– ಯೋಗ ಕ್ಷೇತ್ರದ 5 ದಶಕಗಳ ಸಾಧನೆಗೆ ಸಾಕ್ಷಿಯಾಗಲಿರುವ ಸಮಾರಂಭ
– ಪ್ರಶಾಂತಿ ಕುಟೀರದೊಂದಿಗೆ ಪ್ರಧಾನಿ ಮೋದಿ ಅವಿನಾಭಾವ ನಂಟು
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನ ಪ್ರಶಾಂತಿ ಕುಟೀರಕ್ಕೆ ಭೇಟಿ ನೀಡಲಿದ್ದು, ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆ (S-VYASA)ಯ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬೆಳಗ್ಗೆ 10.45ಕ್ಕೆ ಪ್ರಶಾಂತಿ ಕುಟೀರದ ಹೆಲಿಪ್ಯಾಡ್ಗೆ ಆಗಮಿಸಲಿರುವ ಪ್ರಧಾನಿ ಮೋದಿ, ಬಳಿಕ ನಡೆಯಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಅವರು, ಮಧ್ಯಾಹ್ನ 12.10ಕ್ಕೆ ಕಾರ್ಯಕ್ರಮ ಮುಗಿಸಿ ನಿರ್ಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ ಆಹ್ವಾನಿತರಿಗೆ ಪಾಸ್ಗಳನ್ನು ವಿತರಿಸಲಾಗಿದ್ದು, ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಪ್ರಶಾಂತಿ ಕುಟೀರದ ಆವರಣದಲ್ಲಿ ಸುಮಾರು 500 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೊರಭಾಗದಲ್ಲಿ ಎಲ್ಇಡಿ ಪರದೆಗಳನ್ನು ಅಳವಡಿಸಿ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಭದ್ರತಾ ಕಾರಣಗಳಿಂದ ಮಾಧ್ಯಮಗಳಿಗೂ ಪ್ರವೇಶ ನಿರ್ಬಂಧಿಸಲಾಗಿದೆ.
5 ದಶಕಗಳ ಸಾಧನೆಗೆ ಸಾಕ್ಷಿಯಾಗಲಿರುವ ಸಮಾರಂಭ
ಪ್ರಶಾಂತಿ ಕುಟೀರದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ವರ್ಷಗಳ ನಂಟಿದೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎರಡು ಬಾರಿ ಇಲ್ಲಿಗೆ ಭೇಟಿ ನೀಡಿದ್ದ ಮೋದಿ, ಯೋಗಾಭ್ಯಾಸ ಹಾಗೂ ಆವರ್ತನ ಧ್ಯಾನದ ಕುರಿತು ಮಾರ್ಗದರ್ಶನ ಪಡೆದಿದ್ದರು. ಪ್ರಶಾಂತಿ ಕುಟೀರದ ಕುಲಪತಿ ಡಾ. ನಾಗೇಂದ್ರ ಅವರು ಮೋದಿಯವರ ಯೋಗ ಗುರುವಾಗಿದ್ದು, ಅವರಿಗೆ ಯೋಗಾಭ್ಯಾಸದ ಕುರಿತು ಮಾರ್ಗದರ್ಶನ ನೀಡಿದ್ದರು. ಪ್ರಧಾನಿಯಾದ ಬಳಿಕವೂ ಮೋದಿ ಒಮ್ಮೆ ಪ್ರಶಾಂತಿ ಕುಟೀರಕ್ಕೆ ಭೇಟಿ ನೀಡಿದ್ದರು. ಇದೀಗ 4ನೇ ಬಾರಿಗೆ ಇಲ್ಲಿಗೆ ಆಗಮಿಸುತ್ತಿದ್ದಾರೆ.
ಸುವರ್ಣ ಮಹೋತ್ಸವದ ಅಂಗವಾಗಿ ಪ್ರಶಾಂತಿ ಕುಟೀರದ ಅಡ್ಮಿನಿಸ್ಟ್ರೇಟಿವ್ ಬ್ಲಾಕ್ಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದೇ ವೇಳೆ ಕೇರಳದ ತಿರುವನಂತಪುರಂನಲ್ಲಿ S-VYASA ಸಂಸ್ಥೆಯ ನೂತನ ಕ್ಯಾಂಪಸ್ಗೂ ಚಾಲನೆ ನೀಡಲಿದ್ದಾರೆ.
ಪ್ರಶಾಂತಿ ಕುಟೀರಕ್ಕೆ ಗಣ್ಯರ ಭೇಟಿ
ಪ್ರಧಾನಿ ಮೋದಿ ಆಗಮನಕ್ಕೂ ಮುನ್ನ ಸಚಿವರಾದ ರಾಮಲಿಂಗಾರೆಡ್ಡಿ, ರಿಜ್ವಾನ್ ಅರ್ಷದ್ ಹಾಗೂ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಪ್ರಶಾಂತಿ ಕುಟೀರಕ್ಕೆ ಆಗಮಿಸಿದ್ದಾರೆ. ಜನಾರ್ದನ ರೆಡ್ಡಿ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ವಾಹನಗಳನ್ನು ಒಳಗೆ ಬಿಡಲು ನಿರ್ಬಂಧವಿದ್ದ ಹಿನ್ನೆಲೆಯಲ್ಲಿ, ಗಣ್ಯರನ್ನು ಕುಟೀರದ ಸಿಬ್ಬಂದಿ ಎಲೆಕ್ಟ್ರಿಕ್ ಕಾರಿನಲ್ಲಿ ಒಳಾಂಗಣಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.
ಪ್ರಶಾಂತಿ ಕುಟೀರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರಧಾನಿ ಭೇಟಿಯ ಹಿನ್ನೆಲೆ ಪ್ರಶಾಂತಿ ಕುಟೀರದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಭದ್ರತಾ ವ್ಯವಸ್ಥೆಗಾಗಿ ಒಟ್ಟು 1,200 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
– 4 ಪೊಲೀಸ್ ವರಿಷ್ಠಾಧಿಕಾರಿಗಳು (SP)
– 20 ಡಿವೈಎಸ್ಪಿಗಳು (DySP)
– 60 ಪೊಲೀಸ್ ಇನ್ಸ್ಪೆಕ್ಟರ್ಗಳು
– 100 ಸಬ್ ಇನ್ಸ್ಪೆಕ್ಟರ್ಗಳು
– 200 ಹೋಮ್ ಗಾರ್ಡ್ಗಳು
ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಪ್ರಶಾಂತಿ ಕುಟೀರದ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದ್ದು, ಕಾರ್ಯಕ್ರಮ ಸುಗಮವಾಗಿ ನಡೆಯಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

