– 11 ತಿಂಗಳಲ್ಲಿ 53,000 ರೂ. ಕುಸಿತ
ಬೆಂಗಳೂರು: ಚಿನ್ನದ ಮಾರುಕಟ್ಟೆಯಲ್ಲಿ (Gold Market) ಮಹಾಪತನವಾಗಿದೆ. ಗಗನಕ್ಕೇರಿದ್ದ ಚಿನ್ನದ ದರ ಈಗ ಪಾತಾಳದತ್ತ ಮುಖ ಮಾಡಿದೆ. ಚಿನ್ನದ ಬೆಲೆ ಇಳಿಕೆಯಾಗಬಹುದು ಎಂದು ಕಾಯುತ್ತಿದ್ದ ಗ್ರಾಹಕರಿಗೆ ಕೊನೆಗೂ ಬಂಪರ್ ಸುದ್ದಿ ಸಿಕ್ಕಿದೆ.
ಒಂದು ಕಡೆ ಚಿನ್ನದ ಬೆಲೆ (Gold Rate) ಕುಸಿತದಿಂದ ಗ್ರಾಹಕರು ಖುಷಿಯಾಗಿದ್ದಾರೆ. ಇನ್ನೊಂದು ಕಡೆ ಗರಿಷ್ಠ ಬೆಲೆಯಲ್ಲಿ ಚಿನ್ನ ಖರೀದಿಸಿದವರು ಕಂಗಾಲಾಗಿದ್ದಾರೆ. ಹೂಡಿಕೆದಾರರ ಲೆಕ್ಕಾಚಾರವೇ ತಲೆಕೆಳಗಾಗಿದೆ. ಚಿನ್ನದ ಬೆಲೆ ಇನ್ನೂ ಕುಸಿಯುತ್ತಾ? 1.20 ಲಕ್ಷ ರೂ.ಗಿಂತಳೂ ಕುಸಿಯುತ್ತಾ? ಅಥವಾ ಮತ್ತೆ ಚಿನ್ನ ಮೈ ಕೊಡವಿ ಚೇತರಿಸಿಕೊಳ್ಳುತ್ತಾ? ಈ ರೀತಿಯ ಹಲವು ಪ್ರಶ್ನೆಗಳು ಜನರನ್ನ ಕಾಡತೊಡಗಿದೆ.
ದರ ಇಳಿಕೆಗೆ ಕಾಯ್ತಿದ್ದವರಿಗೆ ಗುಡ್ನ್ಯೂಸ್?
ಬೆಂಗಳೂರು ಮಾರುಕಟ್ಟೆಯಲ್ಲಿ ಇವತ್ತಿನ ಚಿನ್ನದ ಬೆಲೆ ಹೇಗಿದೆ?
* 24 ಕ್ಯಾರೆಟ್ -10 ಗ್ರಾಂ – 1,30,690 ರೂ. (ನಿನ್ನೆಯ ದರ) – 1,25,570 ರೂ. (ಇಂದಿನ ದರ)
22 ಕ್ಯಾರೆಟ್ – 10 ಗ್ರಾಂ – 1,19,800 ರೂ. (ನಿನ್ನೆಯ ದರ) – 1,15,100 ರೂ. (ಇಂದಿನ ದರ)
* 24 ಕ್ಯಾರೆಟ್ – 1 ಗ್ರಾಂ – 13,069 ರೂ. (ನಿನ್ನೆಯ ದರ) – 12,557 ರೂ. (ಇಂದಿನ ದರ)
22 ಕ್ಯಾರೆಟ್ – 1 ಗ್ರಾಂ – 11,980 ರೂ. (ನಿನ್ನೆಯ ದರ) – 11,510 ರೂ. (ಇಂದಿನ ದರ)
ಚಿನ್ನದ ಬೆಲೆ ಏರಿಕೆಯಾದಾಗಲೆಲ್ಲಾ ಯಾವಾಗಪ್ಪ ಮತ್ತೆ ಚಿನ್ನದ ದರ ಇಳಿಕೆ ಆಗುತ್ತೆ ಅಂತ ಕಾಯುತ್ತಿದ್ದ ಗ್ರಾಹಕರಿಗೆ ಈಗ ದೊಡ್ಡ ಮಟ್ಟದ ಬೆಲೆ ಇಳಿಕೆ ಕಂಡುಬಂದಿದೆ. ನವೆಂಬರ್ 20 ರಂದು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 5,120 ರೂಪಾಯಿ ಕುಸಿದಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 4,700 ರೂಪಾಯಿ ಇಳಿಕೆಯಾಗಿದೆ. ಅಂದ್ರೆ ಬರೀ ಒಂದೇ ದಿನದಲ್ಲಿ ಚಿನ್ನ ಖರೀದಿಸುವವರಿಗೆ ಗಮನಾರ್ಹ ಮೊತ್ತದ ಇಳಿಕೆ ಕಂಡುಬಂದಿದೆ. ಕಳೆದ 10 ದಿನಗಳಲ್ಲಿ 22 ಕ್ಯಾರೆಟ್ ಒಂದು ಗ್ರಾಮ್ ಚಿನ್ನದ ಬೆಲೆ 1,739 ರೂಪಾಯಿ ಕಡಿಮೆಯಾಗಿದೆ. 22 ಕಾರೆಟ್ ಚಿನ್ನ ಒಂದು ಗ್ರಾಂ 1,385 ರೂ. ಕಡಿಮೆಯಾಗಿದೆ.
ಚಿನ್ನದ ಬೆಲೆ 1.75 ಲಕ್ಷ ರೂಪಾಯಿ ದಾಟಿದಾಗ ಮತ್ತೆ ಈ ಬೆಲೆ ಕಡಿಮೆಯಾಗುತ್ತಾ ಎಂದು ಗ್ರಾಹಕರು ಪ್ರಶ್ನೆ ಮಾಡುವಂತಾಗಿತ್ತು. ಈಗ ಅದೇ ಚಿನ್ನ 1.25 ಲಕ್ಷ ರೂಪಾಯಿಯ ಹಂತಕ್ಕೆ ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಡಾಲರ್ ಆಧಾರದಲ್ಲಿ ನಿಗದಿಯಾಗುತ್ತದೆ. ಡಾಲರ್ ಬಲಿಷ್ಠವಾದಾಗ ಚಿನ್ನದ ಬೆಲೆ ಇತರ ಕರೆನ್ಸಿಗಳಲ್ಲಿ ಖರೀದಿಸುವವರಿಗೆ ದುಬಾರಿಯಾಗುತ್ತದೆ. ಇದರಿಂದ ಬೇಡಿಕೆ ಕುಸಿಯುವ ಸಾಧ್ಯತೆ ಹೆಚ್ಚುತ್ತದೆ. ಡಾಲರ್ ಬಲಗೊಳ್ಳುತ್ತಿರುವುದರಿಂದ ಚಿನ್ನದ ಮೇಲೆ ಮಾರಾಟದ ಒತ್ತಡ ಹೆಚ್ಚಾಗಿದೆ. ಇನ್ನು ಚಿನ್ನದ ಜೊತೆ ಬೆಳ್ಳಿಯೂ ಕುಸಿತದ ಹಾದಿಯಲ್ಲಿದೆ. ನವೆಂಬರ್ 20 ರಂದು ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ಸುಮಾರು 10 ಸಾವಿರದ 614 ರೂಪಾಯಿ ಕುಸಿತ ಕಂಡಿದೆ. ಈಗ ಕೆಜಿ ಬೆಳ್ಳಿ 1 ಲಕ್ಷದ 75 ಸಾವಿರ ರೂಪಾಯಿಯ ಮಟ್ಟಕ್ಕೆ ಬಂದಿದೆ.


