ಹಾಸನ: ಜಮೀನು ವಿವಾದದ ವಿಚಾರಕ್ಕೆ ಅಣ್ಣನ ಮೇಲೆಯೇ ತಮ್ಮ ಹಾಗೂ ಆತನ ಮಕ್ಕಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ದಾಳಿ ನಡೆಸಿರುವ ಘಟನೆ ಬೇಲೂರಿನ ಹಾಡ್ಲಗೆರೆ ಗ್ರಾಮದಲ್ಲಿ ನಡೆದಿದೆ.
ನಿಂಗೇಗೌಡ (70) ಹಲ್ಲೆಗೊಳಗಾದವರು. ಹಿರೇಗೌಡ ಹಾಗೂ ಆತನ ಮಕ್ಕಳಾದ ರಮೇಶ್ ಹಾಗೂ ಕುಮಾರ್ ಕೊಡಲಿ, ಮಚ್ಚಿನಿಂದ ಹಲ್ಲೆ ನಡೆಸಿರುವ ಆರೋಪಿಗಳು. ಜಮೀನು ಹಂಚಿಕೊಳ್ಳುವ ವಿಚಾರಕ್ಕೆ ಸಹೋದರರಾದ ನಿಂಗೇಗೌಡ ಹಾಗೂ ಹಿರೇಗೌಡ ನಡುವೆ ಜಗಳ ನಡೆಯುತ್ತಿತ್ತು. ಇದೇ ವಿಚಾರಕ್ಕೆ ರಾತ್ರಿ ವೇಳೆ ಜಗಳ ತಾರಕಕ್ಕೇರಿ ಹಿರೇಗೌಡ ಅವರ ಮಕ್ಕಳು, ಸೊಸೆ ಜ್ಯೋತಿ (ರಮೇಶ ಪತ್ನಿ) ಕೊಡಲಿ, ಮಚ್ಚು ಹಿಡಿದು ನಿಂಗೇಗೌಡರ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ನಿನಗೊಂದು ಗತಿ ಕಾಣಿಸುತ್ತೇನೆ ಅಂತ ಹೆಂಡತಿ ಸ್ನೇಹಿತನಿಗೆ ಆಸಿಡ್ ಎರಚಿದ ಪತಿ!
ಮಾರಕಾಸ್ತ್ರಗಳ ಹೊಡೆತ ತಾಳಲಾರದೆ ನಿಂಗೇಗೌಡ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕುಸಿದು ಬಿದ್ದರೂ ಬಿಡದ ರಮೇಶ್ ಮನಬಂದಂತೆ ಕೊಚ್ಚಿದ್ದಾನೆ. ಹಲ್ಲೆ ನಡೆಸುತ್ತಿದ್ದ ವೇಳೆ ನಿಂಗೇಗೌಡನ ಮೊಮ್ಮಕ್ಕಳು ಸ್ಥಳದಲ್ಲಿದ್ದು ಹಲ್ಲೆ ನಡೆಸುವುದನ್ನು ಕಂಡು ಭಯಭೀತರಾಗಿ ಮನೆಯೊಳಗೆ ಓಡಿ ಹೋಗಿದ್ದಾರೆ.
ರಸ್ತೆಯಲ್ಲಿ ಕುಸಿದು ಬಿದ್ದಿದ್ದ ನಿಂಗೇಗೌಡರನ್ನು ಅವರ ಮಗ ಚಂದ್ರು ಕರೆತಂದು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾವು-ಬದುಕಿನ ನಡುವೆ ಅವರು ಹೋರಾಡುತ್ತಿದ್ದಾರೆ. ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅರೇಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಹಿರೇಗೌಡ, ರಮೇಶ್, ಕುಮಾರ್, ಜ್ಯೋತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ತ್ರಿಪುರಾದ ಶಿಕ್ಷಕನನ್ನು ಅಪಹರಿಸಿ ಕೊಂದಿದ್ದವ 14 ವರ್ಷಗಳ ಬಳಿಕ ಅಸ್ಸಾಂನಲ್ಲಿ ಲಾಕ್!
