ಚಿಕ್ಕಮಗಳೂರು: ಮೂಡಿಗೆರೆ (Mudigere) ತಾಲೂಕಿನ ಕಾರ್ಗಲ್ ಗ್ರಾಮದಲ್ಲಿ ಕಾಡಾನೆ (Elephant) ಹಿಂಡುಗಳು ಕಾಫಿ ತೋಟಕ್ಕೆ ನುಗ್ಗಿ ಗಿಡಗಳನ್ನು ಸಂಪೂರ್ಣ ನೆಲಸಮ ಮಾಡಿವೆ. ಹಾನಿಗೊಳಗಾದ ತೋಟದ ಮಾಲೀಕ ಪ್ರಹ್ಲಾದ್ ಅವರು ತೋಟದಲ್ಲೇ ಕುಳಿತು ಕಣ್ಣೀರು ಹಾಕುತ್ತಿದ್ದಾರೆ.
ಮಕ್ಕಳಂತೆ ಬೆಳೆಸಿದ ತೋಟ ಹೋಯ್ತು, ನನ್ನನ್ನೂ ಆನೆಗಳು ತುಳಿದು ಸಾಯಿಸಲಿ. ನಾನು, ನನ್ನ ಹೆಂಡತಿ ಎಲ್ಲಿಗೂ ಬರುವುದಿಲ್ಲ, ಇಲ್ಲೇ ಇರುತ್ತೇವೆ. ನನಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಮೂರು ಎಕರೆ ಕಾಫಿ ತೋಟವನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೆವು. ಈಗ ಬೇಲೂರಿನಿಂದ ಬಂದ ಆನೆಗಳು ತೋಟದ ಮೇಲೆ ದಾಳಿ ಮಾಡಿ, ಹಾನಿ ಮಾಡಿವೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ಸ್ಥಳೀಯರು ಹಾಗೂ ಅರಣ್ಯ ಅಧಿಕಾರಿಗಳ ಭೇಟಿ ನೀಡಿ, ರೈತನ (Farmer) ಮನವೊಲಿಕೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಬೇಲೂರಿನಿಂದ ಮೂಡಿಗೆರೆಯತ್ತ ಕಾಡಾನೆಗಳ ಸಂಚಾರ; ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಎಚ್ಚರಿಕೆ
ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಬಳಿಯ ನಾಗಲಾಪುರದ ಸುಪ್ರೀತ್ ಎಂಬವರ 3 ಎಕರೆ ಗದ್ದೆ, ತೋಟದ ಮೇಲೂ ಕಾಡಾನೆಗಳು ದಾಳಿ ಮಾಡಿ ಅಪಾರ ಹಾನಿ ಮಾಡಿವೆ. ಈ ಗದ್ದೆ ಸ್ಥಿತಿ ನೋಡಿದರೆ ಹೊಟ್ಟೆಗೆ ಬೆಂಕಿ ಬಿದ್ದಂತಾಗುತ್ತದೆ ಎಂದು ರೈತರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಈಗಾಗಲೇ ಕಾಡಾನೆಗಳು ಮೂಡಿಗೆರೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿ ಮಾಡಿವೆ. 39 ಕಾಡಾನೆಗಳು 4 ತಂಡಗಳಾಗಿ ಬೇರ್ಪಟ್ಟಿವೆ. ಇದರಿಂದ 4 ಗುಂಪುಗಳು ಸಂಚರಿಸುವ ಮಾರ್ಗದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ನಮ್ಮ ತಾಳ್ಮೆ ಕೆಡುವ ಮುನ್ನ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾಡಾನೆ ಜಟಾಪಟಿ | ನಾವು ರಾಜೀನಾಮೆ ಬಗ್ಗೆ ಚರ್ಚೆ ಮಾಡಿಲ್ಲ – ಯೂಟರ್ನ್ ಹೊಡೆದ ಶಾಸಕರು

