ರಾಮನಗರ: “ಬಾಲಕೃಷ್ಣ ಅಲ್ಲ, ಬರೀ ಬಾಲ” ಎಂಬ ಮಾಜಿ ಸಚಿವ ಕೆ.ಎನ್. ರಾಜಣ್ಣ(Rajanna) ಅವರ ಹೇಳಿಕೆಗೆ ಶಾಸಕ ಎಚ್.ಸಿ. ಬಾಲಕೃಷ್ಣ (HC Balakrishna) ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಬಾಲವನ್ನು ಅವರ ಕೈಗೆ ಕೊಟ್ಟುಬಿಡಿ, ಹಿಡ್ಕೊಂಡು ಓಡಾಡ್ಲಿ. ರಾಜಣ್ಣ ಅವರ ಮನೆ ದೇವರ ಬಳಿ ನಾನೇ ಬರುತ್ತೇನೆ, ನಾವು ಕುಮಾರಸ್ವಾಮಿ ಬಳಿ ರಾಜಕೀಯ ಮಾತನಾಡಿಲ್ಲ ಎಂದು ಅವರು ಪ್ರಮಾಣ ಮಾಡಲಿ. ಹಾಗೆ ಪ್ರಮಾಣ ಮಾಡಿದರೆ ನಾನು ಅವರಿಗೆ ಶರಣಾಗುತ್ತೇನೆ” ಎಂದು ಬಾಲಕೃಷ್ಣ ಬಹಿರಂಗ ಸವಾಲು ಹಾಕಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಸಿ. ಬಾಲಕೃಷ್ಣ, ರಾಜಣ್ಣ ಹಾಗೂ ಅವರ ಪುತ್ರ ರಾಜೇಂದ್ರ(Rajendra) ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. “ಬಹಳ ದಿವಸ ಡೂಪ್ ರಾಜಕಾರಣ ನಡೆಯುವುದಿಲ್ಲ, ಪ್ರಾಮಾಣಿಕವಾದ ರಾಜಕಾರಣ ಮಾತ್ರ ಉಳಿಯುತ್ತದೆ. ಕುಮಾರಸ್ವಾಮಿ ಬಳಿ ರಾಜಕೀಯ ಮಾತನಾಡಿದ್ದು ಸತ್ಯ ಎಂದು ಸ್ವತಃ ಅವರ ಮಗನೇ ಹೇಳಿದ್ದಾರೆ. ಕುಮಾರಸ್ವಾಮಿ ಬಳಿ ಏನು ಕಡ್ಲೆಪುರಿ ತಿನ್ನಕ್ಕೆ ಹೋಗಿದ್ರಾ?” ಎಂದು ಪ್ರಶ್ನಿಸಿದರು.
ಪಕ್ಷ ನಿಷ್ಠೆಯ ವಿಚಾರ ಪ್ರಸ್ತಾಪಿಸಿದ ಬಾಲಕೃಷ್ಣ, “ನಾವು ಯಾರು ತಪ್ಪು ಮಾಡಿದರೂ ತಪ್ಪು ಅಂತ ಹೇಳ್ತೀವಿ. ನಾವೇ ತಪ್ಪು ಮಾಡಿದರೂ ಹೇಳಲಿ, ಇಲ್ಲಿ ಪಕ್ಷ ನಿಷ್ಠೆ ಮುಖ್ಯ. ಅಣ್ಣನಿಗೆ ಮಂತ್ರಿಯಾಗಿ ಒಳ್ಳೆ ಕಾಸು ಆಯ್ತು, ಇನ್ನೇನು ಮಾಡ್ತಾರೆ?” ಎಂದು ಗಂಭೀರ ಆರೋಪ ಮಾಡಿದರು.
ಇದೇ ವೇಳೆ, ಬರ ಪರಿಹಾರದ ಹಣಕ್ಕೆ ಡಿ.ಕೆ. ಶಿವಕುಮಾರ್ ಲಂಡನ್ ಕೋರ್ಟ್ಗೆ ಅರ್ಜಿ ಹಾಕೋಕೆ ಹೋಗಿದ್ದಾರಾ? ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಟೀಕೆಗೂ ಬಾಲಕೃಷ್ಣ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಬಾಲಕೃಷ್ಣ ಅಲ್ಲ, ಬರೀ ಬಾಲ: ಏಕವಚನದಲ್ಲೇ ರಾಜಣ್ಣ ವಾಗ್ದಾಳಿ
