– ರಾಜೀನಾಮೆ ಕೊಟ್ರೆ ಲೋಕಕಲ್ಯಾಣ ಆಗುತ್ತಾ?
ಬೆಂಗಳೂರು: ಸರ್ಕಾರ ನಿಮ್ಮದೇ ಇದೆ, ಸಮಸ್ಯೆಗಳ ಬಗ್ಗೆ ಮಾತನಾಡಿ. ನಿಮಗೆ ಮಾತಾಡೋಕೆ ತಾಕತ್ ಇಲ್ಲ ಅಂತ ರಾಜೀನಾಮೆ ಕೊಡಿ. ನೀವು ರಾಜೀನಾಮೆ ಕೊಟ್ಟರೆ ಲೋಕಕಲ್ಯಾಣ ಆಗುತ್ತಾ ಎಂದು ಜೆಡಿಎಸ್ ಎಂಎಲ್ಸಿ ಭೋಜೇಗೌಡ (Bhojegowda) ಅವರು ಶಾಸಕಿ ನಯನಾ ಮೋಟಮ್ಮ (Nayana Motamma) ಅವರನ್ನ ಪ್ರಶ್ನೆ ಮಾಡಿದ್ದಾರೆ.
ಚಿಕ್ಕಮಗಳೂರಿನ (Chikkamagaluru) ಭದ್ರಾ ಅರಣ್ಯಕ್ಕೆ ಆನೆ ಸ್ಥಳಾಂತರ ವಿಚಾರಕ್ಕೆ ಶಾಸಕರ ರಾಜೀನಾಮೆ ಬೆದರಿಕೆ ವಿಚಾರ ಕುರಿತು ವಿಧಾನಸೌಧದಲ್ಲಿ ಅವರು ಮಾತನಾಡಿದರು.
ಪೂರ್ಣ ಪ್ರಮಾಣದಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕಬೇಕು
ಮಾನವ – ಪ್ರಾಣ ಸಂಘರ್ಷ ನಿನ್ನೆ ಮೊನ್ನೆಯದಲ್ಲ. ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮಳೆಗಾಲದಲ್ಲಿ ಯಾಕೆ ಈ ಸಂಘರ್ಷ ಇಲ್ಲ? ಋತುವಿನಲ್ಲಿ ಆಹಾರ ಕಡಿಮೆ ಆದಾಗ ಆನೆಗಳು ಊರಿಗೆ ನುಗ್ಗುತ್ತವೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ರೈಲ್ವೆ ಕಂಬಿಗಳನ್ನ ಹಾಕ್ತಾ ಇದ್ದಾರೆ. ಇದನ್ನ ಊರುಗಳಿಗೆ ಬಾರದಂತೆ ಹಾಕೋದು ಹೇಗೆ ಅಂತ ಅಧಿಕಾರಿಗಳು ಹೇಳಬೇಕು. ಒಂದು ಅಭಯಾರಣ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕಬೇಕು ಎಂದು ಒತ್ತಾಯಿಸಿದರು.
ರಾಜೀನಾಮೆ ನಾಟಕ ತೋರಿಸಬೇಡಿ
ಆನೆಗಳಿಗೆ ಬುದ್ಧಿಶಕ್ತಿ ಇವೆ. ಶಾಸಕರು ರಾಜೀನಾಮೆ ಕೊಡ್ತೀವಿ ಅಂತಾರೆ, ರಾಜೀನಾಮೆ ಕೊಡೋಕಾ ಗೆಲ್ಲಿಸಿರೋದು? ಸಮಸ್ಯೆಯನ್ನ ಸಿಎಂ, ಅರಣ್ಯ ಇಲಾಖೆ ಸಚಿವರ ಗಮನಕ್ಕೆ ತನ್ನಿ. ನಿಮ್ಮ ರಾಜೀನಾಮೆಯಿಂದ ಏನು ಆಗಲ್ಲ. ರಾಜೀನಾಮೆ ಕೊಡ್ತೀವಿ ಅಂತ ಜನಕ್ಕೆ ಹೆದರಿಸ್ತೀರಾ? ಮುಟ್ಟಾಳರಾಗಿದ್ರೆ ಮಾತ್ರ ರಾಜೀನಾಮೆ ಕೊಡ್ತೀವಿ ಅಂತಾರೆ. ನಿಮ್ಮದೆ ಸರ್ಕಾರ ಇದೆ. ಬಂದು ಮಾತಾಡಿ, ಅದನ್ನ ಬಿಟ್ಟು ರಾಜೀನಾಮೆ ಕೊಡ್ತೀವಿ ಅಂತ ಸ್ಪೀಕರ್ ಕಚೇರಿಗೆ ಬಂದು ನಾಟಕ ತೋರಿಸಬೇಡಿ. ಜನರ ಸಮಸ್ಯೆಗೆ ನಿಜವಾಗಿ ಸ್ಪಂದಿಸಿ. ಆನೆಗಳಿಗೆ ಆಹಾರ ಅರಣ್ಯದಲ್ಲಿ ಸಿಗೋ ವ್ಯವಸ್ಥೆ ಮಾಡಿ. ಸರ್ಕಾರ ಆನೆಗಳು ನೆಮ್ಮದಿ ಜೀವನ ಮಾಡೋಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನಿಮಗೆ ಮಾತಾಡೋಕೆ ತಾಕತ್ ಇಲ್ಲ ಅಂತ ರಾಜೀನಾಮೆ ಕೊಡಿ. ನೀವು ರಾಜೀನಾಮೆ ಕೊಟ್ಟರೆ ಲೋಕಕಲ್ಯಾಣ ಆಗುತ್ತದೆ ಕೊಟ್ಟು ಬಿಡಿ ಎಂದು ವ್ಯಂಗ್ಯವಾಡಿದ ಅವರು, ಜನರನ್ನ ಹೆದರಿಸಬೇಡಿ. ಗಂಧ ಗಾಳಿ ಇಲ್ಲದೇ ಇರೋರು ಅರಣ್ಯ ಸಚಿವರು ಆಗ್ತಾರೆ. ಮಲೆನಾಡಿನ ಜೀವನ ಗೊತ್ತಿರೋರನ್ನ ಅರಣ್ಯ ಸಚಿವ ಮಾಡಿ. ಮಾನವ ಸಂಘರ್ಷ ತಪ್ಪಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ರು.

