ವಾಷಿಂಗ್ಟನ್: ಕುಖ್ಯಾತ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ (Goldy Brar) ಬಂಧನಕ್ಕೆ ಮಾಹಿತಿ ನೀಡುವವರಿಗೆ ಅಮೆರಿಕದ ತನಿಖಾ ಸಂಸ್ಥೆ ಎಫ್ಬಿಐ 10 ಲಕ್ಷ ಡಾಲರ್ (ಸುಮಾರು 9 ಕೋಟಿ ರೂ.) ಬಹುಮಾನ ಘೋಷಿಸಿದೆ. ಅಲ್ಲದೇ, ಗೋಲ್ಡಿ ಬ್ರಾರ್ನನ್ನು ಎಫ್ಬಿಐನ ‘ಅತ್ಯಂತ ಬೇಕಾಗಿರುವ 10 ಮಂದಿ ಅಪರಾಧಿಗಳ’ ಪಟ್ಟಿಯಲ್ಲಿ ಸೇರಿಸಲಾಗಿದೆ.
ಗೋಲ್ಡಿ ಬ್ರಾರ್ನ ನಿಜವಾದ ಹೆಸರು ಸತೀಂದರ್ಜೀತ್ ಸಿಂಗ್. ಈತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಉತ್ತರ ಅಮೆರಿಕದ ಕಾರ್ಯಾಚರಣೆಗಳನ್ನು ಮುನ್ನಡೆಸುತ್ತಿದ್ದಾನೆ ಎಂಬ ಆರೋಪವಿದೆ. ಅಮೆರಿಕ ಮತ್ತು ಕೆನಡಾದಲ್ಲಿ ನಡೆದ ಕೊಲೆ, ಗುಂಡಿನ ದಾಳಿ, ಅಪಹರಣ, ಸುಲಿಗೆ ಹಾಗೂ ಮಾದಕ ವಸ್ತುಗಳ ಕಳ್ಳಸಾಗಣೆ ಸೇರಿದಂತೆ ಹಲವು ಅಪರಾಧಗಳಲ್ಲಿ ಈತನ ಪಾತ್ರವಿದೆ ಎಂದು ಎಫ್ಬಿಐ ಆರೋಪಿಸಿದೆ.
ಜುಲೈ 1ರಂದು ಲಾಸ್ ಏಂಜಲೀಸ್ನ ಅಮೆರಿಕದ ಜಿಲ್ಲಾ ನ್ಯಾಯಾಲಯವು ಗೋಲ್ಡಿ ಬ್ರಾರ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಸಂಘಟಿತ ಅಪರಾಧ ಚಟುವಟಿಕೆ, ಸುಲಿಗೆ ಮೂಲಕ ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಸಂಚು ಹಾಗೂ ಮಾದಕ ವಸ್ತುಗಳ ವಿತರಣೆ ಮತ್ತು ಕಳ್ಳಸಾಗಣೆ ಸಂಚಿನ ಆರೋಪಗಳು ಈತನ ಮೇಲಿದೆ.
‘ಆಪರೇಷನ್ ಹಾರ್ಡ್ಬಾಲ್’ ಹೆಸರಿನಲ್ಲಿ ಅಮೆರಿಕದ ತನಿಖಾ ಸಂಸ್ಥೆಗಳು ನಡೆಸುತ್ತಿರುವ ಕಾರ್ಯಾಚರಣೆಯ ಭಾಗವಾಗಿ ಗೋಲ್ಡಿ ಬ್ರಾರ್ ವಿರುದ್ಧ ಕ್ರಮ ತೀವ್ರಗೊಳಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಮೂರು ಅಪರಾಧ ಜಾಲಗಳಿಗೆ ಸಂಬಂಧಿಸಿದಂತೆ 37 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಹಲವರನ್ನು ಬಂಧಿಸಲಾಗಿದೆ.
ಕೆನಡಾ ಕೂಡ ಗೋಲ್ಡಿ ಬ್ರಾರ್ ಬಂಧನಕ್ಕೆ ಮಾಹಿತಿ ನೀಡುವವರಿಗೆ 2.5 ಲಕ್ಷ ಕೆನಡಿಯನ್ ಡಾಲರ್ ಬಹುಮಾನ ಘೋಷಿಸಿದೆ. 2023ರಲ್ಲಿ ಸುಖದೂಲ್ ಸಿಂಗ್ ಗಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಪೊಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಗೋಲ್ಡಿ ಬ್ರಾರ್ ಅತ್ಯಂತ ಅಪಾಯಕಾರಿ ಹಾಗೂ ಶಸ್ತ್ರಸಜ್ಜಿತ ವ್ಯಕ್ತಿಯಾಗಿದ್ದು, ಸಾರ್ವಜನಿಕರು ಆತನನ್ನು ಸಂಪರ್ಕಿಸಲು ಅಥವಾ ಸಮೀಪಿಸಲು ಪ್ರಯತ್ನಿಸಬಾರದು ಎಂದು ಎಫ್ಬಿಐ ಎಚ್ಚರಿಕೆ ನೀಡಿದೆ.
