ನವದೆಹಲಿ: ಇಲ್ಲಿನ ದ್ವಾರಕಾ ಎಕ್ಸ್ಪ್ರೆಸ್ವೇ (Dwarka Expressway) ಸುರಂಗ (Tunnel) ಮಾರ್ಗದಲ್ಲಿ ಗಂಟೆಗೆ ಸುಮಾರು 200 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಕಾರೊಂದು (Car) ಗೋಡೆಗೆ ಡಿಕ್ಕಿ (Accident) ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಡಿಕ್ಕಿಯ ರಭಸಕ್ಕೆ ಕಾರಿನ ಎಂಜಿನ್ ಬೇರ್ಪಟ್ಟು ದೂರದಲ್ಲಿ ಬಿದ್ದಿದ್ದು, ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಸುಟ್ಟುಹೋಗಿದೆ.
ಅಭಿನವ್ ಸಿಂಗ್ (22) ಮೃತ ಯುವಕ. ಈತ ಸ್ನೇಹಿತನ ‘ವೋಕ್ಸ್ವ್ಯಾಗನ್ ವರ್ಟಸ್’ (Volkswagen Virtus) ಕಾರಿನಲ್ಲಿ ಲುಧಿಯಾನದಿಂದ ಗುರುಗ್ರಾಮಕ್ಕೆ ಪ್ರಯಾಣಿಸುತ್ತಿದ್ದ. ಈ ವೇಳೆ, ಶಿವ ಮೂರ್ತಿ ಇಂಟರ್ಚೇಂಜ್ ಬಳಿ ಅಪಘಾತ ಸಂಭವಿಸಿದೆ. ಕಾರು ಗಂಟೆಗೆ ಸುಮಾರು 200 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ಈ ಪ್ರದೇಶದಲ್ಲಿ ವೇಗದ ಮಿತಿ ಗಂಟೆಗೆ 80 ಕಿ.ಮೀ ಮಾತ್ರ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 10 ವರ್ಷದ ಪ್ರೀತಿಗೆ ಮೋಸ – ಎರಡು ಮಕ್ಕಳ ತಾಯಿಯನ್ನ ಗುಟ್ಟಾಗಿ ಮದುವೆಯಾದ ಸದಾಕತ್!
ಬಿಹಾರದ ಮುಜಫರ್ಪುರದ ಸಿಂಗ್, ಗುರುಗ್ರಾಮದ ಸೆಕ್ಟರ್ 42ರಲ್ಲಿ ವಾಸಿಸುತ್ತಿದ್ದ. ಈತ ತನ್ನ ಗೆಳತಿಯನ್ನು ಭೇಟಿಯಾಗಲು ಲುಧಿಯಾನಕ್ಕೆ ಹೋಗಿದ್ದ ಎಂದು ತಿಳಿದುಬಂದಿದೆ.
ಅಪಘಾತ ಸಂಭವಿಸುವ ಸ್ವಲ್ಪ ಸಮಯಕ್ಕೂ ಮೊದಲು ಸಿಂಗ್ ಕಾರಿನ ಸ್ಪೀಡೋಮೀಟರ್ನ ವಿಡಿಯೋ ಮತ್ತು ಫೋಟೋಗಳನ್ನು ಸೆರೆಹಿಡಿದು, ಸ್ನ್ಯಾಪ್ಚಾಟ್ (Snapchat) ಮೂಲಕ ತಮ್ಮ ಸ್ನೇಹಿತರಿಗೆ ಕಳುಹಿಸಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸುರಂಗ ಮಾರ್ಗದ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಕಾರು ಅತ್ಯಂತ ವೇಗವಾಗಿ ಚಲಿಸುತ್ತಿರುವುದು ಸಹ ಸೆರೆಯಾಗಿದೆ.
ಸುರಂಗ ಮಾರ್ಗದಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿ, ಅಪಘಾತದ ಸಮಯದಲ್ಲಿ ಅಲ್ಲಿ ಹಾದುಹೋಗುತ್ತಿದ್ದ ಇತರ ವಾಹನ ಸವಾರರು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ದೆಹಲಿ ಪೊಲೀಸರು ಈ ಅಪಘಾತದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಸಿಂಗ್ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ, ನಂತರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಯುವಕನ ತಾಯಿ ಶಿಕ್ಷಕಿಯಾಗಿದ್ದು, ಬಿಹಾರದಲ್ಲಿ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅರುಣಾಚಲದಲ್ಲಿ ಭಾರೀ ಅಗ್ನಿ ಅವಘಡ – ಮೂವರು ಅಪ್ರಾಪ್ತರು ಸೇರಿ 4 ಮಂದಿ ಸಜೀವ ದಹನ
