– ಕರ್ನಾಟಕದ 28 ಲೋಕಸಭಾ ಸ್ಥಾನಗಳು 42ಕ್ಕೆ ಏರಿಕೆ
– ವಿಧಾನಸಭಾ ಸ್ಥಾನಗಳು 336ಕ್ಕೆ ಹೆಚ್ಚಳವಾಗುವ ಸಾಧ್ಯತೆ
ನವದೆಹಲಿ: ದೇಶದ ರಾಜಕೀಯ ನಕ್ಷೆಯನ್ನೇ ಬದಲಿಸುವ ಹಾಗೂ ಮಹಿಳಾ ಮೀಸಲಾತಿಗೆ(Women Reservation Bill) ಹೊಸ ವೇಗ ನೀಡುವ ಐತಿಹಾಸಿಕ ಮಸೂದೆಯ ರಹಸ್ಯ ಇದೀಗ ಬಯಲಾಗಿದೆ.
ಲೋಕಸಭೆ(Lok Sabha) ಮತ್ತು ವಿಧಾನಸಭಾ ಕ್ಷೇತ್ರಗಳ(Vidhan Sabha Constituency) ಸಂಖ್ಯೆಯನ್ನು ಬರೋಬ್ಬರಿ ಶೇ. 50ರಷ್ಟು ಹೆಚ್ಚಿಸುವ ‘ದಿ ಡಿಲಿಮಿಟೇಶನ್ (ಸೆಕೆಂಡ್) ಬಿಲ್, 2026 (Delimitation (Second) Bill, 2026) ಕರಡು ಪ್ರತಿ ಬಹಿರಂಗಗೊಂಡಿದ್ದು, ಮುಂಬರುವ ಚುನಾವಣಾ ವ್ಯವಸ್ಥೆಯ ಸಂಪೂರ್ಣ ಚಿತ್ರಣವನ್ನೇ ಬದಲಿಸಲಿದೆ. ನವೆಂಬರ್ 30ರಂದು ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಮಹತ್ವದ ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ.
ಪ್ರಸ್ತುತ ಇರುವ ಸ್ಥಾನಗಳ ಸಂಖ್ಯೆಯನ್ನು ಶೇ. 50ರಷ್ಟು ಹೆಚ್ಚಿಸುವ ಮತ್ತು 2051ರವರೆಗೂ ಸ್ಥಾನಗಳ ಮರುಹೊಂದಾಣಿಕೆಯನ್ನು ಮುಂದೂಡುವ ಮಹತ್ವದ ಅಂಶಗಳನ್ನು ಈ ಮಸೂದೆ ಒಳಗೊಂಡಿದೆ. ಜನಸಂಖ್ಯಾ ನಿಯಂತ್ರಣ (Population Control) ಮಾಡಿರುವ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬ ಆತಂಕವನ್ನು ದೂರ ಮಾಡಲು ಕೇಂದ್ರ ಸರ್ಕಾರ ಪರಿಷ್ಕೃತ ಸೂತ್ರವನ್ನು ಸಿದ್ಧಪಡಿಸಿದೆ. ಇದನ್ನೂ ಓದಿ: ಕ್ಷೇತ್ರ ಮರುವಿಂಗಡಣೆ ಮಸೂದೆಯಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲ್ಲ: ಜೆಡಿಎಸ್, ಟಿಡಿಪಿ
ಮಸೂದೆಯಲ್ಲಿ ಏನಿದೆ?
1971ರ ಜನಗಣತಿ ಆಧಾರ ಮತ್ತು ಶೇ. 50 ಹೆಚ್ಚಳ:
ರಾಜ್ಯಗಳ ನಡುವಿನ ಸ್ಥಾನಗಳ ಅನುಪಾತದಲ್ಲಿ ಯಾವುದೇ ಬದಲಾವಣೆಯಾಗದಂತೆ 1971ರ ಜನಗಣತಿಯ ಆಧಾರದ ಮೇಲೆಯೇ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೋಕಸಭೆ ಹಾಗೂ ವಿಧಾನಸಭಾ ಸ್ಥಾನಗಳನ್ನು ನೇರವಾಗಿ ಶೇ. 50ರಷ್ಟು ಹೆಚ್ಚಿಸಲಾಗುವುದು. ಈ ಮೂಲಕ ದಕ್ಷಿಣದ ರಾಜ್ಯಗಳು ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ತಮ್ಮ ಪ್ರಾತಿನಿಧ್ಯ ಕಳೆದುಕೊಳ್ಳುವ ಭೀತಿಯನ್ನು ನಿವಾರಿಸಲಾಗಿದೆ.
2011ರ ಜನಗಣತಿ ಪ್ರಕಾರ ಗಡಿ ನಿರ್ಣಯ ಮತ್ತು 2051ರವರೆಗೆ ಮುಂದೂಡಿಕೆ:
ಸ್ಥಾನಗಳ ಸಂಖ್ಯೆಯನ್ನು 1971ರ ಜನಗಣತಿ ಆಧಾರದಲ್ಲಿ ನಿರ್ಧರಿಸಿದರೂ, ಕ್ಷೇತ್ರಗಳ ಗಡಿಗಳನ್ನು (Constituency Boundaries) 2011ರ ಜನಗಣತಿ ಅಂಕಿಅಂಶಗಳ ಪ್ರಕಾರ ಮರುನಿರ್ಧರಿಸಲಾಗುವುದು. ಸಂವಿಧಾನದ 330 ಮತ್ತು 332ನೇ ವಿಧಿಗಳಿಗೆ ತಿದ್ದುಪಡಿ ತರುವ ಮೂಲಕ, 2026ರ ನಂತರದ ಮೊದಲ ಜನಗಣತಿಯ ಆಧಾರದ ಮೇಲೆ ನಡೆಯಬೇಕಿದ್ದ ಸ್ಥಾನಗಳ ಮರುಹೊಂದಾಣಿಕೆಯನ್ನು 2051ನೇ ಇಸವಿಯವರೆಗೆ ಮುಂದೂಡಲು ಪ್ರಸ್ತಾಪಿಸಲಾಗಿದೆ. ಅಲ್ಲಿಯವರೆಗೂ 132ನೇ ತಿದ್ದುಪಡಿ ಕಾಯ್ದೆ ಜಾರಿಯಾಗುವ ದಿನಾಂಕದಂದು ಲಭ್ಯವಿರುವ ಇತ್ತೀಚಿನ ಪ್ರಕಟಿತ ಜನಗಣತಿ ಅಂಕಿಅಂಶಗಳನ್ನೇ ಆಧಾರವಾಗಿ ಪರಿಗಣಿಸಲಾಗುವುದು.
ಲೋಕಸಭೆ 850, ವಿಧಾನಸಭೆ 650 ಗರಿಷ್ಠ ಮಿತಿ:
ಲೋಕಸಭೆಯ ಗರಿಷ್ಠ ಸದಸ್ಯ ಬಲವನ್ನು 850ಕ್ಕೆ ಮತ್ತು ರಾಜ್ಯ ವಿಧಾನಸಭೆಗಳ ಗರಿಷ್ಠ ಸದಸ್ಯ ಬಲವನ್ನು 650ಕ್ಕೆ ನಿಗದಿಪಡಿಸಲು ಉದ್ದೇಶಿಸಲಾಗಿದೆ. ಆದರೆ ಕೇಂದ್ರಾಡಳಿತ ಪ್ರದೇಶಗಳಿಗೆ ವಿಭಿನ್ನ ಅಗತ್ಯಗಳಿರುವುದರಿಂದ ಈ ಏರಿಕೆಯನ್ನು ಎಲ್ಲೆಡೆ ಏಕರೂಪವಾಗಿ ಅನ್ವಯಿಸಲು ಸಾಧ್ಯವಿಲ್ಲ ಎಂದು ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ.
#WATCH | Mumbai, Maharashtra: On his discussion with Sharad Pawar, NCP-SCP leader Jitendra Awhad says, “The discussion wasn’t about our party’s official stance. The general point being made was that the delimitation process is a constitutional requirement… A decision has been made to support the delimitation process, and we will indeed support it. We will support the delimitation.”
— ANI (@ANI) November 27, 2026
ಮೂರು ಮಸೂದೆಗಳ ಮಂಡನೆ:
ಸಂವಿಧಾನದ 8 ವಿಧಿಗಳಿಗೆ ತಿದ್ದುಪಡಿ ತರಲಾಗುತ್ತಿದ್ದು, ಈ ಹಿಂದಿನ ಎರಡು ಮಸೂದೆಗಳನ್ನು ಹಿಂಪಡೆಯಲಾಗುವುದು. ಅದರ ಬದಲಿಗೆ ಸಂವಿಧಾನ (132ನೇ ತಿದ್ದುಪಡಿ) ಮಸೂದೆ-2026 ಮತ್ತು ‘ದಿ ಡಿಲಿಮಿಟೇಶನ್ (ಸೆಕೆಂಡ್) ಬಿಲ್-2026’ ಸೇರಿದಂತೆ ಒಟ್ಟು ಮೂರು ಮಸೂದೆಗಳನ್ನು ನವೆಂಬರ್ 30ರಂದು ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ.
2029ರ ಚುನಾವಣೆಗೆ ಹೊಸ ಕ್ಷೇತ್ರಗಳು:
ತಂತ್ರಜ್ಞಾನ ಆಧಾರಿತ ದತ್ತಾಂಶ ಸಂಗ್ರಹಣೆಯ ಮೂಲಕ ಎರಡು ವರ್ಷಗಳಲ್ಲಿ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರ ಯೋಜಿಸಿದೆ. ಇದರಿಂದ 2029ರ ಲೋಕಸಭಾ ಚುನಾವಣೆಯು ಹೊಸ ಕ್ಷೇತ್ರಗಳ ಗಡಿಗಳ ಅಡಿಯಲ್ಲೇ ನಡೆಯಲಿದೆ.
ಮಹಿಳಾ ಮೀಸಲಾತಿ ಜಾರಿ ಮತ್ತು ವಿಧಿ 334A ತಿದ್ದುಪಡಿ:
ಲೋಕಸಭೆ ಹಾಗೂ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (ದೆಹಲಿ, ಪುದುಚೇರಿ, ಜಮ್ಮು-ಕಾಶ್ಮೀರ ಸೇರಿ) ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ. 2023ರಲ್ಲಿ ಅಂಗೀಕಾರವಾಗಿದ್ದ ಶೇ. 33ರಷ್ಟು ಮಹಿಳಾ ಮೀಸಲಾತಿ ಕಾಯ್ದೆಯನ್ನು ತಕ್ಷಣವೇ ಜಾರಿಗೆ ತರುವ ಸಲುವಾಗಿ ಸಂವಿಧಾನದ 334A ವಿಧಿಗೆ ತಿದ್ದುಪಡಿ ತರಲಾಗುತ್ತಿದೆ. ಇದರ ಅನ್ವಯ, ಕ್ಷೇತ್ರ ಪುನರ್ವಿಂಗಡಣೆಗೂ ಮುನ್ನ ಇರುವ ಸ್ಥಾನಗಳಿಗೆ ಹೋಲಿಸಿದರೆ, ಲೋಕಸಭೆ ಮತ್ತು ವಿಧಾನಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು ಶೇ. 50ರಷ್ಟು ಹೆಚ್ಚಿಸಲಾಗುವುದು. ಇದನ್ನೂ ಓದಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಪಾಸ್ ಆದ್ರೆ ದೇಶದಲ್ಲಿ ಉಳಿದಿರುವ ಪ್ರಜಾಪ್ರಭುತ್ವ ಸಂಪೂರ್ಣ ಅಂತ್ಯ: ಕಪಿಲ್ ಸಿಬಲ್
#WATCH | Delhi: On ANI’s question of whether he sees the current Delimitation Bill as a win-win situation for all especially when it was called “the biggest defeat of NDA and PM Modi in the last 12 yrs” when defeated the last time, Andhra Pradesh CM N. Chandrababu Naidu says, “…It was not NDA’s loss. It was not Prime Minister’s defeat. At that time it was the defeat of women’s political empowerment…But PM never lost that approach. Again, he is bringing the Bill. He is fighting. Any number of times you oppose, Prime Minister will be the ultimate winner. People will remember him forever. It is going to happen. I really appreciate the Prime Minister on this occasion. Historical Bill, historical decision, historical time…”
— ANI (@ANI) November 27, 2026
ಕ್ಷೇತ್ರ ಪುನರ್ವಿಂಗಡಣಾ ಆಯೋಗದ ರಚನೆ:
ಈ ಕಾಯ್ದೆ ಜಾರಿಯಾದ ತಕ್ಷಣ ಕೇಂದ್ರ ಸರ್ಕಾರವು ಅಧಿಸೂಚನೆಯ ಮೂಲಕ ‘ಕ್ಷೇತ್ರ ಪುನರ್ವಿಂಗಡಣಾ ಆಯೋಗ’ವನ್ನು ರಚಿಸಲಿದೆ. ಈ ಆಯೋಗದಲ್ಲಿ ಮೂವರು ಸದಸ್ಯರಿರುತ್ತಾರೆ — ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರು (ಕೇಂದ್ರ ಸರ್ಕಾರದಿಂದ ನೇಮಕ), ಸದಸ್ಯರಾಗಿ ಮುಖ್ಯ ಚುನಾವಣಾ ಆಯುಕ್ತರು ಅಥವಾ ಅವರು ನಾಮನಿರ್ದೇಶನ ಮಾಡುವ ಚುನಾವಣಾ ಆಯುಕ್ತರು ಹಾಗೂ ಆಯಾ ರಾಜ್ಯಗಳ ರಾಜ್ಯ ಚುನಾವಣಾ ಆಯುಕ್ತರು ಪದನಿಮಿತ್ತ ಸದಸ್ಯರಾಗಿರುತ್ತಾರೆ.
ಸ್ಥಾನಗಳ ಸಂಖ್ಯೆ ಎಷ್ಟಾಗಬಹುದು?
ಪ್ರಸ್ತುತ ಲೋಕಸಭೆಯಲ್ಲಿ 543 ಸ್ಥಾನಗಳಿದ್ದು, ನೇರ ಶೇ. 50ರಷ್ಟು ಹೆಚ್ಚಳವಾದರೆ ಒಟ್ಟು ಸ್ಥಾನಗಳ ಸಂಖ್ಯೆ ಸುಮಾರು 815ಕ್ಕೆ ಏರಿಕೆಯಾಗಲಿದೆ. ಗರಿಷ್ಠ ಮಿತಿಯನ್ನು 850ಕ್ಕೆ ನಿಗದಿಪಡಿಸಲಾಗಿದೆ. ಇನ್ನು ಕರ್ನಾಟಕದ ವಿಚಾರಕ್ಕೆ ಬಂದರೆ, ಪ್ರಸ್ತುತ ಇರುವ 28 ಲೋಕಸಭಾ ಸ್ಥಾನಗಳು 42ಕ್ಕೆ ಮತ್ತು 224 ವಿಧಾನಸಭಾ ಕ್ಷೇತ್ರಗಳು 336ಕ್ಕೆ ಹೆಚ್ಚಳವಾಗುವ ಸಾಧ್ಯತೆಯಿದೆ. ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಣ್ಣ ರಾಜ್ಯಗಳ ನಿಯಮಗಳಿಗೆ ಒಳಪಟ್ಟು ಅಂತಿಮ ಸಂಖ್ಯೆ ನಿರ್ಧಾರವಾಗಲಿದೆ.
ಸಂಸತ್ತಿನ ಉಭಯ ಸದನಗಳಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) ಈ ಸಂವಿಧಾನ ತಿದ್ದುಪಡಿ ಮಸೂದೆಗಳು ಮೂರನೇ ಎರಡರಷ್ಟು (2/3) ವಿಶೇಷ ಬಹುಮತದೊಂದಿಗೆ ಅಂಗೀಕಾರವಾಗಬೇಕು. ಬಳಿಕ ರಾಷ್ಟ್ರಪತಿಗಳ ಅಂಕಿತ ಪಡೆದು, ಕೇಂದ್ರ ಸರ್ಕಾರವು ಅಧಿಕೃತ ಗೆಜೆಟ್ನಲ್ಲಿ (Official Gazette) ಅಧಿಸೂಚನೆ ಹೊರಡಿಸುವ ದಿನಾಂಕದಿಂದ ಈ ಕಾಯ್ದೆ ಅಧಿಕೃತವಾಗಿ ಜಾರಿಗೆ ಬರಲಿದೆ. ಇದನ್ನೂ ಓದಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಶರದ್ ಪವಾರ್ ಬಣದ ಎನ್ಸಿಪಿಯಿಂದ ಬೆಂಬಲ ಘೋಷಣೆ
