ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಸಚಿವ ಎಚ್.ಸಿ. ಬಾಲಕೃಷ್ಣ(HC Balakrishna) ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ (KN Rajanna) ನಡುವಿನ ವಾಕ್ಸಮರ ತಾರಕಕ್ಕೇರಿದೆ. ಸಚಿವ ಬಾಲಕೃಷ್ಣ ಅವರ ಹೇಳಿಕೆಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೆ.ಎನ್. ರಾಜಣ್ಣ, ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, “ಅವನು ಬಾಲಕೃಷ್ಣ ಅಲ್ಲ, ಬರೀ ಬಾಲ. ಅವನಿಗೆಲ್ಲಾ ನಾನು ಉತ್ತರ ಕೊಡೋಕೆ ಹೋಗಲ್ಲ” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಪುತ್ರ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ(Rajendra) ಅವರು ಜೆಡಿಎಸ್ ಸೇರುತ್ತಾರೆ ಎಂಬ ವದಂತಿಗಳನ್ನು ಕೆ.ಎನ್. ರಾಜಣ್ಣ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. “ಅದೆಲ್ಲಾ ಸುಳ್ಳು. ಅವನು ಕಾಂಗ್ರೆಸ್ ಪಕ್ಷದ ಎಂಎಲ್ಸಿ ರೀ, ಅವನು ಯಾಕೆ ಜೆಡಿಎಸ್ಗೆ ಹೋಗ್ತಾನೆ?” ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವ ಅಮಿತ್ ಶಾ (Amit Shah) ಅವರನ್ನು ರಾಜೇಂದ್ರ ಭೇಟಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಕಾರಣವನ್ನು ನೀಡಿದ ಅವರು, ರಾಜೇಂದ್ರ ರಾಷ್ಟ್ರ ಮಟ್ಟದ ಸಹಕಾರಿ ಸಂಸ್ಥೆಯಾದ ‘ಕ್ರಿಬ್ಕೋ’ (KRIBHCO – Krishak Bharati Cooperative Limited) ನಿರ್ದೇಶಕನಾಗಿದ್ದಾನೆ. ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಯೂರಿಯಾ ಉತ್ಪಾದಕ ಸಹಕಾರಿ ಸಂಸ್ಥೆ ಅದಾಗಿದ್ದು, ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ರೂಪಾಯಿ ಸಬ್ಸಿಡಿ ಬರಬೇಕಾಗುತ್ತದೆ. ಹೀಗಾಗಿ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು ಸಭೆ ಕರೆಯುತ್ತಿರುತ್ತಾರೆ. ಅಲ್ಲದೆ, ಅಮಿತ್ ಶಾ ಅವರು ಕೇಂದ್ರ ಸಹಕಾರ ಸಚಿವರಾಗಿರುವುದರಿಂದ ಆಡಳಿತಾತ್ಮಕ ಕಾರಣಗಳಿಗಾಗಿ ಅವರನ್ನು ಪದೇ ಪದೇ ಭೇಟಿ ಮಾಡಬೇಕಾಗುತ್ತದೆ. ಕರ್ನಾಟಕದಿಂದ ರಾಜೇಂದ್ರ ಒಬ್ಬರೇ ಅಲ್ಲಿರುವುದರಿಂದ ಕೇಂದ್ರದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ರಾಜಣ್ಣ ವಿವರಿಸಿದರು.
ಇದೇ ವೇಳೆ, ಸ್ಟಿಂಗ್ ಆಪರೇಷನ್ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಸರಗೊಂಡಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ, ಸ್ಟಿಂಗ್ ಆಪರೇಷನ್ ವಿಚಾರವನ್ನು ನಾನು ಮೊದಲೇ ವಿಧಾನಸಭೆಯಲ್ಲಿ ಹೇಳಿದ್ದೇನೆ. ಇನ್ನೂ 25-30 ಸ್ಟಿಂಗ್ಗಳು ಇರಬೇಕು. ಸಂದರ್ಭಕ್ಕೆ ತಕ್ಕಂತೆ ಒಬ್ಬೊಬ್ಬರೇ ಅವುಗಳನ್ನು ಹೊರಗೆ ಬಿಡುತ್ತಿರುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
