– ಯುವ ಪ್ರಧಾನಿ ಬಾಲೇಂದ್ರ ಶಾ ಅವರ ದೂರದೃಷ್ಟಿಗೆ ಮೋದಿ ಮೆಚ್ಚುಗೆ
– ಉಭಯ ದೇಶಗಳ ನಡುವೆ 8 ಪ್ರಮುಖ ಒಪ್ಪಂದಗಳಿಗೆ ಸಹಿ
ನವದೆಹಲಿ: ಭಾರತಕ್ಕೆ(India) ಎರಡು ದಿನಗಳ ಅಧಿಕೃತ ಭೇಟಿ ನೀಡಿರುವ ನೇಪಾಳದ(Nepal) ಪ್ರಧಾನಿ ಬಾಲೆನ್ ಶಾ(Balen Shah) ಅವರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಹಿಮಾಲಯ ರಾಷ್ಟ್ರದ ಅಭಿವೃದ್ಧಿಗಾಗಿ 24 ಸಾವಿರ ಕೋಟಿ ನೇಪಾಳಿ ರೂಪಾಯಿ (ಸುಮಾರು 15 ಸಾವಿರ ಕೋಟಿ ಭಾರತೀಯ ರೂಪಾಯಿ) ಮೊತ್ತದ ಬೃಹತ್ ಅಭಿವೃದ್ಧಿ ಪ್ಯಾಕೇಜ್ ಘೋಷಿಸಿದ್ದಾರೆ.
ಮಾತುಕತೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, 35ವರ್ಷದ ಯುವ ಪ್ರಧಾನಿ ಬಾಲೇಂದ್ರ ಶಾ ಅವರ ಅಭಿವೃದ್ಧಿ ದೂರದೃಷ್ಟಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. “ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ದ್ವಿಪಕ್ಷೀಯ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಬಾಲೇಂದ್ರ ಶಾ ಅವರನ್ನು ಸ್ವಾಗತಿಸಲು ನನಗೆ ಅತ್ಯಂತ ಸಂತೋಷವಾಗುತ್ತಿದೆ. ನೇಪಾಳದ ಜನರು ಅವರಿಗೆ ನೀಡಿರುವ ಐತಿಹಾಸಿಕ ಜನಾದೇಶವು ಆ ದೇಶದ ಹೊಸ ಪೀಳಿಗೆಯ ಆಶಯ ಮತ್ತು ಭರವಸೆಗಳನ್ನು ಪ್ರತಿಬಿಂಬಿಸುತ್ತದೆ. ವಿಶ್ವದ ಅತ್ಯಂತ ಕಿರಿಯ ಪ್ರಧಾನಿಯಾಗಿ ಅವರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲೇ ಅವರ ದೂರದೃಷ್ಟಿಯ ಸ್ಪಷ್ಟ ಚಿತ್ರಣ ನಮಗೆ ಸಿಕ್ಕಿತ್ತು” ಎಂದು ಮೋದಿ ಹೇಳಿದರು.
ನೇಪಾಳದ ಬೆನ್ನಿಗೆ ಭಾರತ:
ಭಾರತ ಮತ್ತು ನೇಪಾಳ ಕೇವಲ ನೆರೆಯ ರಾಷ್ಟ್ರಗಳಲ್ಲ, ಬದಲಾಗಿ ಆಳವಾದ ನಂಬಿಕೆ ಮತ್ತು ಸ್ನೇಹದ ಬಂಧದಿಂದ ಬೆಸೆದುಕೊಂಡಿವೆ ಎಂದು ಮೋದಿ ಪ್ರತಿಪಾದಿಸಿದರು. “ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡವರಿಗೆ ನಾವು ತೀವ್ರ ಸಂತಾಪ ಸೂಚಿಸುತ್ತೇವೆ. ನೇಪಾಳದ ಪುನರ್ನಿರ್ಮಾಣ ಮತ್ತು ಅಭಿವೃದ್ಧಿಗೆ ಬೆಂಬಲ ನೀಡಲು 24 ಸಾವಿರ ಕೋಟಿ ನೇಪಾಳಿ ರೂಪಾಯಿಗಳ ಅಭಿವೃದ್ಧಿ ಸಹಕಾರ ಪ್ಯಾಕೇಜ್ ಘೋಷಿಸುತ್ತಿದ್ದೇವೆ. ನೆರೆಹೊರೆಯವರಿಗೆ ಮೊದಲ ಆದ್ಯತೆ (Neighbourhood First) ನೀತಿಯಡಿ, ಈ ವರ್ಷ ತೈಲ ಪೂರೈಕೆಗೆ ಸಂಬಂಧಿಸಿದ ಗಂಭೀರ ಸವಾಲುಗಳ ನಡುವೆಯೂ ನಾವು ನೇಪಾಳಕ್ಕೆ ಇಂಧನ, ರಸಗೊಬ್ಬರ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಯನ್ನು ನಿರಂತರವಾಗಿ ಕಾಯ್ದುಕೊಂಡಿದ್ದೇವೆ” ಎಂದರು. ಇದನ್ನೂ ಓದಿ: ಯೂಟ್ಯೂಬರ್ ಧ್ರುವ್ ರಾಠಿ ವಿರುದ್ಧ ಜಾಮೀನು ರಹಿತ ವಾರಂಟ್
ಸಂಬಂಧ ಹಿಮಾಲಯದಷ್ಟು ದೃಢ
ತಮ್ಮ ಭಾಷಣದಲ್ಲಿ ಭಾರತದ ಆತ್ಮೀಯ ಆತಿಥ್ಯವನ್ನು ಶ್ಲಾಘಿಸಿದ ನೇಪಾಳ ಪ್ರಧಾನಿ ಬಾಲೇಂದ್ರ ಶಾ, ನೇಪಾಳಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದರು. “ನೇಪಾಳ ಮತ್ತು ಭಾರತದ ನಡುವಿನ ಸಂಬಂಧವು ಹಿಮಾಲಯದಷ್ಟು ದೃಢವಾಗಿದೆ ಮತ್ತು ಸಾಗರದಷ್ಟು ವಿಶಾಲವಾಗಿದೆ. ನಮ್ಮ ಆತ್ಮೀಯತೆಯನ್ನು ಕೇವಲ ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ನೈಸರ್ಗಿಕ ವಿಕೋಪಗಳು ಮತ್ತು ಸಂಕಷ್ಟದ ಸಮಯದಲ್ಲಿ ನಂಬಿಕಸ್ತ ನೆರೆಯ ರಾಷ್ಟ್ರವಾಗಿ ಭಾರತ ಯಾವಾಗಲೂ ಮೊದಲ ಪ್ರತಿಸ್ಪಂದಕನಾಗಿ ನಿಂತಿದೆ. ಇದಕ್ಕಾಗಿ ಭಾರತ ಸರ್ಕಾರ ಮತ್ತು ಜನತೆಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ” ಎಂದು ಶಾ ತಿಳಿಸಿದರು.
8 ಒಪ್ಪಂದಗಳಿಗೆ ಸಹಿ
ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತ ಮತ್ತು ನೇಪಾಳ ನಡುವೆ ಒಟ್ಟು ಎಂಟು ತಿಳುವಳಿಕೆ ಪತ್ರಗಳಿಗೆ (MoU) ಸಹಿ ಹಾಕಲಾಯಿತು. ನಾಗರಿಕ ಸೇವಾ ಸಾಮರ್ಥ್ಯ ತರಬೇತಿ, ಬಾಹ್ಯಾಕಾಶ ಸಂಶೋಧನೆ, ಆರೋಗ್ಯ ಮತ್ತು ಔಷಧ, ನಗರಾಭಿವೃದ್ಧಿ ಹಾಗೂ ಆಯುರ್ವೇದ ಮತ್ತು ಸಾಂಪ್ರದಾಯಿಕ ಔಷಧ ಕ್ಷೇತ್ರಗಳಿಗೆ ಸಂಬಂಧಿಸಿದ ಒಪ್ಪಂದಗಳು ಇದರಲ್ಲಿ ಸೇರಿವೆ. ಇದೇ ವೇಳೆ ಉಭಯ ನಾಯಕರು ಪ್ರಮುಖ ಸಂಪರ್ಕ ಮತ್ತು ಇಂಧನ ಯೋಜನೆಗಳನ್ನು ಜಂಟಿಯಾಗಿ ಉದ್ಘಾಟಿಸಿದರು ಹಾಗೂ ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

