– ಮಹಿಳಾ ಕೇಂದ್ರಿತ ಯೋಜನೆ, ಕಲ್ಯಾಣ ಕಾರ್ಯಕ್ರಮ ಮುಂದುವರಿಸಲು ನಿರ್ಧಾರ
ಚಂಡೀಗಢ: 2027ರ ವಿಧಾನಸಭಾ ಚುನಾವಣೆಗೆ (Punjab Assembly Election) ದಿನಗಳು ಹತ್ತಿರವಾಗುತ್ತಿದ್ದಂತೆ ಪಂಜಾಬ್ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಚುನಾವಣಾ ತಯಾರಿಯಲ್ಲಿ ತೊಡಗಿರುವ ಕಾಂಗ್ರೆಸ್, ಪ್ರಣಾಳಿಕೆ (Manifesto) ರೂಪಿಸುವ ಕಾರ್ಯದಲ್ಲಿ ತೊಡಗಿದೆ. ಒಟ್ಟು 2.01 ಕೋಟಿ ಮತದಾರರ ಪೈಕಿ 97.24 ಲಕ್ಷ ಮಹಿಳಾ ಮತದಾರರಿದ್ದು, ಮಹಿಳಾ ಕೇಂದ್ರಿತ ಯೋಜನೆಗಳನ್ನ ಮುಂದುವರಿಸಲು ನಿರ್ಧರಿಸಿದೆ.
ಇದರೊಂದಿಗೆ ರಾಜ್ಯ ರಾಜಕೀಯ ಚರ್ಚೆಯಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿರುವ ಸಮಸ್ಯೆಗಳನ್ನ ಗಮನದಲ್ಲಿಟ್ಟುಕೊಂಡು, ಆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಣಾಳಿಕೆ ರೂಪಿಸುತ್ತಿದೆ. ಡಿಸೆಂಬರ್ 2-3ನೇ ವಾರದ ವೇಳೆಗೆ ಪ್ರಣಾಳಿಕೆ ಸಿದ್ಧವಾಗುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಆಪ್ ಯೋಜನೆಗಳೂ ಮುಂದುವರಿಯುವ ನಿರೀಕ್ಷೆ
ಪ್ರಣಾಳಿಕೆಯು ಪ್ರಸ್ತುತ ಆಮ್ ಆದ್ಮಿ ಪಕ್ಷ (AAP)ದ ಮಹಿಳೆಯರಿಗೆ, ವೃದ್ಧರಿಗೆ ಪ್ರತಿ ತಿಂಗಳು 1,000 ರೂ. ನೀಡುವ ಯೋಜನೆ ಮುಂದುವರಿಸುವ ಅಥವಾ ಅದರ ಮೊತ್ತ ಹೆಚ್ಚಿಸುವ ನಿರೀಕ್ಷೆಯಿದೆ. ಇದರೊಂದಿಗೆ 300 ಯೂನಿಟ್ ಉಚಿತ ವಿದ್ಯುತ್ ಸೇರಿದಂತೆ ಇತರ ಕಲ್ಯಾಣ ಕ್ರಮಗಳು ಸಹ ಮುಂದುವರಿಯುವ ಸಾಧ್ಯತೆಗಳಿವೆ. ಡಿಸೆಂಬರ್ 15ರ ಸುಮಾರಿಗೆ ಇನ್ನೂ ಮೂರು ವಾರಗಳಲ್ಲಿ ಪ್ರಣಾಳಿಕೆಯ ಕರಡನ್ನ ಪಕ್ಷದ ಹೈಕಮಾಂಡ್ಗೆ ಸಲ್ಲಿಸಲಾಗುವುದು. ನಂತರ ಅದನ್ನು ಬಿಡುಗಡೆ ಮಾಡುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ನಾಯಕರು ಸೇರಿದಂತೆ ಪಕ್ಷದ ಉನ್ನತ ನಾಯಕತ್ವವು ಅಂತಿಮ ಪರಿಶೀಲನೆ ನಡೆಸಿ ಪ್ರಣಾಳಿಕೆಯಲ್ಲಿ ಯಾವ ಭರವಸೆಗಳು ಮತ್ತು ಘೋಷಣೆಗಳನ್ನು ಮಾಡಬೇಕು ಎಂಬುದನ್ನು ನಿರ್ಧರಿಸಲಿದೆ. ಪ್ರಣಾಳಿಕೆ ಬಿಡುಗಡೆ ದಿನಾಂಕವನ್ನ ಅದಕ್ಕೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ ಎಂದಿವೆ ಪಕ್ಷದ ಮೂಲಗಳು.
ಸದ್ಯದ ಮಾಹಿತಿಯ ಪ್ರಕಾರ, ಫತೇಘರ್ ಸಾಹಿಬ್ನ ಸಂಸತ್ ಸದಸ್ಯ, ಪ್ರಣಾಳಿಕೆ ಸಮಿತಿಯ ಮುಖ್ಯಸ್ಥ ಡಾ. ಅಮರ್ ಸಿಂಗ್, ಪಕ್ಷವು ಮಹಿಳೆಯರು ಮತ್ತು ವೃದ್ಧರಿಗೆ ತಿಂಗಳಿಗೆ 1,000 ರೂ., ವಿಧವಾ ವೇತನ ಯೋಜನೆಗಳು, ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ಸೇರಿದಂತೆ ಅಸ್ತಿತ್ವದಲ್ಲಿರುವ ಕಲ್ಯಾಣ ಯೋಜನೆಗಳನ್ನ ಮುಂದುವರಿಸಲು ನಿರ್ಧರಿಸಿದೆ. ಜೊತೆಗೆ ಡ್ರಗ್ಸ್ ಸೇರಿದಂತೆ ಪ್ರಮುಖ ಸಮಸ್ಯೆಗಳನ್ನ ಪರಿಹರಿಸುವ ನಿಟ್ಟಿನಲ್ಲಿ ಪ್ರಣಾಳಿಕೆ ರೂಪಿಸಲಾಗಿತ್ತಿದೆ ಎಂದು ವರದಿಯಾಗಿದೆ.


