ನವದೆಹಲಿ: ಉತ್ತರ ಪ್ರದೇಶದಲ್ಲಿ 2027ರ ವಿಧಾನಸಭಾ ಚುನಾವಣೆಗೆ (Uttar Pradesh Elections) ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಸೀಟು ಹಂಚಿಕೆ ಪೈಪೋಟಿ ತೀವ್ರಗೊಂಡಿದ್ದು, ಈ ಕುರಿತು ಚರ್ಚಿಸಲು ಸೋಮವಾರ (ನ.23) ಉಭಯ ಪಕ್ಷಗಳ ನಾಯಕರ ನಡುವೆ ಜಂಟಿ ಸಭೆ ನಡೆಯಲಿದೆ.
ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ನಾಳೆ ಸಮಾಜವಾದಿ ( ಪಕ್ಷದೊಂದಿಗೆ ನಾವು ಸಭೆ ನಡೆಸಲಿದ್ದು, ಸೀಟು ಹಂಚಿಕೆ ಕುರಿತು ಚರ್ಚೆಗಳು ನಡೆಯಲಿವೆ. ಇದು ಎರಡೂ ಪಕ್ಷಗಳ ಜಂಟಿ ಸಭೆ, ಮೈತ್ರಿಕೂಟ ಗೆಲ್ಲಬೇಕೆಂದು ನಾವು ಬಯಸುತ್ತೇವೆ. ಉತ್ತರ ಪ್ರದೇಶದಲ್ಲಿ ಇಂಡಿ ಮೈತ್ರಿಕೂಟ ಸರ್ಕಾರ ರಚನೆಯಾಗಬೇಕು ಎಂಬುದಷ್ಟೇ ನಮ್ಮ ದೃಢ ಸಂಕಲ್ಪ. ಇದಕ್ಕಾಗಿ, ನಾವು ಉತ್ತಮ ಸಮನ್ವಯದೊಂದಿಗೆ ಚುನಾವಣಾ ಕಣಕ್ಕೆ ಇಳಿಯಬೇಕು. ಎರಡೂ ಪಕ್ಷಗಳು ತಮ್ಮ ಚುನಾವಣಾ ಮೈತ್ರಿಯನ್ನ ಅಂತಿಮಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಸ್ಪಿ ಗೆದ್ದ 22 ಸೇರಿ, 181 ಸೀಟಿಗೆ ʻಕೈʼ ಪಟ್ಟು – 2027ರ ಚುನಾವಣೆಗೆ ಮುನ್ನ ಅಖಿಲೇಶ್-ರಾಹುಲ್ ಮೈತ್ರಿಯಲ್ಲೇ ʻಮಹಾಸಂಗ್ರಾಮʼ!
ಎಸ್ಪಿ ಸಮಿತಿಗೆ ರಾಮ್ ಗೋಪಾಲ್ ಯಾದವ್ ನೇತೃತ್ವ
ಇನ್ನೂ ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನ ಚುರುಕುಗೊಳಿಸಿರುವ ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav), ಮಾತುಕತೆಗೆ 7 ಸದಸ್ಯರ ಸಮಿತಿಯೊಂದನ್ನ ರಚನೆ ಮಾಡಿದ್ದಾರೆ. ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಪ್ರೊ. ರಾಮ್ ಗೋಪಾಲ್ ಯಾದವ್ ನೇತೃತ್ವದಲ್ಲಿ ಈ ಸಮಿತಿ ರಚನೆಯಾಗಿದೆ. ನಾಳೆ ನಡೆಯಲಿರುವ ಮಾತುಕತೆಗೆ ರಾಮ್ ಗೋಪಾಲ್ ಎಸ್ಪಿ ಪಕ್ಷದ ನೇತೃತ್ವ ವಹಿಸಲಿದ್ದಾರೆ. ಇತ್ತ ಕಾಂಗ್ರೆಸ್ ಪಕ್ಷದ ನೇತೃತ್ವನ್ನು ಪ್ರಿಯಾಂಕಾ ಗಾಂಧಿ ಅವರು ವಹಿಸಲಿದ್ದಾರೆ ಎಂದು ಹೇಳಲಾಗ್ತಿದೆ.
181 ಸ್ಥಾನಗಳಿಗೆ ʻಕೈʼಪಟ್ಟು
ಒಟ್ಟು 403 ಸ್ಥಾನಗಳಲ್ಲಿ ಮಿತ್ರ ಕಾಂಗ್ರೆಸ್ ಪಕ್ಷವು 181 ಸ್ಥಾನಗಳಿಗೆ ಬೇಡಿಕೆಯಿಟ್ಟಿದೆ. ಈಗಾಗಲೇ 181 ಕ್ಷೇತ್ರಗಳ ಪಟ್ಟಿಯನ್ನು ರಾಜ್ಯ ಕಾಂಗ್ರೆಸ್ನ ನಾಯಕರು ಅಖಿಲೇಶ್ ಯಾದವ್ ಅವರಿಗೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪ್ರಸ್ತಾಪಿಸಿದ 181 ಸ್ಥಾನಗಳಲ್ಲಿ 135 ಸಾಮಾನ್ಯ ಕ್ಷೇತ್ರಗಳು, 45 ಪರಿಶಿಷ್ಟ ಜಾತಿಗಳಿಗೆ (SC) ಮೀಸಲಾಗಿವೆ ಮತ್ತು 1 ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರವಾಗಿದೆ. ಇದರಲ್ಲಿ ಅಮೇಠಿ, ಸಹಾರನಪುರ, ಬಚ್ರಾನಾ, ಬೆಹಟ್, ಮೊರಾದಾಬಾದ್ ಸೇರಿದಂತೆ ಪ್ರಸ್ತುತ ಎಸ್ಪಿ ಶಾಸಕರು ಪ್ರತಿನಿಧಿಸುತ್ತಿರುವ 22 ಕ್ಷೇತ್ರಗಳ ಹೆಸರನ್ನೂ ಪಟ್ಟಿಯಲ್ಲಿ ಸೇರಿಸಿದೆ. ಇದಕ್ಕೆ ಎಸ್ಪಿ ನಾಯಕರು ತೀವ್ರ ಆಕ್ಷೇಪ ಎತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕದಂತೆ ಪಂಜಾಬ್ನಲ್ಲೂ ಕಾಂಗ್ರೆಸ್ ಫ್ರೀ ಗ್ಯಾರಂಟಿ – 300 ಯೂನಿಟ್ ವಿದ್ಯುತ್ ಫ್ರೀ, ಮಹಿಳೆಯರಿಗೆ 1,000 ರೂ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 2 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಈಗಿನ ಪರಿಸ್ಥಿತಿ ನೋಡಿದ್ರೆ, 50 ಕ್ಷೇತ್ರಗಳನ್ನೂ ಗೆಲ್ಲುವ ಅರ್ಹತೆ ಹೊಂದಿಲ್ಲ. ಹೀಗಿರುವಾಗ 181 ಸ್ಥಾನಗಳಿಗೆ ಬೇಡಿಕೆಯಿಟ್ಟಿರೋದು ಅಸಮಂಜಸ ಎಂದಿದ್ದಾರೆ. ಆದ್ರೆ ಈ ಹಿಂದೆ ಅಭ್ಯರ್ಥಿಗಳು ಗೆಲ್ಲುವ ಸಾಮರ್ಥ್ಯದ ಆಧಾರದ ಮೇಲೆ ಸೀಟುಗಳನ್ನು ಕೇಳಬೇಕು ಎಂದಿದ್ದ ಅಖಿಲೇಶ್ ಯಾದವ್, ತಮ್ಮ ಪಕ್ಷವು ಎಷ್ಟು ಸ್ಥಾನಗಳನ್ನು ಬಿಟ್ಟುಕೊಡಲು ಸಿದ್ಧವಿದೆ ಅನ್ನೋ ವಿಚಾರವನ್ನ ಈವರೆಗೂ ಗೌಪ್ಯವಾಗಿಯೇ ಇಟ್ಟಿದ್ದಾರೆ. ಒಟ್ಟಾರೆಯಾಗಿ 24 ಸ್ಥಾನಗಳ ಆರಂಭಿಕ ಆಫರ್ ನೀಡಿದ್ದ ಎಸ್ಪಿ 70 ರಿಂದ 80 ಸ್ಥಾನಗಳನ್ನಷ್ಟೇ ಬಿಟ್ಟುಕೊಡಲು ಒಲವು ತೋರಿದೆ.
ಪ್ರಮುಖ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಕಣ್ಣು
ಸದ್ಯ ಕಾಂಗ್ರೆಸ್ ಸಲ್ಲಿಕೆ ಮಾಡಿರುವ 181 ಕ್ಷೇತ್ರಗಳ ಪಟ್ಟಿಯಲ್ಲಿ ಉತ್ತರ ಪ್ರದೇಶದ ಪಶ್ಚಿಮ, ಮಧ್ಯ ಮತ್ತು ಪೂರ್ವದ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳು ಸೇರಿಕೊಂಡಿವೆ. ರಾಯ್ಬರೇಲಿ, ಅಮೇಠಿ, ಸುಲ್ತಾನ್ಪುರ, ಲಕ್ನೋ ಪೂರ್ವ, ಕಾನ್ಪುರ ಕಂಟೋನ್ಮೆಂಟ್, ಬಾಗ್ಪತ್, ಲೋನಿ, ಮಥುರಾ, ಆಗ್ರಾ ಗ್ರಾಮೀಣ, ಜೇವಾರ್, ಮೀರತ್ ದಕ್ಷಿಣ, ಹಾಪುರ್, ವಾರಣಾಸಿ ಉತ್ತರ, ವಾರಣಾಸಿ ಕಂಟೋನ್ಮೆಂಟ್, ಅಲಹಾಬಾದ್ ಉತ್ತರ, ಅಲಹಾಬಾದ್ ದಕ್ಷಿಣ ಮತ್ತು ಪಿಲಿಭಿತ್ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ.
ಅಲ್ಪಸಂಖ್ಯಾತರೇ ಎಸ್ಪಿಯ ಪ್ರಮುಖ ವೋಟ್ ಬ್ಯಾಂಕ್
ಇನ್ನೂ ಉತ್ತರ ಪ್ರದೇಶದಲ್ಲಿ ಅಲ್ಪ ಸಂಖ್ಯಾತ ಸಮುದಾಯವು ಸಮಾಜವಾದಿ ಪಕ್ಷದ ಪ್ರಮುಖ ವೋಟ್ಬ್ಯಾಂಕ್ ಆಗಿದೆ. ಈ ಮಧ್ಯೆ ಮುಸ್ಲಿಂ ಪ್ರಾಬಲ್ಯವಿರುವ ಅನೇಕ ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿರುವುದು ಎಸ್ಪಿ ನಾಯಕರ ಅತೃಪ್ತಿಗೆ ಕಾರಣವಾಗಿದೆ.
20,000ಕ್ಕೂ ಹೆಚ್ಚು ಲೀಡ್ ಪಡೆದ ಕ್ಷೇತ್ರಗಳನ್ನ ಬಿಟ್ಟುಕೊಡಲು ಎಸ್ಪಿ ಪ್ಲ್ಯಾನ್?
ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ 20 ಸಾವಿರಕ್ಕಿಂತ ಹೆಚ್ಚು ಮತ ಪಡೆದಿತ್ತು. 10 ಸಾವಿರದಿಂದ 20 ಸಾವಿರ ಮತಗಳನ್ನು 10 ಕ್ಷೇತ್ರಗಳಲ್ಲಿ ಗಳಿಸಿತ್ತಯ. ಆರಂಭಿಕ ಹಂತದಲ್ಲಿ ಈ ಕ್ಷೇತ್ರಗಳ ಬಗ್ಗೆಯೇ ಮಾತುಕತೆ ನಡೆಯಲಿದೆ. ಇನ್ನೊಂದು ಕಡೆ ಉತ್ತರಾಖಂಡದಲ್ಲಿ ತಮ್ಮ ಪಕ್ಷಕ್ಕೆ ಕನಿಷ್ಠ 15 ಕ್ಷೇತ್ರಗಳನ್ನ ಬಿಟ್ಟುಕೊಡಬೇಕೆಂದು ಎಸ್ಪಿ ನಾಯಕರು ಕಾಂಗ್ರೆಸ್ಗೆ ಬೇಡಿಕೆಯಿಟ್ಟಿದ್ದಾರೆ.
ಲೋಕಸಭಾ ಚುನಾವಣೆ ಸೀಟು ಹಂಚಿಕೆ ಸೂತ್ರವೇ ಆಧಾರ?
ಸದ್ಯದ ಮಾಹಿತಿ ಪ್ರಕಾರ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ವಿಚಾರದಲ್ಲಿ 2024ರ ಲೋಕಸಭಾ ಚುನಾವಣೆಯ ಸೂತ್ರವನ್ನು ಪ್ರಮುಖ ಆಧಾರವಾಗಿ ಪರಿಗಣಿಸಲಾಗುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಒಟ್ಟು 80 ಕ್ಷೇತ್ರಗಳ ಪೈಕಿ ಸಮಾಜವಾದಿ ಪಕ್ಷ 63 ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ಗೆ ಸುಮಾರು ಶೇ.21ರಷ್ಟು ಸ್ಥಾನಗಳು ದೊರೆತಿದ್ದವು. ಇದೇ ಅನುಪಾತವನ್ನ 403 ವಿಧಾನಸಭಾ ಕ್ಷೇತ್ರಗಳಿಗೆ ಅನ್ವಯಿಸಿದರೆ ಕಾಂಗ್ರೆಸ್ಗೆ ಸುಮಾರು 86 ಸ್ಥಾನಗಳು ಸಿಗಬಹುದು. ಶೇ.20ರಷ್ಟು ಪಾಲನ್ನು ಪರಿಗಣಿಸಿದರೆ ಸುಮಾರು 81 ಸ್ಥಾನಗಳು ದೊರೆಯಬಹುದು. ಹೀಗಾಗಿ ಕಾಂಗ್ರೆಸ್ಗೆ 80 ರಿಂದ 86 ಸ್ಥಾನಗಳನ್ನು ನೀಡುವ ಆಧಾರದಲ್ಲಿ ಮಾತುಕತೆ ನಡೆಬಹುದು ಎಂದು ಹೇಳಲಾಗ್ತಿದೆ.



