ನವದೆಹಲಿ: ತಾಜ್ ಮಹಲ್ (Taj Mahal), ನಿಜಾಮುದ್ದೀನ್ ದರ್ಗಾಕ್ಕೆ ಪಾಕ್ ಸಚಿವರ ಭೇಟಿಗೆ ಕೇಂದ್ರ ಸರ್ಕಾರ ನಿರಾಕರಿಸಿದೆ.
ಈ ವಾರ ದೆಹಲಿಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO) ಸಭೆಯಲ್ಲಿ ಭಾಗವಹಿಸುತ್ತಿರುವ ಪಾಕಿಸ್ತಾನದ ಹವಾಮಾನ ಸಚಿವ ಮುಸಾದಿಕ್ ಮಲಿಕ್ (Musadik Malik) ರಾಜಕೀಯ ಬಿರುಗಾಳಿಯ ಕೇಂದ್ರಬಿಂದುವಾಗಿದ್ದಾರೆ. ನವೆಂಬರ್ 20-22 ರಿಂದ ರಾಜಧಾನಿಯ ಐತಿಹಾಸಿಕ ಪುರಾನ ಕ್ವಿಲಾದಲ್ಲಿ ಮೊದಲ ಶಾಂಘೈ ಸಹಕಾರ ಸಂಸ್ಥೆ (SCO) ನಾಗರಿಕ ಸಂವಾದ ವೇದಿಕೆಯನ್ನು ಆಯೋಜಿಸಲಾಗಿದೆ.
ಮಲಿಕ್ ಅವರು ಭಾರತ ಭೇಟಿಯ ಸಮಯದಲ್ಲಿ ಹಲವಾರು ಸ್ಥಳಗಳಿಗೆ ಭೇಟಿ ನೀಡಲು ಯೋಜಿಸಿದ್ದರು ಎಂಬ ವಿಚಾರ ಈಗ ಬಹಿರಂಗವಾಗಿದೆ. ಆದರೆ, ಆ ವಿನಂತಿಗಳನ್ನು ಕೇಂದ್ರವು ತಿರಸ್ಕರಿಸಿದೆ. ಇದನ್ನೂ ಓದಿ: ED ಅಧಿಕಾರ ಮರುಪರಿಶೀಲನೆ ಕೋರಿ ಅರ್ಜಿ – ಜನವರಿಯಲ್ಲಿ ವಿಚಾರಣೆ ನಡೆಸಲಿರುವ ಸುಪ್ರೀಂ
ಪಾಕಿಸ್ತಾನ ಸಚಿವರು ಆಗ್ರಾದ ತಾಜ್ ಮಹಲ್ ಮತ್ತು ರಾಜಧಾನಿಯ ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡಲು ಅನುಮತಿ ಕೋರಿದ್ದರು. ಆದರೆ, ಭಾರತ ಸರ್ಕಾರವು SCO ಸಭೆಯನ್ನು ಮೀರಿದ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಿದೆ. ಅವರು ಇಲ್ಲಿಗೆ ಭೇಟಿ ನೀಡುವ ಸಮಯದಲ್ಲಿ SCO ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾತ್ರ ಅವಕಾಶವಿದೆ . ಬೇರೆ ಯಾವುದೇ ಸ್ಥಳಕ್ಕೆ ಭೇಟಿ ನೀಡಬಾರದು ಎಂದು ಅವರಿಗೆ ತಿಳಿಸಲಾಗಿದೆ.
2023 ರಲ್ಲಿ ಗೋವಾದಲ್ಲಿ ನಡೆದ SCO ಸಭೆಯಲ್ಲಿ ಬಿಲಾವಲ್ ಭುಟ್ಟೋ ಜರ್ದಾರಿ ಭಾಗವಹಿಸಿದ್ದರು. ಮಲಿಕ್ ಅವರ ನಂತರ ಪಾಕಿಸ್ತಾನದ ಫೆಡರಲ್ ಸಚಿವರೊಬ್ಬರು ನಡೆಸುತ್ತಿರುವ ಮೊದಲ ಪ್ರವಾಸವಾಗಿದೆ. 2025ರ ಮೇನಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ನಡೆಸಿತು. ಅದಾದ ಬಳಿಕ, ಪಾಕಿಸ್ತಾನಿ ನಾಯಕರೊಬ್ಬರು ಭಾರತಕ್ಕೆ ನೀಡುತ್ತಿರುವ ಮೊದಲ ಪ್ರವಾಸ ಇದಾಗಿದೆ.
ಸ್ಥಾಪಿತ ಪದ್ಧತಿಗೆ ಅನುಗುಣವಾಗಿ ಪಾಕಿಸ್ತಾನ ಸೇರಿದಂತೆ ಎಲ್ಲಾ SCO ಸದಸ್ಯರಿಗೆ ಆಹ್ವಾನ ನೀಡಲಾಗಿದೆ ಎಂದು ಭಾರತ ಅಕ್ಟೋಬರ್ 28 ರಂದು ಘೋಷಿಸಿತ್ತು. ನಂತರ ಪಾಕಿಸ್ತಾನ ಸರ್ಕಾರವು ಮುಸಾದಿಕ್ ಮಲಿಕ್ ಭಾಗವಹಿಸುವಿಕೆಯನ್ನು ದೃಢಪಡಿಸಿತು. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಭಾರತದ ಪ್ರಧಾನಿಯೂ ಇರುತ್ತಿದ್ದರು: ಟ್ರಂಪ್, ಪುಟಿನ್, ಕ್ಸಿ ಜಿನ್ಪಿಂಗ್ ಫೋಟೋ ಹಾಕಿ ಮೋದಿಯನ್ನು ಕೆಣಕಿದ ರಾಗಾ
ನಾಗರಿಕತೆಗಳ ನಡುವೆ ಸಂವಾದವನ್ನು ಉತ್ತೇಜಿಸಲು ಮತ್ತು SCO ಚೌಕಟ್ಟಿನೊಳಗೆ ಪರಸ್ಪರ ಗೌರವದ ಮನೋಭಾವದಿಂದ ಜನರಿಂದ ಜನರಿಗೆ ಸಂಪರ್ಕ ಬೆಳೆಸಲು ಬದ್ಧವಾಗಿದ್ದೇವೆ ಎಂದು ಪಾಕಿಸ್ತಾನ ಸರ್ಕಾರ ತಿಳಿಸಿದೆ.
