ನವರಸ ನಾಯಕ ಜಗ್ಗೇಶ್ (Jaggesh) ಅಭಿನಯದ ನೂತನ ಚಿತ್ರಕ್ಕೆ ‘ಭರತ’ ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ವಿಶೇಷವೆಂದರೆ, ಜಗ್ಗೇಶ್ ಅವರ ಪುತ್ರರಾದ ಗುರುರಾಜ್ ಮತ್ತು ಯತಿರಾಜ್ ಮೊದಲ ಬಾರಿಗೆ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ತಮ್ಮ ಹೆಸರಿನಲ್ಲಿರುವ ‘ರಾಜ್’ ಪದವನ್ನು ಆಯ್ದುಕೊಂಡು ‘ರಾಜ್ ಬ್ರದರ್ಸ್’ ಎಂಬ ಹೆಸರಿನಲ್ಲಿ ಇಬ್ಬರೂ ಜಂಟಿಯಾಗಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.
ಗುರುರಾಜ್ ಮತ್ತು ಯತಿರಾಜ್ ಉತ್ತಮ ಕಥೆಯೊಂದನ್ನು ಆಯ್ಕೆ ಮಾಡಿಕೊಂಡು, ಅದನ್ನು ಸಿನಿಮಾ ರೂಪಕ್ಕೆ ತರುವ ಸಿದ್ಧತೆಯನ್ನು ಬಹಳ ದಿನಗಳಿಂದ ನಡೆಸಿದ್ದರು. ಕಥೆಯ ಸಂಪೂರ್ಣ ರೂಪುರೇಷೆ ಸಿದ್ಧವಾಗುವವರೆಗೂ ತಂದೆ ಜಗ್ಗೇಶ್ ಅವರಿಗೆ ಈ ವಿಚಾರವನ್ನು ತಿಳಿಸದೆ ಗೌಪ್ಯವಾಗಿಟ್ಟಿದ್ದರು. ಕಥೆ ಪೂರ್ಣಗೊಂಡ ಬಳಿಕ ತಂದೆಯ ಮುಂದೆ ತಮ್ಮ ನಿರ್ದೇಶನದ ಕನಸನ್ನು ಬಿಚ್ಚಿಟ್ಟಾಗ ಜಗ್ಗೇಶ್ ಅವರು ಬಹಳ ಸಂತೋಷಪಟ್ಟರು. ಮಕ್ಕಳ ಈ ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿದರು. ಹೀಗೆ ತಮ್ಮ ನಿರ್ದೇಶನದ ಮೂಲಕ ತಂದೆಗೆ ಅಚ್ಚರಿಯ ಉಡುಗೊರೆ ನೀಡಿದ್ದಾರೆ ಗುರುರಾಜ್ ಮತ್ತು ಯತಿರಾಜ್. ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಆರ್ಭಟ – ಭಾರತದಲ್ಲೇ 900 ಕೋಟಿ ಗಳಿಕೆಯತ್ತ ಯಶ್ ಸಿನಿಮಾ
ಗುರುರಾಜ್ ಹಾಗೂ ಯತಿರಾಜ್ ಇಬ್ಬರೂ ಈಗಾಗಲೇ ಕಲಾವಿದರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ನಟನೆಯಿಂದ ನಿರ್ದೇಶನದತ್ತ ಹೆಜ್ಜೆಯಿಡುವ ಮೂಲಕ ಹೊಸ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ತಂದೆಯೇ ನಾಯಕನಾಗಿ ನಟಿಸುತ್ತಿರುವ ಈ ಚಿತ್ರವನ್ನು ಎಂಟು ವರ್ಷದಿಂದ ಅರವತ್ತು ವರ್ಷದವರೆಗಿನ ಎಲ್ಲಾ ವಯೋಮಾನದ ಪ್ರೇಕ್ಷಕರು ಕುಟುಂಬ ಸಮೇತ ಕುಳಿತು ನೋಡುವಂತಹ ಮನರಂಜನಾತ್ಮಕ ಕಥಾಹಂದರದಲ್ಲಿ ರೂಪಿಸಲಾಗುತ್ತಿದೆ. ನಗುವಿನ ಜೊತೆಗೆ ಉತ್ತಮ ಸಂದೇಶವನ್ನೂ ಒಳಗೊಂಡಿರುವ ಈ ಚಿತ್ರದಲ್ಲಿ ಜಗ್ಗೇಶ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ, ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಹಾಗೂ ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ. Richa Film Factory ಸಂಸ್ಥೆಯ ಮೂಲಕ ಈ ಚಿತ್ರ ನಿರ್ಮಾಣವಾಗುತ್ತಿದೆ.
46 ವರ್ಷಗಳ ಕಲಾ ಪಯಣ ಹೊಂದಿರುವ ತಂದೆ ಜಗ್ಗೇಶ್ ಅವರೊಂದಿಗೆ ಈಗ ಪುತ್ರರು ನಿರ್ದೇಶಕರಾಗಿ ಕೈಜೋಡಿಸುತ್ತಿರುವುದು ‘ಭರತ’ ಚಿತ್ರದ ಪ್ರಮುಖ ವಿಶೇಷತೆಯಾಗಿದೆ. ಅಪ್ಪನಿಗೆ ಮಕ್ಕಳ ನಿರ್ದೇಶನದ ಅಚ್ಚರಿಯ ಉಡುಗೊರೆಯಾಗಿ ಮೂಡಿಬರುತ್ತಿರುವ ‘ಭರತ’ ಚಿತ್ರದ ಬಗ್ಗೆ ಸಿನಿಪ್ರೇಮಿಗಳಲ್ಲಿ ನಿರೀಕ್ಷೆ ಮೂಡಿದೆ. ಇದನ್ನೂ ಓದಿ: ಎಸ್.ನಾರಾಯಣ್ ನಿರ್ದೇಶನದ ನೂತನ ಚಿತ್ರಕ್ಕೆ ಸದ್ದಿಲ್ಲದೇ ಮುಹೂರ್ತ
