ನವದೆಹಲಿ: ತಮಿಳುನಾಡಿನ ಮದುರೈ ಬಳಿಯಿರುವ ಐತಿಹಾಸಿಕ ತಿರುಪ್ಪರಂಕುಂದ್ರಂ (Thirupparankundram) ಬೆಟ್ಟದ ತುದಿಯಲ್ಲಿ ಕಾರ್ತಿಕ ದೀಪ ಹಚ್ಚುವ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪಿನ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ವೆಟ್ರಿವೇಲ್ ಮುರುಗನುಕ್ಕು ಅರೋಗರಾ!.ಭಗವಾನ್ ಮುರುಗನಿಗೆ ಜಯವಾಗಲಿ!(Victory to Lord Murugan!) ಎಂದು ಬರೆಯುವ ಮೂಲಕ ಪ್ರಧಾನಿ ಮೋದಿ ತಮ್ಮ ಭಕ್ತಿ ಮತ್ತು ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಶಿವ ಮತ್ತು ಪಾರ್ವತಿಯರ ಮಗನಾದ ಮುರುಗನ್ ದೇವರನ್ನು ಪ್ರದೇಶಕ್ಕೆ ತಕ್ಕಂತೆ ಬೇರೆ ಬೇರೆ ಹೆಸರುಗಳಿಂದ ಪೂಜಿಸಲಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸುಬ್ರಹ್ಮಣ್ಯ / ಕುಮಾರಸ್ವಾಮಿ / ಷಣ್ಮುಖ ಎಂದು ಕರೆದರೆ ತಮಿಳುನಾಡು ಮತ್ತು ಕೇರಳದಲ್ಲಿ ಮುರುಗನ್ ಹೆಸರಿನಿಂದ ಕರೆಯಲಾಗುತ್ತದೆ. ಉತ್ತರ ಭಾರತದಲ್ಲಿ ಮತ್ತು ಪುರಾಣಗಳಲ್ಲಿ ಕಾರ್ತಿಕೇಯ / ಸ್ಕಂದ ಹೆಸರುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.
Vetrivel Muruganukku Arogara!
வெற்றிவேல் முருகனுக்கு அரோகரா!
वेट्रिवेल मुरुगनुक्कु अरोगरा!
— Narendra Modi (@narendramodi) November 27, 2026
ಏನಿದು ವಿವಾದ?
ಮದುರೈನ ತಿರುಪ್ಪರಂಕುಂದ್ರಂ ಬೆಟ್ಟದ ತುದಿಯಲ್ಲಿರುವ ಕಲ್ಲಿನ ಸ್ತಂಭದ ಮೇಲೆ ‘ಕಾರ್ತಿಕ ದೀಪ’ ಹಚ್ಚುವ ವಿಚಾರವಾಗಿ ಕಳೆದ ಕೆಲವು ಸಮಯದಿಂದ ತಮಿಳುನಾಡು ಸರ್ಕಾರ ಮತ್ತು ಹಿಂದೂ ಸಂಘಟನೆಗಳ ನಡುವೆ ಕಾನೂನು ಸಮರ ನಡೆಯುತ್ತಿತ್ತು. ಕಳೆದ 150 ವರ್ಷಗಳಿಂದ ಬೆಟ್ಟದ ಕೆಳಭಾಗದಲ್ಲಿ ದೀಪ ಹಚ್ಚುವ ಸಂಪ್ರದಾಯವಿದ್ದು, ಬೆಟ್ಟದ ತುದಿಯಲ್ಲಿರುವುದು ದೀಪದ ಕಂಬವಲ್ಲ, ಅದು ಕೇವಲ ಅಳತೆ ಕಂಬ ಎಂದು ತಮಿಳುನಾಡಿನ ಸರ್ಕಾರ ವಾದಿಸಿತ್ತು. ಇದನ್ನೂ ಓದಿ: ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ನಾಳೆಯೇ ದೀಪ ಬೆಳಗಿಸಿ – ತಮಿಳುನಾಡು ವಿರುದ್ಧ ಸುಪ್ರೀಂ ಕೆಂಡಾಮಂಡಲ
ಸುಪ್ರೀಂ ಕೋರ್ಟ್ ತೀರ್ಪನ್ನು ಬಿಜೆಪಿ ಮತ್ತು ಹಿಂದೂ ಮುನ್ನಣಿ ಸೇರಿದಂತೆ ಹಲವು ಸಂಘಟನೆಗಳು ಸ್ವಾಗತಿಸಿದ್ದು, ಇದು ನ್ಯಾಯ ಮತ್ತು ಭಕ್ತರ ನಂಬಿಕೆಗೆ ಸಂದ ಜಯ ಎಂದು ಬಣ್ಣಿಸಿವೆ. ಪ್ರಧಾನಿ ಮೋದಿ ಅವರ ಈ ಪೋಸ್ಟ್ ಈಗ ಟ್ರೆಂಡ್ ಸೃಷ್ಟಿಸಿದ್ದು ಭಕ್ತರ ನಂಬಿಕೆಗೆ ಸಿಕ್ಕ ಗೆಲುವನ್ನು ಅವರು ಈ ರೀತಿ ಸಂಭ್ರಮಿಸಿದ್ದಾರೆ.
