ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಲ್ಲಿನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿದೆ. ಮುರಿಯದ 6ನೇ ವಿಕೆಟ್ಗೆ ಡೇರಿಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಅವರ ದಿಟ್ಟ ಹೋರಾಟ, ನ್ಯೂಜಿಲೆಂಡ್ ತಂಡವನ್ನ ಸೋಲಿನ ದವಡೆಯಿಂದ ಪಾರು ಮಾಡಿದೆ.
5ನೇ ದಿನದ ಅಂತ್ಯಕ್ಕೆ ಕಿವೀಸ್ 120 ಓವರ್ಗಳಲ್ಲಿ 239 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಪಂದ್ಯ ಡ್ರಾಗೊಳಿಸಿತು. ಆದ್ರೆ ಮೊದಲ ಇನ್ನಿಂಗ್ಸ್ನಲ್ಲೇ ಬೃಹತ್ ಮುನ್ನಡೆ ಕಾಯ್ದುಕೊಂಡಿದ್ದ ಭಾರತಕ್ಕೆ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುವ ಅವಕಾಶ ಕೈತಪ್ಪಿತು.
ಕೊನೆಯ ದಿನ 233 ರನ್ ಬೃಹತ್ ಹಿನ್ನಡೆಯೊಂದಿಗೆ ಕ್ರೀಸ್ ಆರಂಭಿಸಿದ ಕಿವೀಸ್ ತಂಡ 77 ಓವರ್ಗಳಲ್ಲಿ 176 ರನ್ಗಳಿಗೆ 5 ವಿಕೆಟ್ ಕಳೆದುಕೊಂಡರೂ ಪಂದ್ಯವನ್ನೂ ಡ್ರಾನತ್ತ ತಿರುಗಿಸುವಲ್ಲಿ ಯಶಸ್ವಿಯಾಗಿದೆ. ಕೊನೆಯದಿನದಾಟದಲ್ಲಿ ಕ್ರೀಸ್ ಆರಂಭಿಸಿದ ಡಿವೋನ್ ಕಾನ್ವೆ – ರಚಿನ್ ರವೀಂದ್ರ ಜೋಡಿ ಬಹುಬೇಗನೆ ವಿಕೆಟ್ ಒಪ್ಪಿಸಿತು.
ಕಾನ್ವೆ 65 ರನ್, ರಚಿನ್ 37 ರನ್ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಈ ಬೆನ್ನಲ್ಲೇ ಟಾಮ್ ಬ್ಲಂಡೆಲ್ (15 ರನ್) ಕೀಪರ್ ಕ್ಯಾಚ್ಗೆ ಔಟಾಗಿ ಹೊರನಡೆದರು. ಬಳಿಕ ಮುರಿಯದ 6ನೇ ವಿಕೆಟ್ಗೆ ಜೊತೆಗೂಡಿದ ಡೇರಿಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ರನ್ ಹರಿಸುವತ್ತ ಹೆಚ್ಚು ಗಮನ ಕೊಡದೇ ದಿನದ ಅಂತ್ಯದ ವರೆಗೆ ಕ್ರೀಸ್ನಲ್ಲಿ ಭದ್ರವಾಗಿ ನೆಲೆಯೂರಿದರು.
ಟೀಂ ಇಂಡಿಯಾ ವೇಗಿಗಳನ್ನು ದಿಟ್ಟವಾಗಿ ಎದುರಿದ ಈ ಜೋಡಿ ನಿಧಾನಗತಿಯ ಬ್ಯಾಟಿಂಗ್ ನಡೆಸುತ್ತಾ, ಓವರ್ಗಳನ್ನು ಪೂರ್ಣಗೊಳಿಸಿತು. ದಿನದ ಅಂತ್ಯಕ್ಕೆ ಮಿಚೆಲ್ 186 ಎಸೆತಗಳಲ್ಲಿ 49 ರನ್ ಗಳಿಸಿದ್ರೆ, 126 ಎಸೆತಗಳನ್ನು ಎದುರಿಸಿದ ಫಿಲಿಪ್ಸ್ 26 ರನ್ಗಳನ್ನಷ್ಟೇ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಕಿವೀಸ್ ತನ್ನ 2ನೇ ಇನ್ನಿಂಗ್ಸ್ನಲ್ಲಿ 120 ಓವರ್ಗಳಲ್ಲಿ 239 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಪಂದ್ಯ ಡ್ರಾಗೊಳಿಸಿತು.
ಭಾರತ ಮತ್ತು ಕಿವೀಸ್ ನಡುವಿನ 2ನೇ ಟೆಸ್ಟ್ ಪಂದ್ಯವು ನ.27 ರಿಂದ ಡಿ.1 ರ ವರೆಗೆ ಕ್ರೈಸ್ಟ್ಚರ್ಚ್ ಮೈದಾನದಲ್ಲಿ ನಡೆಯಲಿದೆ.


