ಬಳ್ಳಾರಿ: ರೈಲುಗಳ ಮೂಲಕ ನಡೆಯುವ ಮಾದಕ ವಸ್ತುಗಳ ಅಕ್ರಮ ಸಾಗಾಟಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಅಧಿಕಾರಿಗಳು ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ(Hospet Railway Station) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸುಮಾರು 8.25 ಲಕ್ಷ ರೂ. ಮೌಲ್ಯದ 8 ಕೆಜಿ 500 ಗ್ರಾಂ ಒಣ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ವಿಜಯನಗರ ಜಿಲ್ಲೆಯ ಅಬಕಾರಿ ಇಲಾಖೆ, ಸ್ಥಳೀಯ ಪೊಲೀಸರು ಹಾಗೂ ರೈಲ್ವೆ ರಕ್ಷಣಾ ದಳದ (RPF) ಸಿಬ್ಬಂದಿ ಜಂಟಿಯಾಗಿ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ರೈಲ್ವೆ ನಿಲ್ದಾಣಗಳಲ್ಲಿ ಮಾದಕ ವಸ್ತುಗಳ ಸಾಗಾಟವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಶೋಧಕಾರ್ಯ ಕೈಗೊಂಡಿತ್ತು. ಈ ವೇಳೆ ಹೊಸಪೇಟೆ ರೈಲ್ವೆ ನಿಲ್ದಾಣದ ಪ್ಲಾಟ್ಫಾರಂ ನಂಬರ್ 01ರಲ್ಲಿ ಕೆಂಪು ಬಣ್ಣದ ಬ್ಯಾಗ್ ಒಂದು ವಾರಸುದಾರರಿಲ್ಲದೆ ಪತ್ತೆಯಾಗಿದೆ.
ಬ್ಯಾಗ್ ಕಂಡು ಅನುಮಾನಗೊಂಡ ಅಧಿಕಾರಿಗಳು ತಕ್ಷಣವೇ ಪೊಲೀಸ್ ಶ್ವಾನದಳದ (Dog Squad) ಮೂಲಕ ತಪಾಸಣೆ ನಡೆಸಿದ್ದಾರೆ. ಬಳಿಕ ಬ್ಯಾಗ್ ತೆರೆದು ಪರಿಶೀಲಿಸಿದಾಗ, ಅದರೊಳಗೆ 5 ಪ್ರತ್ಯೇಕ ಪ್ಯಾಕೆಟ್ಗಳಲ್ಲಿ ತುಂಬಿಡಲಾಗಿದ್ದ ಒಟ್ಟು 8 ಕೆಜಿ 500 ಗ್ರಾಂ ಒಣ ಗಾಂಜಾ ಪತ್ತೆಯಾಗಿದೆ.
ಸದ್ಯ ಈ ಗಾಂಜಾ ತುಂಬಿದ ಬ್ಯಾಗ್ ಯಾರಿಗೆ ಸೇರಿದ್ದು ಹಾಗೂ ಎಲ್ಲಿಂದ ಎಲ್ಲಿಗೆ ಸಾಗಾಟ ಮಾಡಲಾಗುತ್ತಿತ್ತು ಎಂಬ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಎನ್ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
