಾಠಿ ಅವರ ಪರ ವಕೀಲ ನೀರಜ್ ಅವರು ನ್ಯಾಯಾಲಯದಲ್ಲಿ ಹಾಜರಾಗಿದ್ದರು.
ಸೋನಿಯಾ ಗಾಂಧಿ ಅವರ ಮತದಾರರ ಪಟ್ಟಿಯಲ್ಲಿನ ಹೆಸರು ಸೇರ್ಪಡೆಗೆ ಸಂಬಂಧಿಸಿದ ದಾಖಲೆಗಳನ್ನ ಪೊಲೀಸರು ಪತ್ತೆಹಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 14ರಂದು ನಡೆಯಲಿದೆ.

