ಚೆನ್ನೈ: ತಮಿಳುನಾಡಿನ ಮಧುರೈ ಸಮೀಪದ ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಐತಿಹಾಸಿಕ ಕಾರ್ತಿಕ ದೀಪೋತ್ಸವವು ಭಕ್ತಿ, ಶ್ರದ್ಧೆ ಹಾಗೂ ಧಾರ್ಮಿಕ ಸಂಭ್ರಮದೊಂದಿಗೆ ಸಂಪನ್ನಗೊಂಡಿತು. ಕಾರ್ತಿಕ ಮಾಸದ ಪವಿತ್ರ ದೀಪಾರಾಧನೆಯನ್ನ ವಿಧಿವತ್ತಾಗಿ ಪೂರ್ಣಗೊಳಿಸುವ ಮೂಲಕ ಭಕ್ತರು ದೇವರ ಕೃಪೆಗೆ ಪಾತ್ರರಾದರು.
ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ಸರಿಯಾಗಿ ಸಂಜೆ 5 ಗಂಟೆಗೆ ಬೆಟ್ಟದ ದೀಪತ್ತೂನ್ ಸ್ತಂಭದಲ್ಲಿ ಪವಿತ್ರ ದೀಪವನ್ನು ಬೆಳಗಿಸಲಾಯಿತು. ಈ ಸಂದರ್ಭದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ನ್ಯಾಯಾಧೀಶರು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಅಧಿಕಾರಿಗಳು ಹಾಗೂ ಅನುಮತಿ ಪಡೆದ 50 ಭಕ್ತರು ಉಪಸ್ಥಿತರಿದ್ದರು. ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತಿಭಾವದಿಂದ ದೀಪ ಬೆಳಗಿಸುವ ಮೂಲಕ ಕಾರ್ತಿಕ ದೀಪಾರಾಧನೆ ನೆರವೇರಿಸಲಾಯಿತು.
ಬೆಟ್ಟದ ಶಿಖರದಲ್ಲಿ ಪ್ರಜ್ವಲಿಸಿದ ಪವಿತ್ರ ಜ್ಯೋತಿಯು ಸುತ್ತಮುತ್ತಲಿನ ಪ್ರದೇಶವನ್ನೆಲ್ಲ ಬೆಳಗಿಸಿತು. ದೀಪದ ದಿವ್ಯ ಬೆಳಕನ್ನು ಇಡೀ ಊರಿನ ಜನರು ಕಣ್ತುಂಬಿಕೊಂಡರು. ಭಕ್ತಿ, ನಂಬಿಕೆ ಮತ್ತು ಆಧ್ಯಾತ್ಮಿಕ ಶ್ರದ್ಧೆಯ ಪ್ರತೀಕವಾಗಿ ಕಂಗೊಳಿಸಿದ ಈ ದೀಪೋತ್ಸವವು ಭಕ್ತರ ಮನದಲ್ಲಿ ಅವಿಸ್ಮರಣೀಯ ಕ್ಷಣವಾಗಿ ಉಳಿಯಿತು. ʻಮುರುಗನಿಗೆ ಹರೋಹರʼ ಎಂಬ ಭಕ್ತಿಯ ಉದ್ಘೋಷದೊಂದಿಗೆ ಕಾರ್ತಿಕ ದೀಪದ ಸಂಭ್ರಮ ಮನೆಮಾಡಿತು.


