ಮಡಿಕೇರಿ: ನಾನು ಎಲ್ಲಿಯೂ ನನ್ನನ್ನು ರಾಜ (King) ಅಥವಾ ಮಹಾರಾಜ ಎಂದು ಹೇಳಿಕೊಂಡಿಲ್ಲ. ಜನರಿಂದ ಆಯ್ಕೆಯಾಗಿ ಅವರ ಪ್ರತಿನಿಧಿಯಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದೇ ನನಗೆ ಹೆಮ್ಮೆಯ ವಿಚಾರ. ಕನ್ನಡಿಗನಾಗಿ ಜನರ ಪರವಾಗಿ ಕೆಲಸ ಮಾಡುವುದೇ ನನ್ನ ಆದ್ಯತೆ ಎಂದು ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್ (Yaduveer Wadiyar) ತಿರುಗೇಟು ನೀಡಿದ್ದಾರೆ.
ಮಹಾರಾಜ ಎಂಬ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ (Congress) ತಮ್ಮ ವಿರುದ್ಧ ಟೀಕೆ ಮಾಡುತ್ತಿರುವ ಕುರಿತು ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ವೈಯಕ್ತಿಕ ಟೀಕೆಗಳಿಗೆ ತಿರುಗೇಟು ನೀಡುವುದರ ಜೊತೆಗೆ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದರು. ಉಚಿತ ಯೋಜನೆಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಯುಟ್ಯೂಬರ್ ಅಮುಕು ಡುಮುಕು ಮಂಜು ವಿರುದ್ಧ ಮತ್ತೊಂದು FIR
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ನೀಡಿದರೆ, ಮತ್ತೊಂದೆಡೆ ಪುರುಷರ ಬಸ್ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ಯುವನಿಧಿ ಯೋಜನೆಯ ಸ್ಥಿತಿ ಏನಾಗಿದೆ? ಹೊಸ ಯೋಜನೆಗಳ ಘೋಷಣೆಗಳೂ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಉಚಿತ ಯೋಜನೆಗಳ ಹೆಸರಿನಲ್ಲಿ ಜನರಿಗೆ ನೀಡಿದ ಭರವಸೆಗಳಿಗೆ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದರು. ಇನ್ನು ರಾಹುಲ್ ಗಾಂಧಿ ಅವರಿಗೆ ಬಿರುದು ನೀಡುವ ವಿಚಾರದಲ್ಲಿ ತೊಡಗಿರುವ ಕಾಂಗ್ರೆಸ್ ನಾಯಕರು ರಾಜ್ಯದ ಜನರ ನೈಜ ಸಮಸ್ಯೆಗಳನ್ನು ಮರೆತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಮಾತಾಡೋ ತಾಕತ್ ಇಲ್ಲ ಅಂದ್ರೆ ರಾಜೀನಾಮೆ ಕೊಡಿ – ನಯನಾ ಮೋಟಮ್ಮ ವಿರುದ್ಧ ಜೆಡಿಎಸ್ ಭೋಜೇಗೌಡ ಕಿಡಿ
ರಾಜ್ಯದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳಿಗೆ ಆದ್ಯತೆ ನೀಡುವ ಬದಲು ರಾಜಕೀಯ ನಾಯಕತ್ವದ ವಿಚಾರದಲ್ಲೇ ಕಾಂಗ್ರೆಸ್ ಮುಳುಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ, ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದಕ್ಕಿಂತ 16ನೇ ಹಣಕಾಸು ಆಯೋಗದ ಮುಂದೆ ಕರ್ನಾಟಕದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿ ಹೆಚ್ಚಿನ ಅನುದಾನ ಪಡೆಯಲು ರಾಜ್ಯ ಸರ್ಕಾರ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಬೈಕ್ಗೆ ಕಾರು ಡಿಕ್ಕಿ – ಬಾಲಕ ಸೇರಿ ಮೂವರು ಸ್ಥಳದಲ್ಲೇ ದುರ್ಮರಣ
