ಚಿಕ್ಕಮಗಳೂರು: ಶಿಕಾರಿಗೆ ಬಂದವರಂತೆ ದುಷ್ಕರ್ಮಿಗಳ ತಂಡವೊಂದು ಏಕಾಏಕಿ ಎಸ್ಟೇಟ್ ಮಾಲೀಕರ ಮನೆಯ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಮನೆಯಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುತ್ತಿಗೆಪುರ ಗ್ರಾಮದ ಎಸ್ಟೇಟ್ ಮಾಲೀಕ ವಿಂದನ್ ಎಂಬುವವರ ಮನೆಯ ಮೇಲೆ ಸುಮಾರು 5 ರಿಂದ 6 ಜನರಿದ್ದ ತಂಡ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದೆ. ಗುಂಡಿನ ರಭಸಕ್ಕೆ ಮನೆಯ ಕಿಟಕಿ ಹಾಗೂ ಗೋಡೆಗಳು ಛಿದ್ರ-ಛಿದ್ರಗೊಂಡಿವೆ. ಏಕಾಏಕಿ ಕೇಳಿಬಂದ ಗುಂಡಿನ ಸದ್ದಿನಿಂದ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ದುಷ್ಕರ್ಮಿಗಳು ಮನೆಯ ಬಳಿ ಬಂದೂಕು ಸಮೇತ ಬರುತ್ತಿದ್ದಂತೆ ಸಿಸಿಟಿವಿ ಕ್ಯಾಮೆರಾದಲ್ಲಿ ಅಲರ್ಟ್ ಸಿಗ್ನಲ್ ಬಂದಿದ್ದು, ದಾಳಿಕೋರರ ಸಂಪೂರ್ಣ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡುವ ಉದ್ದೇಶದಿಂದಲೇ ಈ ಫೈರಿಂಗ್ ನಡೆಸಲಾಗಿದೆ ಎಂದು ಮನೆ ಮಾಲೀಕ ವಿಂದನ್ ಆರೋಪಿಸಿದ್ದಾರೆ.ಇದನ್ನೂ ಓದಿ: ನಕಲಿ ಮೆಡಿಸಿನ್ ದಂಧೆ ಪ್ರಕರಣ – ದೆಹಲಿ ಪೊಲೀಸರ ಕಸ್ಟಡಿಗೆ ಕಿಂಗ್ಪಿನ್ ಪ್ರಶಾಂತ್
ಘಟನೆಗೆ ಸಂಬಂಧಿಸಿದಂತೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಉಳಿದ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಕುಟುಂಬಸ್ಥರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಬಸವಣ್ಣನವರಿಗೆ ಹೇಳೋರು-ಕೇಳೋರು ಇಲ್ಲ ಎಂಬ ಕೆಲವರ ಅಹಂಗೆ ಪಾಠ ಕಲಿಸಬೇಕು: ಪ್ರತಾಪ್ ಸಿಂಹ
