ಫ್ರಾಗ್ರೆಂಟ್ ನೇಚರ್ ಫಿಲ್ಮ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಆನ್ ಸಜೀವ್ ಮತ್ತು ಪಿ.ಕೆ. ಸಜೀವ್ ನಿರ್ಮಿಸಿರುವ ಬಹುನಿರೀಕ್ಷಿತ ಮಲಯಾಳಂ ಆಕ್ಷನ್ ಥ್ರಿಲ್ಲರ್ ಚಿತ್ರ ‘ಹಾಫ್’ (HALF), ಗೋವಾದಲ್ಲಿ ನಡೆಯುತ್ತಿರುವ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ಯಶಸ್ವಿ ಏಷ್ಯನ್ ಪ್ರೀಮಿಯರ್ ಕಂಡಿದೆ. ಪಣಜಿಯ ಪಿವಿಆರ್ ಐನಾಕ್ಸ್ ಆಡಿಟೋರಿಯಂ 4ರಲ್ಲಿ ನಡೆದ ಈ ವಿಶೇಷ ಪ್ರದರ್ಶನವು ಕಿಕ್ಕಿರಿದ ಪ್ರೇಕ್ಷಕರ ಸಮ್ಮುಖದಲ್ಲಿ ಹೌಸ್ಫುಲ್ ಆಗಿದ್ದು, ಸಿನಿಮಾಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರತಂಡದ ರೆಡ್ ಕಾರ್ಪೆಟ್ ಸಂಭ್ರಮ ಹಾಗೂ ವಿಶೇಷ ಪ್ರದರ್ಶನವು ಈ ಬಾರಿಯ ಚಿತ್ರೋತ್ಸವದ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯಿತು.
ನವೆಂಬರ್ 24ರಂದು ಸಂಜೆ 5.30ಕ್ಕೆ ನಡೆದ ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಚಿತ್ರದ ಪ್ರಮುಖ ತಾರಾಗಣವಾದ ರಂಜಿತ್ ಸಜೀವ್, ಅಮಲಾ ಪೌಲ್, ಅಬ್ಬಾಸ್, ಐಶ್ವರ್ಯಾ ರಾಜ್, ಶ್ರೀಕಾಂತ್ ಮುರಳಿ ಹಾಗೂ ನಿರ್ಮಾಪಕಿ ಆನ್ ಸಜೀವ್ ಪಾಲ್ಗೊಂಡು ಸಂಭ್ರಮ ಹೆಚ್ಚಿಸಿದರು. ಬಳಿಕ ಸಂಜೆ 6 ಗಂಟೆಗೆ ಆರಂಭವಾದ 110 ನಿಮಿಷಗಳ ಈ ಚಿತ್ರದ ಪ್ರದರ್ಶನದಲ್ಲಿ, ಸಿನಿಮಾದ ಕುತೂಹಲಕಾರಿ ಕಥಾಹಂದರ, ವಿಶಿಷ್ಟ ನಿರೂಪಣಾ ಶೈಲಿ ಮತ್ತು ರೋಚಕ ಆಕ್ಷನ್ ದೃಶ್ಯಗಳು ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವಲ್ಲಿ ಯಶಸ್ವಿಯಾದವು. ಪ್ರದರ್ಶನದ ನಂತರ ಪ್ರೇಕ್ಷಕರಿಂದ ವ್ಯಕ್ತವಾದ ಭಾರಿ ಮೆಚ್ಚುಗೆ ಮತ್ತು ಆತ್ಮೀಯ ಸ್ವಾಗತವು ಚಿತ್ರದ ತಾರಾಗಣ ಹಾಗೂ ತಾಂತ್ರಿಕ ವರ್ಗಕ್ಕೆ ಅವಿಸ್ಮರಣೀಯ ಕ್ಷಣವನ್ನು ನೀಡಿತು.
ಚಿತ್ರ ಪ್ರದರ್ಶನಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರತಂಡ, ಸಿನಿಮಾದ ಕಥಾವಸ್ತು, ಪಾತ್ರಗಳ ಪೋಷಣೆ, ಚಿತ್ರೀಕರಣದ ಅನುಭವಗಳು ಹಾಗೂ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಚಿತ್ರ ಸಾಗಿಬಂದ ಹಾದಿಯ ಕುರಿತು ಮಾಹಿತಿ ಹಂಚಿಕೊಂಡಿತು. ಮಲಯಾಳಂ ಚಿತ್ರವೊಂದನ್ನು IFFI ನಂತಹ ಪ್ರತಿಷ್ಠಿತ ಅಂತಾರಾಷ್ಟ್ರೀಯ ವೇದಿಕೆಗೆ ಕೊಂಡೊಯ್ಯುವ ಮಹತ್ವದ ಬಗ್ಗೆ ತಂಡ ಅಭಿಪ್ರಾಯ ವ್ಯಕ್ತಪಡಿಸಿತು. ಜಾಗತಿಕ ಮಟ್ಟದ ಹಲವು ಚಲನಚಿತ್ರೋತ್ಸವಗಳಲ್ಲಿ ಚಿತ್ರಕ್ಕೆ ಸಿಗುತ್ತಿರುವ ಮನ್ನಣೆ ಹಾಗೂ ಏಷ್ಯನ್ ಪ್ರೀಮಿಯರ್ಗೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆ ತಂಡದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.
‘ಹಾಫ್’ ಚಿತ್ರವು ಈ ಹಿಂದೆಯೇ ಪ್ರತಿಷ್ಠಿತ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (TIFF), ಫೆಂಟಾಸ್ಟಿಕ್ ಫೆಸ್ಟ್, ಸಿಟ್ಜಸ್ ಚಲನಚಿತ್ರೋತ್ಸವ ಮತ್ತು ಬಿಯಾಂಡ್ ಫೆಸ್ಟ್ ಸೇರಿದಂತೆ ಹಲವು ಜಾಗತಿಕ ವೇದಿಕೆಗಳಲ್ಲಿ ಪ್ರದರ್ಶನಗೊಂಡು ಸೈ ಎನಿಸಿಕೊಂಡಿದೆ. ವಿಶೇಷವೆಂದರೆ, ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ‘ಮಿಡ್ನೈಟ್ ಮ್ಯಾಡ್ನೆಸ್’ ವಿಭಾಗದಲ್ಲಿ ಪ್ರದರ್ಶನಗೊಂಡ ಮೊದಲ ಮಲಯಾಳಂ ಚಿತ್ರ ಎಂಬ ಐತಿಹಾಸಿಕ ದಾಖಲೆಯನ್ನೂ ಇದು ಬರೆದಿದೆ. ಇದೀಗ ಗೋವಾ IFFI ನಲ್ಲಿ ನಡೆದ ಯಶಸ್ವಿ ಏಷ್ಯನ್ ಪ್ರೀಮಿಯರ್, ಚಿತ್ರದ ಅಂತಾರಾಷ್ಟ್ರೀಯ ಪಯಣದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿ ದಾಖಲಾಗಿದೆ.
ಸಂಜದ್ ನಿರ್ದೇಶನವಿರುವ ಈ ಚಿತ್ರಕ್ಕೆ ಸಂಜದ್ ಮತ್ತು ಪ್ರವೀಣ್ ವಿಶ್ವನಾಥ್ ಜಂಟಿಯಾಗಿ ಕಥೆ-ಚಿತ್ರಕಥೆ ಬರೆದಿದ್ದಾರೆ. ತಾಂತ್ರಿಕ ವಿಭಾಗದಲ್ಲಿ ಪಪ್ಪಿನು ಛಾಯಾಗ್ರಹಣ, ಮಹೇಶ್ ಭುವನೇಂದ್ ಸಂಕಲನ, ವಿಷ್ಣು ಗೋವಿಂದ್ ಧ್ವನಿ ವಿನ್ಯಾಸ, ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ ಹಾಗೂ ಮೋಹನ್ದಾಸ್ ಅವರ ಪ್ರೊಡಕ್ಷನ್ ಡಿಸೈನ್ ಚಿತ್ರಕ್ಕಿದೆ. ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿರುವ ‘ಹಾಫ್’ ಚಿತ್ರವು ಮುಂಬರುವ ಜನವರಿಯಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದ್ದು, IFFI ನಲ್ಲಿ ಸಿಕ್ಕಿರುವ ಭರ್ಜರಿ ಸ್ವಾಗತವು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

