– ಹೆಚ್ಚುವರಿ ಸಕ್ಕರೆ, ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ನಮೂದಿಸಲು ಸೂಚನೆ
ನವದೆಹಲಿ: ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳಲ್ಲಿರುವ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಪ್ರಮಾಣವನ್ನು ಗ್ರಾಹಕರು ಸುಲಭವಾಗಿ ಗುರುತಿಸುವಂತಾಗಬೇಕು. ಇದಕ್ಕಾಗಿ ಆಹಾರ ಪೊಟ್ಟಣಗಳ ಮುಂಭಾಗದಲ್ಲೇ ಸ್ಪಷ್ಟವಾದ ಎಚ್ಚರಿಕೆ ಲೇಬಲ್ಗಳನ್ನು ಅಳವಡಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಮಹತ್ವದ ಆದೇಶ ನೀಡಿದೆ.
ಕೇವಲ ಹೆಚ್ಚುವರಿ ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣವನ್ನಷ್ಟೇ ಪರಿಗಣಿಸದೆ, ಆಹಾರದಲ್ಲಿರುವ ಒಟ್ಟು ಸಕ್ಕರೆ ಹಾಗೂ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವನ್ನು ಆಧರಿಸಿ ಎಚ್ಚರಿಕೆ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಪ್ಯಾಕೇಜ್ ಆಹಾರಗಳ ಮುಂಭಾಗದ ಪೌಷ್ಟಿಕಾಂಶ ಎಚ್ಚರಿಕೆ ಲೇಬಲ್ಗಳ ವ್ಯವಸ್ಥೆಯನ್ನು ರೂಪಿಸುವಾಗ ಈ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದೆ.
ಪ್ರಸ್ತುತ ಆಹಾರ ಪೊಟ್ಟಣಗಳ ಹಿಂಭಾಗದಲ್ಲಿರುವ ಪೌಷ್ಟಿಕಾಂಶದ ಮಾಹಿತಿ ಎಲ್ಲ ಗ್ರಾಹಕರ ಗಮನಕ್ಕೆ ಸುಲಭವಾಗಿ ಬರುವುದಿಲ್ಲ. ಸಣ್ಣ ಅಕ್ಷರಗಳಲ್ಲಿ ನಮೂದಿಸಿರುವ ಮಾಹಿತಿಯನ್ನು ಓದಿ ಅರ್ಥಮಾಡಿಕೊಳ್ಳುವುದು ಕೂಡ ಕಷ್ಟವಾಗುತ್ತದೆ. ಹೀಗಾಗಿ ಆಹಾರ ಖರೀದಿಸುವಾಗಲೇ ಅದರಲ್ಲಿರುವ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಪ್ರಮಾಣದ ಬಗ್ಗೆ ಎಚ್ಚರಿಕೆ ಸಿಗುವಂತೆ ಪೊಟ್ಟಣದ ಮುಂಭಾಗದಲ್ಲಿ ಲೇಬಲ್ ಅಳವಡಿಸುವ ವ್ಯವಸ್ಥೆ ಜಾರಿಗೆ ತರಲು ನ್ಯಾಯಾಲಯ ಸೂಚಿಸಿದೆ.
ಎಫ್ಎಸ್ಎಸ್ಎಐ ರೂಪಿಸುವ ಎಚ್ಚರಿಕೆ ಲೇಬಲ್ನಲ್ಲಿ ಸಕ್ಕರೆ, ಕೊಬ್ಬು ಮತ್ತು ಉಪ್ಪಿಗೆ ಪ್ರತ್ಯೇಕ ಕೆಂಪು ಚಿಹ್ನೆಗಳನ್ನು ಬಳಸಬೇಕು. ಒಂದೇ ಚಿಹ್ನೆಯಲ್ಲಿ ಎಲ್ಲ ಅಂಶಗಳನ್ನು ಸೇರಿಸುವ ಬದಲು, ಪ್ರತಿಯೊಂದು ಪೌಷ್ಟಿಕಾಂಶಕ್ಕೂ ಪ್ರತ್ಯೇಕ ಎಚ್ಚರಿಕೆ ಇರಬೇಕು. ಪ್ರತಿ ಚಿಹ್ನೆಯಲ್ಲಿ ಸಂಬಂಧಪಟ್ಟ ಪೌಷ್ಟಿಕಾಂಶವನ್ನು ಸೂಚಿಸುವ ಪ್ರಮಾಣಿತ ಚಿತ್ರ ಹಾಗೂ ‘ಹೈ ಫ್ಯಾಟ್’, ‘ಹೈ ಶುಗರ್’, ‘ಹೈ ಸಾಲ್ಟ್’ ಎಂಬ ಪದಗಳನ್ನು ನಮೂದಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅಲ್ಲದೆ, ಆಹಾರ ಪೊಟ್ಟಣದ ಮುಂಭಾಗದ ಪ್ರಮುಖ ಪ್ರದರ್ಶನ ಭಾಗಕ್ಕೆ ಅನುಗುಣವಾಗಿ ಪ್ರತಿ ಎಚ್ಚರಿಕೆ ಸಂದೇಶದ ಗಾತ್ರವನ್ನು ನಿಗದಿಪಡಿಸಬೇಕು. ಅಂತರರಾಷ್ಟ್ರೀಯ ಪದ್ಧತಿಗಳನ್ನು ಪರಿಗಣಿಸಿ, ಪ್ರತಿ ಚಿಹ್ನೆಯು ಆ ಭಾಗದ ಕನಿಷ್ಠ ಶೇ.4ರಿಂದ ಶೇ.5ರಷ್ಟು ಜಾಗವನ್ನು ಆವರಿಸುವಂತೆ ನೋಡಿಕೊಳ್ಳಬೇಕು. ವಿಶೇಷ ಕಾರಣಗಳಿದ್ದಲ್ಲಿ ಮಾತ್ರ ಇದಕ್ಕೆ ವಿನಾಯಿತಿ ನೀಡಬಹುದು. ಚಿಹ್ನೆಯೊಳಗಿನ ಅಕ್ಷರಗಳು ಗ್ರಾಹಕರಿಗೆ ಸುಲಭವಾಗಿ ಕಾಣುವಷ್ಟು ದೊಡ್ಡದಾಗಿಯೂ ಸ್ಪಷ್ಟವಾಗಿಯೂ ಇರಬೇಕು ಎಂದು ಸೂಚಿಸಿದೆ.
ಸಕ್ಕರೆ, ಕೊಬ್ಬಿನ ಪ್ರಮಾಣಕ್ಕೆ ಹೊಸ ಮಾನದಂಡ
ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣಕ್ಕೆ ಸಂಬಂಧಿಸಿದ ಎಚ್ಚರಿಕೆ ಮಿತಿಗಳನ್ನು ಎಫ್ಎಸ್ಎಸ್ಎಐ ಮರುಪರಿಶೀಲಿಸಿ ಹೊಸದಾಗಿ ರೂಪಿಸಬೇಕು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ ರೂಪಿಸಿರುವ ೨೦೨೪ರ ಭಾರತೀಯ ಆಹಾರ ಮಾರ್ಗಸೂಚಿಗಳ ಕೋಷ್ಟಕ 15.1 ರಲ್ಲಿರುವ ಮಿತಿಗಳನ್ನು ಯಥಾವತ್ತಾಗಿ ಅಳವಡಿಸಿಕೊಳ್ಳಬಾರದು ಎಂದು ನ್ಯಾಯಾಲಯ ಹೇಳಿದೆ. ಏಕೆಂದರೆ ಆ ಮಿತಿಗಳು ಹೆಚ್ಚುವರಿ ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣವನ್ನು ಆಧರಿಸಿವೆ. ಆದರೆ ಹೊಸ ಎಚ್ಚರಿಕೆ ವ್ಯವಸ್ಥೆಯಲ್ಲಿ ಒಟ್ಟು ಸಕ್ಕರೆ ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವನ್ನು ಪರಿಗಣಿಸಬೇಕಿದೆ.ಇದನ್ನೂ ಓದಿ: ವಿಶೇಷ ಸಂಸತ್ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್: ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಪಾಸ್ ಆಗುತ್ತಾ?
ಎಚ್ಚರಿಕೆ ಮಿತಿಗಳನ್ನು ಅತಿಯಾಗಿ ಕಡಿಮೆ ನಿಗದಿಪಡಿಸಿದರೆ ಬಹುತೇಕ ಎಲ್ಲ ಪ್ಯಾಕೇಜ್ ಆಹಾರಗಳ ಮೇಲೂ ಎಚ್ಚರಿಕೆ ಚಿಹ್ನೆ ಹಾಕಬೇಕಾಗುತ್ತದೆ. ಇದರಿಂದ ಗ್ರಾಹಕರು ಎಚ್ಚರಿಕೆಗಳ ಬಗ್ಗೆ ನಿರ್ಲಕ್ಷ್ಯ ತೋರುವ ಸಾಧ್ಯತೆಯಿದೆ. ಮತ್ತೊಂದೆಡೆ, ಮಿತಿಗಳನ್ನು ಅತಿಯಾಗಿ ಹೆಚ್ಚಿಸಿದರೆ ಅಪಾಯಕಾರಿ ಪ್ರಮಾಣದ ಸಕ್ಕರೆ, ಕೊಬ್ಬು ಮತ್ತು ಉಪ್ಪು ಹೊಂದಿರುವ ಉತ್ಪನ್ನಗಳೂ ಎಚ್ಚರಿಕೆ ಇಲ್ಲದೆ ಮಾರಾಟವಾಗಬಹುದು. ಹೀಗಾಗಿ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಸಮತೋಲಿತ ಮಿತಿಗಳನ್ನು ನಿಗದಿಪಡಿಸಬೇಕು ಎಂದು ಪೀಠ ಹೇಳಿದೆ.
ಮಕ್ಕಳಲ್ಲಿ ಪೌಷ್ಟಿಕಾಂಶದ ಅರಿವು ಮೂಡಿಸಲು ಸೂಚನೆ
ಆಹಾರ ಉತ್ಪನ್ನಗಳ ಮೇಲಿನ ಎಚ್ಚರಿಕೆ ಲೇಬಲ್ಗಳಷ್ಟೇ ಅಲ್ಲದೆ, ಮಕ್ಕಳಲ್ಲಿ ಪೌಷ್ಟಿಕಾಂಶದ ಅರಿವು ಮೂಡಿಸುವ ಅಗತ್ಯವನ್ನೂ ನ್ಯಾಯಾಲಯ ಒತ್ತಿಹೇಳಿದೆ. ಶಾಲಾ ಶಿಕ್ಷಣದಲ್ಲಿ ಪೌಷ್ಟಿಕಾಂಶದ ಅರಿವು ಮೂಡಿಸುವ ಪಾಠಗಳು ಮತ್ತು ಪ್ರಾಯೋಗಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬೇಕು. ಸಂವಾದಾತ್ಮಕ ಕಾರ್ಯಾಗಾರಗಳು, ಪಠ್ಯೇತರ ಹಾಗೂ ಸಹಪಠ್ಯ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಆರೋಗ್ಯಕರ ಆಹಾರದ ಆಯ್ಕೆ ಕುರಿತು ತಿಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಹತ್ತು ವಾರಗಳ ಬಳಿಕ ಮತ್ತೆ ವಿಚಾರಣೆ
ʻ3ಎಸ್ ಅಂಡ್ ಅವರ್ ಹೆಲ್ತ್ ಸೊಸೈಟಿʼ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಈ ತೀರ್ಪು ಹೊರಬಿದ್ದಿದೆ. ಪ್ಯಾಕೇಜ್ ಆಹಾರಗಳಲ್ಲಿರುವ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಪ್ರಮಾಣವನ್ನು ಗ್ರಾಹಕರಿಗೆ ತಿಳಿಸುವ ಎಚ್ಚರಿಕೆ ಲೇಬಲ್ಗಳನ್ನು ಕಡ್ಡಾಯಗೊಳಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಈ ಹಿಂದೆ ಎಫ್ಎಸ್ಎಸ್ಎಐ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಪೌಷ್ಟಿಕಾಂಶಗಳ ಪ್ರಮಾಣ ನಿಗದಿತ ಮಿತಿಯನ್ನು ಮೀರಿದ ಉತ್ಪನ್ನಗಳಿಗೆ ಕೆಂಪು ಬಣ್ಣದ ಷಡ್ಭುಜಾಕೃತಿಯ ಎಚ್ಚರಿಕೆ ಚಿಹ್ನೆ ಅಳವಡಿಸುವ ಪ್ರಸ್ತಾಪವಿತ್ತು. ಆದರೆ, ಪ್ರಸ್ತಾಪದಲ್ಲಿನ ಹಲವು ಲೋಪಗಳನ್ನು ನ್ಯಾಯಾಲಯ ಪ್ರಶ್ನಿಸಿತ್ತು.ಇದನ್ನೂ ಓದಿ: 20 ವರ್ಷಗಳ ಹಿಂದೆ ಟಾಟಾ ನ್ಯಾನೋಗೆ ನೀಡಿದ್ದ ಸಿಂಗೂರ್ನ 997 ಎಕರೆ ಜಾಗ ಈಗ ಅಶೋಕ್ ಲೇಲ್ಯಾಂಡ್ ಪಾಲು!
